ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: 2ನೇ ಡೋಸ್ ಪಡೆಯಲು ಕೋವ್ಯಾಕ್ಸಿನ್ ಲಭ್ಯವೇ ಇಲ್ಲ!

ಕೋವಿಡ್ ಲಸಿಕೆ: ನೀಗದ ಅಭಾವ
Last Updated 30 ಜುಲೈ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್–19 ನಿರೋಧಕ ಲಸಿಕೆಯ ಅಭಾವ ತೀವ್ರವಾಗಿದೆ.

ಸೋಂಕಿನ 3ನೇ ಅಲೆ ಬರಬಹುದು ಎಂಬ ವರದಿಯನ್ನು ತಜ್ಞರು ನೀಡಿದ್ದಾರೆ. ಅದಕ್ಕಿಂತ ಮುಂಚೆ ‘ರಕ್ಷಾ ಕವಚ’ ಎನ್ನಲಾದ ಲಸಿಕಾ ಅಭಿಯಾನ ಚುರುಕುಗೊಳಿಸಬೇಕು ಎಂಬ ಸಲಹೆಗಳೂ ಅವರಿಂದ ಬಂದಿವೆ. ಆದರೆ, ಇಲ್ಲಿ ಲಸಿಕಾಕರಣ ಕುಂಟುತ್ತಾ ಸಾಗುತ್ತಿದೆ. ಬೇಡಿಕೆಯಷ್ಟು ಪೂರೈಕೆ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ.

ಅಭಿಯಾನ ಆರಂಭ ಆದಾಗಿನಿಂದಲೂ ಜನರು ಪರದಾಡುವುದು ತಪ್ಪಿಲ್ಲ. ಅದರಲ್ಲೂ ವಿಶೇಷವಾಗಿ 2ನೇ ಡೋಸ್‌ ಬಾಕಿ ಇರುವವರಿಗೆ ಲಭ್ಯವಾಗುತ್ತಿಲ್ಲ. ಇದರಿಂದಾಗಿ, ‘ಡೋಸ್ ಪಡೆಯಬೇಕಾದ ಅವಧಿ ಮೀರುವ’ ಆತಂಕ ಅವರನ್ನು ಕಾಡುತ್ತಿದೆ.

ಅಸಮಾಧಾನಕ್ಕೆ ಕಾರಣ: ಶಾಸಕರು ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆಸುತ್ತಿದ್ದ ಶಿಬಿರಗಳು ಕೂಡ ಸ್ಥಗಿತಗೊಂಡಿವೆ. ‘ಎಲ್ಲರಿಗೂ ಉಚಿತ, ತಪ್ಪದೆ ಪಡೆದುಕೊಳ್ಳಿ’ ಎಂದು ಸರ್ಕಾರ ಅಬ್ಬರದ ಪ್ರಚಾರ ಮಾಡುತ್ತಿದೆ. ಆದರೆ, ವಾಸ್ತವವಾಗಿ ಕೇಂದ್ರಗಳಲ್ಲಿ ಲಸಿಕೆ ಲಭ್ಯವಾಗುತ್ತಿಲ್ಲ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

‘ಇಲ್ಲಿನ ಶಾಸಕ ಅನಿಲ ಬೆನಕೆ ಅವರ ನೇತೃತ್ವದಲ್ಲಿ ನಡೆದಿದ್ದ ಶಿಬಿರದಲ್ಲಿ ಲಸಿಕೆ ಪಡೆದಿದ್ದೆ. ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿತ್ತು. ಜುಲೈ 19ರಂದು 2ನೇ ಡೋಸ್ ಪಡೆಯಬೇಕಿತ್ತು. ಆದರೆ, ಆಸ್ಪತ್ರೆಗಳಲ್ಲಿ ವಿಚಾರಿಸಿದರೆ ಲಭ್ಯವಿಲ್ಲ ಎನ್ನುತ್ತಿದ್ದಾರೆ. ಹಲವು ದಿನಗಳಿಂದಲೂ ಬಂದಿಲ್ಲ. ಬಂದಾಗ ತಿಳಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳನ್ನು ವಿಚಾರಿಸಿದರೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಆಸ್ಪತ್ರೆಗೆ ಹೋಗುವುದು, ಬರಿಗೈಲಿ ವಾಪಸಾಗುವುದೇ ಆಗಿದೆ’ ಎಂದು ಶಾಹೂನಗರದ ನಿವಾಸಿ ಮಂಗಳಾ ಪಾಟೀಲ ತಿಳಿಸಿದರು.

‘ಶಿಬಿರ ನಡೆಸಿದವರು 2ನೇ ಡೋಸ್‌ ಕೊಡಿಸುವ ಬಗ್ಗೆಯೂ ಕಾಳಜಿ ವಹಿಸಬೇಕಿತ್ತು’ ಎಂದು ಅವರು ಹೇಳಿದರು. ಒಮ್ಮೆಗೆ ತಲಾ 1 ಲಕ್ಷ ಡೋಸ್ ಹಂಚಿಕೆ ಮಾಡುವಂತೆ ಇಲ್ಲಿನ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ್ತು ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರು ಅಗಿನ ಆರೋಗ್ಯ ಸಚಿವರಾಗಿದ್ದ ಡಾ.ಕೆ. ಸುಧಾಕರ್‌ ಅವರಿಗೆ ಮನವಿ ಮಾಡಿದ್ದರು. ಆದರೆ, ಹಂಚಿಕೆ ಸಾಧ್ಯವಾಗಿಲ್ಲ.

ಸುಧಾರಿಸಿಲ್ಲ: ‘ಕಣಬರ್ಗಿಯ ಆರೋಗ್ಯ ಕೇಂದ್ರದಲ್ಲಿ 2ನೇ ಡೋಸ್ ಲಸಿಕೆ ಸಿಗದೆ ಜನರು ಪರದಾಡುತ್ತಿದ್ದಾರೆ. ಪೂರೈಕೆ ಇಲ್ಲವೆಂದು ಅಲ್ಲಿನ ಸಿಬ್ಬಂದಿ ಹೇಳುತ್ತಿದ್ದಾರೆ’ ಎಂದು ನಿವಾಸಿ ‍ಪ್ರಕಾಶ ‍ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೇಡಿಕೆಯಷ್ಟು ಪೂರೈಕೆ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ. ದೊಡ್ಡ ಜಿಲ್ಲೆ ಆಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪೂರೈಸುವಂತೆ ಸರ್ಕಾರದ ಗಮನಕ್ಕೆ ಹಲವು ಬಾರಿ ತಂದಿದ್ದೇವೆ. ಆದರೆ, ಪರಿಸ್ಥಿತಿ ಸುಧಾರಿಸಿಲ್ಲ. ನಿತ್ಯವೂ ಸರಾಸರಿ 10ಸಾವಿರ ಡೋಸ್‌ ನೀಡುವುದು (ಅಭಿಯಾನ ಅರಂಭವಾದ ದಿನ 1 ಲಕ್ಷ ಮಂದಿಗೆ ನೀಡಲಾಗಿದ್ದು ಹೊರತುಪಡಿಸಿ) ಇನ್ನೂ ಸಾಧ್ಯವಾಗಿಲ್ಲ’ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

160 ದಿನಗಳು ಬೇಕಾಗಲಿವೆ!
ಜಿಲ್ಲೆಯಲ್ಲಿ ಮೊದಲ ಡೋಸ್‌ ಗುರಿ 36,32,203 (18 ವರ್ಷ ಮೇಲಿನವರು) ಇದ್ದು, ಗುರುವಾರದವರೆಗೆ 13,23,254 ಮಂದಿಗೆ ನೀಡಲಾಗಿದೆ. ಅಂದರೆ, ಶೇ 34ರಷ್ಟು ಮಾತ್ರವೇ ಸಾಧನೆಯಾಗಿದೆ. ಬಾಕಿಯು ಇನ್ನೂ ದೊಡ್ಡ ಪ್ರಮಾಣದಲ್ಲೆ ಇದೆ.

4,25,755 ಮಂದಿಗೆ 2ನೇ ಡೋಸ್‌ ಗುರಿ ಇದ್ದು, ಇದರಲ್ಲಿ 3,20,967 ಮಂದಿಗೆ ದೊರೆತಿದೆ. ಕಾಲೇಜು ವಿದ್ಯಾರ್ಥಿಗಳು, ಬೋಧಕರು, ಬೋಧಕೇತರ ಸಿಬ್ಬಂದಿಗೆ ಮೊದಲ ಡೋಸ್ ಗುರಿ 1,37,168 ಇದ್ದು, ಈವರೆಗೆ 1 ಲಕ್ಷ ಮಂದಿಗೆ ಸಿಕ್ಕಿದೆ. ಇನ್ನೂ 37,168 ಮಂದಿಗೆ ಬಾಕಿ ಇದೆ. ಆರೋಗ್ಯ ಕೇಂದ್ರಗಳಲ್ಲಿ ನಿತ್ಯ ಸರಾಸರಿ 50 ಮಂದಿಗಷ್ಟೆ ಸಿಗುತ್ತಿದೆ.

ಜಿಲ್ಲೆಗೆ 2–3 ದಿನಗಳಿಗೆ 18ಸಾವಿರಿಂದ 45ಸಾವಿರ ಲಸಿಕೆಯನ್ನು ಮೂರ್ನಾಲ್ಕು ದಿನಗಳಿಗೊಮ್ಮೆ ‍ಪೂರೈಸಲಾಗುತ್ತಿದೆ. ಇದನ್ನು ಎಲ್ಲ ಕಡೆಗೂ ಹಂಚಲು ಅಧಿಕಾರಿಗಳು ಪರಡಾಡುತ್ತಿದ್ದಾರೆ. ಜಿಲ್ಲೆಗೆ ನಿತ್ಯ ಸರಾಸರಿ 15ಸಾವಿರ ಡೋಸ್‌ ಪೂರೈಸಿದರೆ ಜಿಲ್ಲೆಯ ಎಲ್ಲ ಫಲಾನುಭವಿಗಳಿಗೆ ಮೊದಲ ಡೋಸ್‌ ಕೊಡುವುದಕ್ಕೆ ಬರೋಬ್ಬರಿ 160 ದಿನಗಳು ಬೇಕಾಗಲಿವೆ ಎನ್ನುತ್ತಾರೆ ಅಧಿಕಾರಿಗಳು.‌

ಕೆಲವೇ ದಿನಗಳಲ್ಲಿ ಸಿಗಬಹುದು
ಹೆಚ್ಚಿನ ಲಸಿಕೆ ಪೂರೈಸುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಹಂತ ಹಂತವಾಗಿ ಬರುತ್ತಿರುವುದನ್ನು ಹಂಚಿಕೆ ಮಾಡಲಾಗುತ್ತಿದೆ. ಕೋವ್ಯಾಕ್ಸಿನ್ ಲಸಿಕೆ ಒಂದು ವಾರದಿಂದ ಸರಬರಾಜಾಗಿಲ್ಲ. ಕೆಲವೇ ದಿನಗಳಲ್ಲಿ ಸಿಗಬಹುದು.
–ಡಾ.ಈಶ್ವರ ಗಡಾದ, ಜಿಲ್ಲಾ ಲಸಿಕಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT