ಭಾನುವಾರ, ಡಿಸೆಂಬರ್ 4, 2022
19 °C
ಸೆ.26ಕ್ಕೆ ಘಟಸ್ಥಾಪನೆ ಕಾರ್ಯಕ್ರಮ, ಮುನ್ನಾದಿನವೇ ಯಲ್ಲಮ್ಮನ ಗುಡ್ಡಕ್ಕೆ ಬಂದು ನೆಲೆಸಿದ ಭಕ್ತರ ದಂಡು

ನವರಾತ್ರಿಗೆ ‘ಏಳುಕೊಳ್ಳದ ನಾಡು’ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಗರಗೋಳ: ‘ಏಳುಕೊಳ್ಳದ ನಾಡು’ ಯಲ್ಲಮ್ಮನಗುಡ್ಡದಲ್ಲಿ ಈಗ ಹಬ್ಬದ ವಾತಾವರಣ ನಿರ್ಮಾಣವಾಗಿದೆ. 9 ದಿನಗಳ ಕಾಲ ಜರುಗಲಿರುವ ನವರಾತ್ರಿ ಉತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿವೆ. ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಲು ಯಲ್ಲಮ್ಮ ದೇವಸ್ಥಾನ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಸೆ.26ರಂದು ಸಂಜೆ 6 ಗಂಟೆಗೆ ಯಲ್ಲಮ್ಮ ದೇವಿ ಗರ್ಭಗುಡಿಯಲ್ಲಿ ಘಟಸ್ಥಾಪನೆ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಜನಪ್ರತಿನಿಧಿಗಳು, ಗಣ್ಯರು ಹಾಗೂ ಅಧಿಕಾರಿಗಳು ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಸಾಂಕೇತಿಕವಾಗಿ ನವರಾತ್ರಿ ಉತ್ಸವ ಆಚರಿಸಲಾಗಿತ್ತು. ಈ ಬಾರಿ ಕೋವಿಡ್‌ ಹಾವಳಿ ತಗ್ಗಿದ್ದರಿಂದ ಸಂಭ್ರಮ ಮೂಡಿದೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ, ಅಲಂಕಾರ ಮತ್ತು ನೈವೇದ್ಯ ನೆರವೇರಲಿದೆ. ಅ.4ರಂದು ಆಯುಧಪೂಜೆ ಮತ್ತು 5ರಂದು ಯಲ್ಲಮ್ಮನಗುಡ್ಡ–ಉಗರಗೋಳ ಮಾರ್ಗದಲ್ಲಿರುವ ಬಣ್ಣೆಮ್ಮ ದೇವಸ್ಥಾನ ಬಳಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ.

ನವರಾತ್ರಿ ಅಂಗವಾಗಿ ಯಲ್ಲಮ್ಮನಗುಡ್ಡಕ್ಕೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಲಕ್ಷ ಲಕ್ಷ ಭಕ್ತರು ಬರುವುದು ರೂಢಿ. 5, 7 ಮತ್ತು 9ನೇ ಘಟಗಳಂದು ಯಲ್ಲಮ್ಮನಗುಡ್ಡ ಭಕ್ತರಿಂದ ತುಂಬಿ ತುಳುಕಲಿದೆ. ಭಾನುವಾರ ಸಂಜೆಯಿಂದಲೇ ಯಲ್ಲಮ್ಮನ ಸನ್ನಿಧಿಯತ್ತ ಭಕ್ತರು ಮುಖಮಾಡಿದ್ದಾರೆ. ನವರಾತ್ರಿ ಅಂಗವಾಗಿ ವ್ಯಾಪಾರಸ್ಥರು ತಮ್ಮ ಅಂಗಡಿ-ಮುಂಗಟ್ಟುಗಳಿಗೆ ಬಣ್ಣ ಬಳಿದು ಸಿಂಗರಿಸಿದ್ದಾರೆ.

ಪೊಲೀಸರ ನಿಯೋಜನೆ: ಯಲ್ಲಮ್ಮನಗುಡ್ಡದಲ್ಲಿ ಭದ್ರತೆಗಾಗಿ 1 ಡಿಎಆರ್‌ ತುಕಡಿ, ಇಬ್ಬರು ಸಿಪಿಐ, 8 ಪಿಎಸ್‌ಐ, 15 ಎಎಸ್‌ಐ, 100 ಪೊಲೀಸರು ನಿಯೋಜಿಸಲಾಗಿದೆ. ಸವದತ್ತಿ ನೂಲಿನ ಗಿರಣಿ, ಯಲ್ಲಮ್ಮನಗುಡ್ಡ, ಜೋಗುಳಬಾವಿ ಮಾರ್ಗವಾಗಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಗುಡ್ಡಕ್ಕೆ ಸಂಪರ್ಕಿಸುವ ಮಾರ್ಗಗಳಲ್ಲಿ ಬ್ಯಾರಿಕೇಡ್ ಅಳವಡಿಸಿದ್ದು, ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಲಾಗಿದೆ ಎಂದು ಸವದತ್ತಿ ಸಿಪಿಐ ಜೆ.ಕರುಣೇಶಗೌಡ ತಿಳಿಸಿದ್ದಾರೆ.

ನಿಗದಿತ ಸ್ಥಳದಲ್ಲೇ ಎಣ್ಣೆ ಹಾಕಿ: ‘ನವರಾತ್ರಿ ವೇಳೆ ಯಲ್ಲಮ್ಮನಗುಡ್ಡಕ್ಕೆ ಬರುವ ಪ್ರತಿ ಭಕ್ತರೂ ದೀಪಕ್ಕೆ ಎಣ್ಣೆ ಹಾಕುವ ಸಂಪ್ರದಾಯವಿದೆ. ಹಾಗಾಗಿ ಯಲ್ಲಮ್ಮ ದೇವಿ ಗರ್ಭಗುಡಿ ಎದುರು ಹಾಗೂ ದೇವಸ್ಥಾನ ಪ್ರಾಂಗಣದಲ್ಲಿ ದೀಪಗಳನ್ನು ಅಳವಡಿಸಲಾಗಿದೆ. ನಿಗದಿತ ಸ್ಥಳದಲ್ಲೇ ಭಕ್ತರು ಎಣ್ಣೆ ಹಾಕಬೇಕು’ ಎಂದು ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಜೀರಗ್ಯಾಳ ಕೋರಿದ್ದಾರೆ.

ವಿಶೇಷ ಬಸ್ ಸೌಲಭ್ಯ: ‘ಬೆಳಗಾವಿಯಿಂದ ಯಲ್ಲಮ್ಮನಗುಡ್ಡಕ್ಕೆ ತೆರಳುವ ಭಕ್ತರಿಗೆ ಅನುಕೂಲ ಕಲ್ಪಿಸಲು ವಿಶೇಷ ಬಸ್ ಸೌಲಭ್ಯ ಕಲ್ಪಿಸಿದ್ದೇವೆ. ಈಗಾಗಲೇ 75 ಬಸ್‌ಗಳು ಕಾರ್ಯಾಚರಣೆ ಆರಂಭಿಸಿವೆ. ಭಕ್ತರಿಂದ ಬೇಡಿಕೆ ಬಂದರೆ, ಇನ್ನಷ್ಟು ಬಸ್‌ಗಳನ್ನು ಬಿಡಲಾಗುವುದು’ ಎಂದು ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ವೈ.ನಾಯಕ ಮತ್ತು ವಿಭಾಗೀಯ ಸಂಚಾರ ಅಧಿಕಾರಿ ಕೆ.ಕೆ.ಲಮಾಣಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು