ಸೋಮವಾರ, ಮೇ 17, 2021
21 °C

ಬೆಳಗಾವಿ: ಆಲಿಕಲ್ಲು ಮಳೆ, ಬೆಳೆಗಳಿಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲಸಂಗ (ಬೆಳಗಾವಿ ಜಿಲ್ಲೆ): ಅಥಣಿ ಪೂರ್ವ ಭಾಗದ ಗ್ರಾಮಗಳಲ್ಲಿ ಮಂಗಳವಾರ ಗುಡುಗು, ಸಿಡಿಲು ಸಹಿತ ಸುರಿದ ಆಲಿಕಲ್ಲು ಮಳೆಯಿಂದಾಗಿ ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ, ಮಾವು, ತರಕಾರಿ ಬೆಳೆಗಳು ಹಾಳಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ರೈತರು ಕಂಗಾಲಾಗಿದ್ದಾರೆ.

ವಾರದ ಸಂತೆಯ ದಿನವಾದ್ದರಿಂದ ವ್ಯಾಪಾರಿಗಳು ಮತ್ತು ಜನ ಪರದಾಡಿದರು. ಮಾರಾಟಕ್ಕೆ ತಂದಿದ್ದ ವಸ್ತುಗಳು ನೀರುಪಾಲಾಗಿ ವ್ಯಾಪಾರಿಗಳು ನಷ್ಟ ಅನುಭವಿಸಬೇಕಾಯಿತು.

ಪ್ರಸಕ್ತ ವರ್ಷದ ಆರಂಭದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ದ್ರಾಕ್ಷಿ ಗಿಡಗಳ ಎಲೆಗಳೆಲ್ಲ ಉದುರಿ ಶೇ 90ರಷ್ಟು ಬೆಳೆ ಹಾಳಾಗಿತ್ತು. ಸದ್ಯಕ್ಕೆ ಅಳಿದುಳಿದ ಬೆಳೆ ಕಟಾವಿಗೆ ಬಂದಿತ್ತು.

‘ವರ್ಷದಿಂದ ವರ್ಷಕ್ಕೆ ಒಂದಿಲ್ಲೊಂದು ಹೊಡೆತದಿಂದ ರೈತ ಸಂಕಷ್ಟಕ್ಕೀಡಾಗುತ್ತಿದ್ದಾನೆ. ಅಕಾಲಿಕ ಮಳೆಯಿಂದ ನಷ್ಟ ಅನುಭವಿಸಿರುವ ನಮಗೆ ಸರ್ಕಾರದಿಂದ ಸಮರ್ಪಕ ಪರಿಹಾರ ದೊರೆಯಬೇಕು’ ಎಂದು ಬನ್ನೂರದ ದ್ರಾಕ್ಷಿ ಬೆಳೆಗಾರ ಎ.ಕೆ. ಹನಗಂಡಿ ಕೋರಿದರು.

‘ದ್ರಾಕ್ಷಿ ಕಟಾವು ಮಾಡುವ ಹಂತಕ್ಕೆ ಬಂದಿತ್ತು. ಮಳೆಯಿಂದ ಹಾನಿಯಾಗಿದೆ. ಶೆಡ್ಡಲ್ಲಿ ತೊಯ್ದಿರುವ ಒಣ ದ್ರಾಕ್ಷಿ ಗುಣಮಟ್ಟ ಕಳೆದುಕೊಳ್ಳಲಿದೆ. ಆಲಿಕಲ್ಲು ಮಳೆಗೆ ಹಾಳಾದ ಕಲ್ಲಂಗಡಿ ಬೆಳೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ತೋಟಗಾರಿಕೆ ಅಧಿಕಾರಿ ವಿನೋದ ಚುನುಮುರಿ ತಿಳಿಸಿದರು.

ಐಗಳಿ ವರದಿ

ಐಗಳಿ: ಮೂರು ದಿನಗಳಿಂದ ಜೋರು ಗಾಳಿ, ಗುಡುಗು ಸಹಿತ ಆಗಾಗ ಬೀಳುತ್ತಿರುವ ಮಳೆಯಿಂದಾಗಿ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದಾರೆ. ದ್ರಾಕ್ಷಿ ಹಣ್ಣಿಗೆ  ಯೋಗ್ಯ ದರ ಸಿಗಲಿವೆಂದು, ಶೆಡ್‌ಗಳಲ್ಲಿ ಒಣಗಲು ಹಾಕಿದ್ದ ದ್ರಾಕ್ಷಿ ಮಳೆ ನೀರಿನಿಂದ ನೆನೆದಿದೆ. ಇದರಿಂದಾಗಿ ನಷ್ಟ ಉಂಟಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ್ದ ತೋಟಗಾರಿಕೆಯ ಅಧಿಕಾರಿ ಅಕ್ಷಯಕುಮಾರ ಉಪಾಧ್ಯಾಯ, ‘ಅಕಾಲಿಕ ಮಳೆಯಿಂದ ಐಗಳಿ, ಕೋಹಳ್ಳಿ, ಕಕಮರಿ, ರಾಮತೀರ್ಥ, ಅರಟಾಳ, ಕೊಟ್ಟಲಗಿ ಮೊದಲಾದ ಕಡೆಗಳಲ್ಲಿ ಒಣ ದ್ರಾಕ್ಷಿಗೆ ಹಾನಿಯಾಗಿದೆ’ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು