ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಮಕ್ಕಳಿಗೂ ಲಸಿಕೆ ನೀಡಲು ಕ್ರಮ: ಜಿಲ್ಲಾಧಿಕಾರಿ

ಫೆ.22ರಂದು ಇಂದ್ರಧನುಷ್ ಲಸಿಕಾ ಅಭಿಯಾನ: ಜಿಲ್ಲಾಧಿಕಾರಿ
Last Updated 15 ಫೆಬ್ರುವರಿ 2021, 13:41 IST
ಅಕ್ಷರ ಗಾತ್ರ

ಬೆಳಗಾವಿ: ‘ಎಲ್ಲ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಲಸಿಕೆ ದೊರೆಯಬೇಕು. ಈ ನಿಟ್ಟಿನಲ್ಲಿ ಶಿಕ್ಷಣ, ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ಎಲ್ಲ ಇಲಾಖೆಗಳಿಂದಲೂ ಸಹಕಾರ ಕೊಡಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು.

ಇಲ್ಲಿ ಸೋಮವಾರ ನಡೆದ ‘ತೀವ್ರಗೊಂಡ ಮಿಷನ್ ಇಂದ್ರಧನುಷ್ 3.0’ ಲಸಿಕಾ ಮತ್ತು ಸಾರ್ವತ್ರಿಕ ಲಸಿಕಾಕರಣ, ಪಲ್ಸ್ ಪೋಲಿಯೊ ಕಾರ್ಯಕ್ರಮದ ಜಿಲ್ಲಾಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಲಸಿಕೆ ಪಡೆದುಕೊಳ್ಳಲು ಅರ್ಹ ವಯೋಮಾನದ ಮಕ್ಕಳ ಪಟ್ಟಿಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳುಸಿದ್ಧಪಡಿಸಬೇಕು. ಖಾಸಗಿ ವೈದ್ಯರು ಲಸಿಕೆಯ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡಬೇಕು’ ಎಂದು ಸೂಚಿಸಿದರು.

ಮುಂದಾಗಬೇಕು:

ಕೋವಿಡ್ ಲಸಿಕೆಯ ವಿತರಣೆ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿ, ‘ಇಲಾಖೆಯಿಂದ ಮಾಡಲಾದ ಪಟ್ಟಿಯಲ್ಲಿರುವ ಎಲ್ಲರೂ ಲಸಿಕೆ ತೆಗೆದುಕೊಳ್ಳಲು ಸ್ವಯಂಪ್ರೇರಣೆಯಿಂದ ಮುಂದಾಗಬೇಕು. ಲಸಿಕೆ ತೆಗೆದುಕೊಂಡಾಗ ಜ್ವರ ಬರುವುದು ಸಾಮಾನ್ಯ. ಪಡೆದ ನಂತರ ಮದ್ಯ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮಗಳು ಆದ ಬಗ್ಗೆ ಇದುವರೆಗೂ ವರದಿಯಾಗಿಲ್ಲ. ಇಲ್ಲಿಯವರೆಗೆ ಅಂತಹ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಲಸಿಕೆ ತೆಗೆದುಕೊಂಡರೆ, ಕೋವಿಡ್ 2ನೇ ಅಲೆಯನ್ನು ಎದುರಿಸಬಹುದು’ ಎಂದು ತಿಳಿಸಿದರು.

ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಐ.‍ಪಿ. ಗಡಾದ ಮಾತನಾಡಿ, ‘ಈಗಾಗಲೇ ಜಿಲ್ಲೆಯಲ್ಲಿ ಸಮೀಕ್ಷೆ ಮಾಡಲಾಗಿದೆ. ಫೆ. 22ರಂದು ಲಸಿಕಾ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಮಕ್ಕಳು ಮತ್ತು ಗರ್ಭಣಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಳ್ಳಿ, ಗುಡ್ಡ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ಲಸಿಕೆ ನೀಡಲು ವಾಹನ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

ಕರೆ ತರಬೇಕು:

‘ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ವಿಶೇಷವಾಗಿ ತಾಯಂದಿರಿಗೆ ಲಸಿಕೆಗಳ ಬಗ್ಗೆ ಮಾಹಿತಿ ನೀಡಿ, ತಮ್ಮ ಮಕ್ಕಳನ್ನು ಲಸಿಕಾ ಕೇಂದ್ರಗಳಿಗೆ ಕರೆತರುವಂತೆ ಮಾಡಬೇಕು. ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಎಲ್ಲ ವಸತಿನಿಲಯಗಳಿಗೆ ಲಸಿಕೆ ನೀಡಲಾಗುವುದು’ ಎಂದು ತಿಳಿಸಿದರು.

‘ಮೊದಲನೇ ಹಂತದ ಲಸಿಕೆ ಪಡೆದುಕೊಂಡ ನಂತರ 2ನೇ ಹಂತದ ಲಸಿಕೆಯ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಸರಿಯಾದ ಸಮಯದಲ್ಲಿ ಲಸಿಕೆ ಪಡೆದು 9 ಮಾರಕ ರೋಗಗಳಿಂದ ರಕ್ಷಿಸಿಕೊಳ್ಳಬೇಕು’ ಎಂದರು.

‘ಇಟ್ಟಿಗೆ ಕೆಲಸ, ಕಲ್ಲು ಕ್ವಾರಿ ಹಾಗೂ ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಜನರ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮದ ಯಶಸ್ಸಿಗೆ ಕಾರ್ಮಿಕ ಇಲಾಖೆ ಸಹಕಾರ ಕೊಡಬೇಕು’ ಎಂದು ಹೇಳಿದರು.

‘ಬೆಳಗಾವಿಯಲ್ಲಿ ಮೂರು ಮಿಲಿಟರಿ ಪ್ರದೇಶಗಳಿವೆ. 0–5 ವರ್ಷದ ಮಕ್ಕಳ ಮಾಹಿತಿ ನೀಡಿ, ಎಲ್ಲರೂ ಲಸಿಕೆ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು. ಲಸಿಕಾ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಆಸಕ್ತಿಯಿಂದ ಪಾಲ್ಗೊಳ್ಳಬೇಕು’ ಎಂದು ಕೋರಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ. ಮುನ್ಯಾಳ, ಸಮೀಕ್ಷಣಾಧಿಕಾರಿ ಡಾ.ಸಿದ್ದಲಿಂಗಯ್ಯ ಮತ್ತು ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT