ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಮುಕ್ತ ಕರ್ನಾಟಕ ನಿರ್ಮಾಣದ ಸಂಕಲ್ಪ: ರೈತರ ಸಮಾವೇಶದಲ್ಲಿ ಹಲವು ನಿರ್ಣಯ

Last Updated 21 ಜುಲೈ 2019, 14:26 IST
ಅಕ್ಷರ ಗಾತ್ರ

ಬೆಳಗಾವಿ: ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಇಲ್ಲಿ ಭಾನುವಾರ ಆಯೋಜಿಸಿದ್ದ 39ನೇ ರೈತ ಹುತಾತ್ಮ ದಿನಾಚರಣೆ ಹಾಗೂ ಬೃಹತ್ ಸಮಾವೇಶದಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ರೈತರು, ಬರ ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಪ್ರತಿಜ್ಞೆ ಸ್ವೀಕರಿಸಿದರು. ಪ್ರತಿ ಕಾರ್ಯಕರ್ತನೂ ಈ ಕಾಯಕವನ್ನು ಸಂಘದ ಮೂಲ ಧ್ಯೇಯವೆಂದು ಸ್ವೀಕರಿಸಿ ತಮ್ಮ ಮನೆ ಮತ್ತು ಹೊಲಗಳಿಂದಲೇ ಇದರ ಅನುಷ್ಠಾನಕ್ಕಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿದರು. ಜಾಗೃತಿ ಮೂಡಿಸುವುದಕ್ಕಾಗಿ ಪ್ರತಿ ಗ್ರಾಮದಲ್ಲೂ ಇಬ್ಬರು ಸಕ್ರಿಯ ಸ್ವಯಂಸೇವಕರನ್ನು ಸಜ್ಜುಗೊಳಿಸಲು ನಿರ್ಧರಿಸಲಾಯಿತು.

* ರೈತರ ಹಕ್ಕುಗಳ‌ ವಿಶ್ವಸಂಸ್ಥೆ ಘೋಷಣೆ- 2018ನ್ನು ರೈತ ಹುತಾತ್ಮರಿಗೆ ಸಮರ್ಪಿಸಲಾಯಿತು. ಈ ಘೋಷಣೆಯನ್ನು ಮೂಲಭೂತ ಹಕ್ಕಾಗಿಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕು.

* ರೈತರ ಸುಸ್ಥಿರ ಬದುಕಿಗಾಗಿ ಪರ್ಯಾಯಗಳನ್ನು ಕಂಡುಕೊಳ್ಳಬೇಕು. ಪರ್ಯಾಯ ರಾಜಕಾರಣಕ್ಕೆ ಮುಂದಾಗಬೇಕು.

* ಮಹದಾಯಿ ಜಲವಿವಾದದ ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸಿ, ಕರ್ನಾಟಕಕ್ಕೆ ಹಂಚಿಕೆಯಾದ ನೀರು ಪಡೆದುಕೊಳ್ಳಲು ಅನುವು ಮಾಡಿಕೊಡಬೇಕು.

* ಕೃಷ್ಣಾ, ಕಾವೇರಿ ಕೊಳ್ಳದ ಎಲ್ಲ ಬೃಹತ್, ಮಧ್ಯಮ ಹಾಗೂ ಸಣ್ಣ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಭದ್ರಾ ಮೇಲ್ದಂಡೆಯಿಂದ ವಾಣಿವಿಲಾಸ ಅಣೆಕಟ್ಟೆಗೆ ನೀರು ಹರಿಸಿ, ಆ ಭಾಗದ ಎಲ್ಲ ಕೆರೆ ಕಟ್ಟೆಗಳನ್ನು ತುಂಬಿಸಬೇಕು.

* 2013ರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರುವುದನ್ನು ರಾಜ್ಯ ಸರ್ಕಾರ ಕೈಬಿಡಬೇಕು.

* ರೈತರ ಸಾಲ ಮನ್ನಾ ಯೋಜನೆ ಗೊಂದಲದ ಗೂಡಾಗಿದೆ. ಯೋಜನೆಯಿಂದ ಈವರೆಗೆ ಎಷ್ಟು ಮಂದಿಗೆ ಲಾಭವಾಗಿದೆ ಎನ್ನುವ ಕುರಿತು ರಾಜ್ಯ ಸರ್ಕಾರವು ಕೂಡಲೇ ಶ್ವೇತಪತ್ರ ಹೊರಡಿಸಬೇಕು.

* ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿ ಕ್ಷೇತ್ರಕ್ಕೂ ವಿಸ್ತರಿಸಬೇಕು.

* ರೈತರು ಸುಸ್ಥಿರ ಬದುಕು ಕಟ್ಟಿಕೊಳ್ಳಲು ಅನುವಾಗುವಂತೆ ನೈಸರ್ಗಿಕ ಕೃಷಿಯನ್ನು ವ್ಯಾಪಕಗೊಳಿಸಬೇಕು. ಸ್ವಂತ ಮಾರುಕಟ್ಟೆ, ಮೌಲ್ಯವರ್ಧನೆ, ಉದ್ಯೋಗ ಸೃಷ್ಟಿ, ಸಮಾನ ಶಿಕ್ಷಣ, ಆರೋಗ್ಯ ದೊರೆಯುವಂತಹ ವ್ಯವಸ್ಥೆ ನಿರ್ಮಾಣ ಮಾಡಬೇಕು. ಇದಕ್ಕಾಗಿ ರಚನಾತ್ಮಕ ಕೆಲಸಗಳ ಪರ್ಯಾಯಗಳನ್ನು ಕಂಡುಕೊಳ್ಳಲು ತೀರ್ಮಾನ. ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಎಲ್ಲ ಕ್ಷೇತ್ರದ ಪರಿಣತರ ಸ್ವಾಯತ್ತ ತಂಡ ರಚಿಸಲು ನಿರ್ಧಾರ.

* ಕಬ್ಬು ಪೂರೈಸಿದ ರೈತರಿಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಾದ ಬಾಕಿ ಕೊಡಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಸಾಲಿನ ಕಬ್ಬಿನ ದರ ನಿಗದಪಡಿಸಬೇಕು.

* ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲು ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಮುತ್ತಿಗೆ ಹಾಕಲು ನಿರ್ಧಾರ.

* ಅರಣ್ಯದಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬೇಕು.

* ಅತಿವೃಷ್ಟಿಯಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ಪುನರ್‌ನಿರ್ಮಾಣಕ್ಕಾಗಿ ವಿಶೇಷ ಪ್ಯಾಕೇಜ್‌ ಘೋಷಿಸಬೇಕು.

* ಕಳ್ಳದಂಧೆ ಮೂಲಕ ಕಾಳುಮೆಣಸು ದೇಶಕ್ಕೆ ಬರುವುದನ್ನು ತಡೆದು, ಸ್ಥಳೀಯ ಕಾಳು ಮೆಣಸು ಬೆಳೆಗಾರರನ್ನು ರಕ್ಷಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT