ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಹ ಕಾರ್ಮಿಕರಿಗೆ ಪರಿಹಾರ ತಲುಪಿಸಿ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಾಕೀತು
Last Updated 9 ಜೂನ್ 2021, 8:34 IST
ಅಕ್ಷರ ಗಾತ್ರ

ಬೆಳಗಾವಿ: ‘ಕೋವಿಡ್–19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ 11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಪರಿಹಾರ ಧನ ಘೋಷಿಸಿದೆ. ಅದನ್ನು ಎಲ್ಲ ಅರ್ಹ ಕಾರ್ಮಿಕರಿಗೆ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಾಕೀತು ಮಾಡಿದರು.

ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳೊಂದಿಗೆ ಇಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕ್ಷೌರಿಕರು, ಅಗಸರು, ಟೈಲರ್‌ಗಳು, ಹಮಾಲಿ, ಚಿಂದಿ ಆಯುವವರು, ಕುಂಬಾರರು, ಭಟ್ಟಿ ಕಾರ್ಮಿಕರು, ಅಕ್ಕಸಾಲಿಗರು, ಮೆಕ್ಯಾನಿಕ್, ಕಮ್ಮಾರರು, ಗೃಹ ಕಾರ್ಮಿಕ (ಮನೆಗೆಲಸದವರು)ರು ಹಾಗೂ ಚಮ್ಮಾರರಿಗೆ ತಲಾ ₹ 2ಸಾವಿರ ಪರಿಹಾರ ಘೋಷಿಸಲಾಗಿದೆ. ಅರ್ಹ ಕಾರ್ಮಿಕರು ಅಗತ್ಯ ದಾಖಲೆಗಳೊಂದಿಗೆ ಸೇವಾಸಿಂಧು ಪೋರ್ಟಲ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಆಯಾ ಕಾರ್ಮಿಕ ಸಂಘ-ಸಂಸ್ಥೆಗಳವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನೆರವಾಗಬೇಕು. ಮಾರ್ಗಸೂಚಿ ಅನುಸರಿಸಬೇಕು’ ಎಂದು ಸೂಚಿಸಿದರು.

ಉದ್ಯೋಗ ದೃಢೀಕರಣ ಪತ್ರ ನೀಡಿ:

‘ಅರ್ಜಿ ಸಲ್ಲಿಸುವ ಕಾರ್ಮಿಕರಿಗೆ ಸ್ವಯಂಘೋಷಣೆ ಪತ್ರ ಆಧರಿಸಿ ಸಂಬಂಧಿಸಿದ ಅಧಿಕಾರಿಗಳು ಉದ್ಯೋಗ ದೃಢೀಕರಣ ಪತ್ರ ನೀಡಲಿದ್ದಾರೆ. ವಿನಾಕಾರಣ ಅರ್ಜಿದಾರರನ್ನು ಶತಾಯಿಸಬಾರದು. ಸ್ಥಳೀಯವಾಗಿ ಕೆಲಸ ಮಾಡುವ ಕಾರ್ಮಿಕರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇರುತ್ತದೆ. ಇದನ್ನು ಆಧರಿಸಿ ಉದ್ಯೋಗ ದೃಢೀಕರಣ ಪತ್ರ ನೀಡಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಕಾರ್ಮಿಕರ ಸಂಘಟನೆಗಳು ಒಂದೇ ಕಡೆ ಅರ್ಜಿ ಸಲ್ಲಿಕೆಗೆ ವ್ಯವಸ್ಥೆ ಮಾಡಬೇಕು. ಆಗ ಕಾರ್ಮಿಕ ಇಲಾಖೆಯ ಅಧಿಕಾರಿಗಳೇ ಆ ಸ್ಥಳಗಳಿಗೆ ಬಂದು ನೆರವು ನೀಡಲಿದ್ದಾರೆ’ ಎಂದರು.

ಉಪ ಕಾರ್ಮಿಕ ಆಯುಕ್ತ ವೆಂಕಟೇಶ ಶಿಂದಿಹಟ್ಟಿ, ‘ಸೇವಾಸಿಂಧು ಮೂಲಕ ಅಪ್‌ಲೋಡ್‌ ಮಾಡಿದರೆ ಅವರ ಅರ್ಜಿ ನೇರವಾಗಿ ಕಾರ್ಮಿಕ ಇಲಾಖೆಗೆ ಬರುತ್ತದೆ. ಈವರೆಗೆ 1,112 ಅರ್ಜಿಗಳು ಬಂದಿದ್ದು, ನಿಯಮಾವಳಿ ಪ್ರಕಾರ ಪರಿಶೀಲಿಸಿ ಪರಿಹಾರ ಮಂಜೂರು ಮಾಡಲಾಗುವುದು’ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಕಾರ್ಮಿಕ ಅಧಿಕಾರಿ ತರನ್ನುಂ ಬೆಂಗಾಲಿ ಇದ್ದರು.

‘ಏಜೆಂಟರ ಮಧ್ಯಸ್ಥಿಕೆಗೆ ಅವಕಾಶ ಬೇಡ’

‘ಪರಿಹಾರ ತಲುಪಿಸುವಲ್ಲಿ ಯಾವುದೇ ಕಾರಣಕ್ಕೂ ಏಜೆಂಟರು ಮಧ್ಯಸ್ಥಿಕೆ ವಹಿಸದಂತೆ ಎಚ್ಚರ ವಹಿಸಬೇಕು’ ಎಂದು ಹಿರೇಮಠ ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದು, ಅವರಿಗೆ ನೆರವು ತಲುಪಿಸುವುದು ಸುಲಭ. ಅಂತೆಯೇ ಅಸಂಘಟಿತ ಕಾರ್ಮಿಕರಿಗೆ ಕೂಡ ತಲುಪಿಸಬೇಕು. ಅಗತ್ಯ ಪ್ರಮಾಣಪತ್ರ ನೀಡಲು ಇತರ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಆದಷ್ಟು ಬೇಗನೆ ನೆರವು ತಲುಪಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು–ಕಾರ್ಮಿಕ ಸಂಘಟನೆಗಳ ಮುಖಂಡರು ಸಮನ್ವಯದಿಂದ ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ತಾಲ್ಲೂಕು ಮಟ್ಟದಲ್ಲಿರುವ ಕಾರ್ಮಿಕ ಇಲಾಖೆ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಲ್ಲಿರುವ ಅರ್ಹ ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ನೆರವು ತಲುಪಿಸಬೇಕು. ಕಳೆದ ಬಾರಿ ಯಾವ ಮಾನದಂಡ ಆಧರಿಸಿ ಉದ್ಯೋಗ ಪ್ರಮಾಣಪತ್ರ ನೀಡಬೇಕು ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಆದ್ದರಿಂದ ಕೆಲವು ಕಡೆ ವಿಳಂಬವಾಗಿದೆ. ಆದರೆ, ಈ‌ ಬಾರಿ ಸ್ವಯಂ ಘೋಷಣೆ ಆಧರಿಸಿ ಉದ್ಯೋಗ ಪ್ರಮಾಣಪತ್ರ ನೀಡಬೇಕು ಎಂದು ಸೂಚಿಸಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಎಚ್‌.ವಿ. ದರ್ಶನ್‌ ಹೇಳಿದರು.

ಮುಖಂಡರು ಹೇಳಿದ್ದೇನು?

* ಸರ್ಕಾರ ಘೋಷಿಸಿರುವ ನೆರವು ಪಡೆಯಲು ನಿಗದಿಪಡಿಸಿರುವ ಪ್ರಕ್ರಿಯೆ ಕ್ಲಿಷ್ಟಕರವಾಗಿದೆ.

* ಇದನ್ನು ಸರಳೀಕರಿಸಿದಾಗ ಮಾತ್ರ ಅಸಂಘಟಿತ ಕಾರ್ಮಿಕರು ಪ್ರಯೋಜನ ಪಡೆಯಬಹುದು.

* ಒಟಿಪಿ ಬದಲಿಗೆ ಸರಳ ಪ್ರಕ್ರಿಯೆ ಅನುಸರಿಸಬೇಕು.

* ಕ್ಷೌರಿಕ ವೃತ್ತಿನಿರತರಿಗೆ ಕೂಡ ಕೋವಿಡ್ ನಿರೋಧಕ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT