ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಂಬರದ ಪದಗಳಷ್ಟೇ ಪ್ರಣಾಳಿಕೆಗಳ ಮಾಹಿತಿ ತಂತ್ರಜ್ಞಾನ

Last Updated 7 ಮೇ 2018, 19:30 IST
ಅಕ್ಷರ ಗಾತ್ರ

ದೇಶದ ಮಾಹಿತಿ ತಂತ್ರಜ್ಞಾನ ರಾಜಧಾನಿಯೇ ಕರ್ನಾಟಕದಲ್ಲಿದೆ. ಸಹಜವಾಗಿಯೇ ಕರ್ನಾಟಕ ವಿಧಾನಸಭೆಯ ಚುನಾವಣೆಗಾಗಿ ಮೂರು ಪ್ರಮುಖ ರಾಜಕೀಯ ಪಕ್ಷಗಳು ಬಿಡುಗಡೆ ಮಾಡಿರುವ ಪ್ರಣಾಳಿಕೆಗಳೂ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ಪ್ರಸ್ತಾಪಿಸಿವೆ. ಆದರೆ ಯಾವ ಪಕ್ಷದ ಪ್ರಣಾಳಿಕೆಯೂ ಸದ್ಯ ಮಾಹಿತಿ ತಂತ್ರಜ್ಞಾನ ಉದ್ಯಮ ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಿದಂತೆಯೇ ಕಾಣಿಸುವುದಿಲ್ಲ. ಪರಿಣಾಮವಾಗಿ ಪ್ರಣಾಳಿಕೆ ಈ ಸವಾಲಿಗೆ ಪ್ರತಿಸ್ಪಂದಿಸಿಯೂ ಇಲ್ಲ. ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಒಂದು ಅಧ್ಯಾಯವೇ ಇದೆ. ಬಿಜೆಪಿಯ ಪ್ರಣಾಳಿಕೆಯಲ್ಲಿ ಇದು ಅಲ್ಲಲ್ಲಿ ಕಾಣಸಿಗುತ್ತದೆ. ಜೆಡಿಎಸ್‌ನ ಪ್ರಣಾಳಿಕೆಯಲ್ಲಿ ಇದು ಸುಪ್ತವಾಗಿ ಬಂದಿದೆ.

ಕಾಂಗ್ರೆಸ್, ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಕೊಟ್ಟರೆ ಬಿಜೆಪಿ, ಮಹಿಳೆಯರಿಗೆ ಉಚಿತ ಸ್ಮಾರ್ಟ್ ಫೋನ್ ಮತ್ತು ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ಕೊಡಲು ಹೊರಟಿದೆ. ಕಾಂಗ್ರೆಸ್ ಈಗಾಗಲೇ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಕೊಡುವ ಯೋಜನೆಯನ್ನು ಜಾರಿಗೆ ತಂದದ್ದರಿಂದ ಅದನ್ನೇ ಮತ್ತೊಮ್ಮೆ ಹೇಳಿಕೊಂಡಿದೆ. ಇದೊಂದು ಜನಪ್ರಿಯ ಘೋಷಣೆಯಿಂದ ದೂರ ಉಳಿದಿರುವುದು ಜೆಡಿಎಸ್‌ನ ಹೆಚ್ಚುಗಾರಿಕೆ.

ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಕೃತಕ ಬುದ್ಧಿಮತ್ತೆ (Artificial intelligence), ಮೆಷೀನ್ ಲರ್ನಿಂಗ್, ಬ್ಲಾಕ್ ಚೈನ್ ಈ ಬಗೆಯ ಅನೇಕ ಪದಗಳ ಬಳಕೆಯನ್ನು ಕಾಣಬಹುದು. ಆದರೆ ಈ ವಿಷಯಗಳ ಬಗ್ಗೆ ಪ್ರಣಾಳಿಕೆಯನ್ನು ರಚಿಸಿದವರಿಗೆ ಸ್ಪಷ್ಟವಾದ ಅರಿವಿದೆ ಅನ್ನಿಸುವುದಿಲ್ಲ. ಹಾಗಾಗಿಯೇ ಮಾಹಿತಿ ತಂತ್ರಜ್ಞಾನ ಉದ್ಯಮ ಎದುರಿಸುತ್ತಿರುವ ಸವಾಲುಗಳ ನಿರ್ವಹಣೆಗೆ ರಚನಾತ್ಮಕ ಯೋಜನೆಗಳೇನನ್ನೂ ಪ್ರಸ್ತಾಪಿಸಿಲ್ಲ. ಕಳೆದ ಎರಡೂವರೆ ದಶಕಗಳ ಅವಧಿಯಲ್ಲಿ ನಡೆದ ಚುನಾವಣೆಗಳಲ್ಲಿ ಮಾಹಿತಿ ತಂತ್ರಜ್ಞಾನದ ಬಗ್ಗೆ ಆಡಿರುವ ಮಾತುಗಳನ್ನೇ ಹೊಸ ತಾಂತ್ರಿಕ ಪದಗಳ ಮೂಲಕ ಹೇಳಲಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ಗಳು ಈ ಬಗೆಯ ಸರ್ಕಸ್‌ಗಳೇನನ್ನೂ ನಡೆಸದೆಯೇ ಆ ಕೆಲಸ ಮಾಡಿವೆ.

ಬಿಜೆಪಿ ರಾಜ್ಯವ್ಯಾಪಿಯಾಗಿ ಅರವತ್ತು ಹೊರಗುತ್ತಿಗೆ ಉದ್ಯಮ ಸಂಕೀರ್ಣಗಳನ್ನು ಸ್ಥಾಪಿಸಿ ಸ್ಥಳೀಯ ಉದ್ಯಮಿಗಳು ಅದರಲ್ಲಿ ತೊಡಗಿಕೊಳ್ಳಲು ಸಹಾಯ ಮಾಡುತ್ತೇವೆ ಎಂದು ಘೋಷಿಸಿಕೊಂಡಿದೆ. ಹದಿನೈದು ವರ್ಷಗಳ ಹಿಂದೆ ಯಾರಾದರೂ ಈ ಪರಿಕಲ್ಪನೆಯನ್ನು ಹೇಳಿದ್ದರೆ ಅದು ಕ್ರಾಂತಿಕಾರಿಯಾಗಿ ಕಾಣಿಸುತ್ತಿತ್ತು. ಸದ್ಯ ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮ ಹೊರಗುತ್ತಿಗೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. ಈ ಕ್ಷೇತ್ರದಲ್ಲಿ ಭಾರತಕ್ಕೆ ಸವಾಲೊಡ್ಡುವ ಹಲವು ಬೆಳವಣಿಗೆಗಳು ನಡೆದಿವೆ. ಅಭಿವೃದ್ಧಿ ಹೊಂದಿದ ದೇಶಗಳಿಂದ ದೊರೆಯುತ್ತಿದ್ದ ಹೊರಗುತ್ತಿಗೆ ಕೆಲಸಗಳ ಪ್ರಮಾಣವೇ ಕುಸಿಯುತ್ತಿದೆ. ಇದಕ್ಕೆ ಮುಖ್ಯಕಾರಣ ಆಯಾ ದೇಶಗಳಲ್ಲಿ ಹೊರಗುತ್ತಿಗೆಗೆ ಎದುರಾಗಿರುವ ವಿರೋಧ. ಇಂಥದ್ದೊಂದು ಸಂದರ್ಭದಲ್ಲಿ ಹೊರಗುತ್ತಿಗೆ ಉದ್ಯಮ ಸಂಕೀರ್ಣದಂಥ ಯೋಜನೆಗೆ ಯಾವ ಪ್ರಸ್ತುತತೆಯೂ ಇಲ್ಲ. ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಪ್ರಸ್ತಾಪವಾಗಿರುವ ಪೇಟೆಂಟ್ ಕಚೇರಿ, ಹೊಸ ತಂತ್ರಜ್ಞಾನದ ಪರೀಕ್ಷಾ ಕೇಂದ್ರವನ್ನಾಗಿ ಬೆಂಗಳೂರನ್ನು ಬೆಳೆಸುವುದು, ಇಂಟರ್ನೆಟ್ ಆಫ್ ಥಿಂಗ್ಸ್ ಇತ್ಯಾದಿಗಳೆಲ್ಲವೂ ಆಡಂಬರದ ಮಾತುಗಳು ಮಾತ್ರ. ಈ ಕ್ಷೇತ್ರಗಳಿಗಾಗಿ ಸರ್ಕಾರವೊಂದು ಏನನ್ನೂ ಮಾಡಬೇಕಾದ ಅಗತ್ಯವಿಲ್ಲ. ಇಂಥ ಎಲ್ಲಾ ಚಟುವಟಿಕೆಗಳಿಗೂ ಬೆಂಗಳೂರು ಒಂದು ಸಹಜ ಕೇಂದ್ರವಾಗಿದೆ.

ರಾಜ್ಯದ ಒಟ್ಟು ಉತ್ಪನ್ನಕ್ಕೆ ಬಹುದೊಡ್ಡ ಪಾಲನ್ನು ನೀಡುವ ಒಂದು ಕ್ಷೇತ್ರದ ಬಗ್ಗೆ ರಾಜಕೀಯ ಪಕ್ಷಗಳು ಈ ಬಗೆಯ ಬೀಸು ಹೇಳಿಕೆಗಳನ್ನು ನೀಡುವುದಕ್ಕೆ ಎರಡು ಕಾರಣಗಳಿವೆ. ಮೊದಲನೆಯದ್ದು ಈ ಕ್ಷೇತ್ರದ ಈ ತನಕದ ಬೆಳವಣಿಗೆಗೆ ಸರ್ಕಾರ ನೆರವಾಗಿದೆಯಾದರೂ ಅದು ಪ್ರಜ್ಞಾಪೂರ್ವಕವಾಗಿ ಮಾಡಿದ ಕೆಲಸವಲ್ಲ. ಉದಾಹರಣೆಗೆ ಕರ್ನಾಟಕದಲ್ಲಿ ಸ್ಥಾಪನೆಯಾದ ದೊಡ್ಡ ಸಂಖ್ಯೆಯ ಎಂಜಿನಿಯರಿಂಗ್ ಕಾಲೇಜುಗಳು. ಆದರೆ ಈ ಕಾಲೇಜುಗಳ ಸ್ಥಾಪನೆಗೆ ಅವಕಾಶ ಮಾಡಿಕೊಡುವುದರ ಹಿಂದೆ ಮಾಹಿತಿ ತಂತ್ರಜ್ಞಾನ ಉದ್ದಿಮೆಯನ್ನು ಆಕರ್ಷಿಸುವ ಇರಾದೆಯೇನೂ ಅಂದಿನ ಸರ್ಕಾರಗಳಿಗೆ ಇರಲಿಲ್ಲ. ಇದು ಯಾದೃಚ್ಛಿಕವಾಗಿ ಸಂಭವಿಸಿತು. ಎರಡನೆಯದ್ದು, ಸರ್ಕಾರದ ಪ್ರಜ್ಞಾಪೂರ್ವಕ ಪಾತ್ರವಿಲ್ಲದೆ ನಡೆದಿರುವ ಅಭಿವೃದ್ಧಿಯಾಗಿರುವುದರಿಂದ ಇದರ ಬಗ್ಗೆ ರಾಜಕೀಯ ಪಕ್ಷಗಳಿಗೆ ಹೆಚ್ಚಿನ ಅರಿವಾಗಲೀ ಕಾಣ್ಕೆಯಾಗಲೀ ಇಲ್ಲ.

ಐಟಿ ಉದ್ಯಮ ಈಗ ಹೊಸತೊಂದು ಮಜಲಿನತ್ತ ಹೊರಳುತ್ತಿದೆ. ಅದರ ಮಟ್ಟಿಗೆ ಇದೊಂದು ಸಂಕ್ರಮಣ ಕಾಲ. ಈ ಹಿಂದೆ ಬೆಂಗಳೂರಿಗೆ ಐಟಿ ಉದ್ಯಮಗಳು ಬಂದಾಗ ಕರ್ನಾಟಕದದಲ್ಲಿ ಎಂಜಿನಿಯರಿಂಗ್ ಕಲಿತ ಭಾರೀ ಪ್ರಮಾಣದ ಮಾನವ ಸಂಪನ್ಮೂಲವಿತ್ತು. ಅದರ ಗುಣಮಟ್ಟ ಉದ್ಯಮದ ಬಳಕೆಗೆ ಬರುವಂತೆಯೂ ಇತ್ತು.

ವರ್ತಮಾನದ ಸ್ಥಿತಿ ಇದಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಬಂದಿರುವ ಮೂರು ಪ್ರಮುಖ ಅಧ್ಯಯನಗಳೂ ಭಾರತದ ಎಂಜಿನಿಯರಿಂಗ್ ಕಾಲೇಜುಗಳಿಂದ ಹೊರಬರುವ ಶೇಕಡಾ 95ರಷ್ಟು ಮಂದಿಯೂ ಉದ್ಯೋಗಕ್ಕೆ ಅರ್ಹರಲ್ಲ ಎಂದಿವೆ. ಐಟಿ ಉದ್ಯಮ ಹೊಸ ಮಜಲಿಗೆ ಹೊರಳಲು ಸಿದ್ಧವಾಗುತ್ತಿರುವ ಹೊತ್ತಿನಲ್ಲಿ ಈ ಬಗೆಯ ಮಾನವ ಸಂಪನ್ಮೂಲವನ್ನು ಯಾವ ರೀತಿಯಲ್ಲಿ ಬಳಸಲು ಸಾಧ್ಯ? ಈ ಸಮಸ್ಯೆಯನ್ನು ಬಗೆಹರಿಸುವುದರ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿಯ ಪ್ರಣಾಳಿಕೆಗಳು ಪ್ರಸ್ತಾಪಿಸಿಲ್ಲ. ಜೆಡಿಎಸ್ ಹಲವು ಹೊಸ ಏಕ ವಿಷಯ ವಿಶ್ವವಿದ್ಯಾಲಯಗಳನ್ನು ಪ್ರಸ್ತಾಪಿಸುತ್ತದೆಯಾದರೂ ಮೂಲಭೂತ ಸಮಸ್ಯೆಯ ಅದೂ ಯೋಚಿಸಿದಂತೆ ಕಾಣಿಸುವುದಿಲ್ಲ.

ಕರ್ನಾಟಕದ ಜ್ಞಾನಾಧಾರಿತ ಆರ್ಥಿಕತೆ ರೂಪುಗೊಂಡದ್ದು ಇಲ್ಲಿದ್ದ ಅತ್ಯುತ್ತಮ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಎಂಬ ಸರಳ ವಿಷಯವನ್ನು ರಾಜಕೀಯ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕಿತ್ತು. ಬದಲಿಗೆ ಅವು ಉಚಿತ ಲ್ಯಾಪ್‌ಟಾಪ್, ಉಚಿತ ಸ್ಮಾರ್ಟ್‌ಪೋನ್‌ನಂಥ ಕಲ್ಪನೆಗಳಿಗೆ ಸೀಮಿತವಾಗಿಬಿಟ್ಟಿವೆ. ಪ್ರಾಥಮಿಕ ಶಾಲೆಯಲ್ಲೇ ಕಂಪ್ಯೂಟರ್ ಶಿಕ್ಷಣ ಎಂಬುದೂ ಇಂಥದ್ದೇ ಪರಿಕಲ್ಪನೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವರ್ಷ ಆರಂಭವಾಗುವುದಕ್ಕೆ ಮುನ್ನ ಪಠ್ಯ ಪುಸ್ತಕಗಳನ್ನು ತಲುಪಿಸುವುದಕ್ಕೆ ಈವರೆಗಿನ ಯಾವ ಸರ್ಕಾರಕ್ಕೂ ಸಾಧ್ಯವಾಗಿಲ್ಲ. ಅಂಥದ್ದರಲ್ಲಿ ಪ್ರಾಥಮಿಕ ಶಿಕ್ಷಣದ ಮಟ್ಟದಲ್ಲೇ ಕಂಪ್ಯೂಟರ್ ಪರಿಚಯಿಸುತ್ತೇವೆ ಎಂದರೆ ಅದನ್ನು ಹಾಸ್ಯಾಸ್ಪದ ಎಂದೇ ಹೇಳಬೇಕಾಗುತ್ತದೆ.

ಕಳೆದ ಎರಡು ಮೂರು ವರ್ಷಗಳಿಂದ ಕರ್ನಾಟಕದ ಅನೇಕ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಸಾಕಷ್ಟು ವಿದ್ಯಾರ್ಥಿಗಳು ದೊರೆಯುತ್ತಿಲ್ಲ. ಇದಕ್ಕೆ ಕಾರಣ ಕಾಲೇಜುಗಳ ಗುಣಮಟ್ಟವೇ ಹೊರತು ಎಂಜಿನಿಯರಿಂಗ್ ಆಕಾಂಕ್ಷಿಗಳ ಕೊರತೆಯೇನೂ ಅಲ್ಲ. ಉತ್ತಮ ಕಾಲೇಜುಗಳ ಸೀಟಿಗಾಗಿ ಈಗಲೂ ದೊಡ್ಡ ಸರತಿ ಸಾಲಿರುತ್ತದೆ.

ಎಂಜಿನಿಯರಿಂಗ್ ಗುಣಮಟ್ಟವನ್ನು ಖಾತರಿ ಪಡಿಸುವ, ವರ್ತಮಾನದ ಅಗತ್ಯಕ್ಕೆ ತಕ್ಕಂತೆ ಪಠ್ಯಕ್ರಮ ರೂಪಿಸುವ ಹೊಣೆಗಾರಿಕೆ ಇರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಶಿಕ್ಷಣೇತರ ಕಾರಣಗಳಿಗಾಗಿ ಸುದ್ದಿಯಾಗುತ್ತಿರುತ್ತದೆ. ಇದನ್ನು ಸರಿಪಡಿಸುವ ಭರವಸೆಯನ್ನೂ ಯಾವ ಪ್ರಣಾಳಿಕೆಯೂ ನೀಡುವುದಿಲ್ಲ. ಜೆಡಿಎಸ್ ಪ್ರಣಾಳಿಕೆ ಕೌಶಲಾಭಿವೃದ್ಧಿಯ ಬಗ್ಗೆ ದೊಡ್ಡ ಮಾತುಗಳನ್ನಾಡುತ್ತದೆ. ಅದು ಪ್ರಸ್ತಾಪಿಸುವ ಏಕ ವಿಷಯ ವಿಶ್ವವಿದ್ಯಾಲಯಗಳ ನಿಜ ಉದ್ದೇಶ ಕೌಶಲಾಭಿವೃದ್ಧಿಗಿಂತ ಹೆಚ್ಚಾಗಿ ಕುಲಪತಿ ಆಕಾಂಕ್ಷಿಗಳಿಗೆ ಹೆಚ್ಚು ಅವಕಾಶಗಳನ್ನು ಸೃಷ್ಟಿಸುವುದು ಎಂಬಂತೆ ಕಾಣಿಸುತ್ತದೆ. ಈಗಾಗಲೇ ಸ್ಥಾಪನೆಯಾಗಿರುವ ಏಕ ವಿಷಯ ವಿಶ್ವವಿದ್ಯಾಲಯಗಳೆಲ್ಲವೂ ಸಾಧಿಸಿರುವುದು ಅದೊಂದನ್ನೇ.

ಎಲ್ಲಾ ಪ್ರಣಾಳಿಕೆಗಳೂ ದೊಡ್ಡ ಸಂಖ್ಯೆಯ ಉದ್ಯೋಗ ಸೃಷ್ಟಿಸುವ ಭರವಸೆ ನೀಡುತ್ತಿವೆ. ಈ ಉದ್ಯೋಗಗಳಲ್ಲಿ ಒಂದಷ್ಟು ಪ್ರಮಾಣದವು ಜ್ಞಾನಾಧಾರಿತ ಉದ್ಯಮಗಳಿಂದಲೂ ಬರಬೇಕಾಗುತ್ತದೆ. ಅದು ಸಾಧ್ಯವಾಗಬೇಕಾದರೆ ಹೊಸ ಬಗೆಯ ಕೌಶಲಗಳ ಅಗತ್ಯವಿದೆ. ಕೃತಕ ಬುದ್ಧಿಮತ್ತೆಯಂಥ ಹೊಸ ತಾಂತ್ರಿಕ ಆವಿಷ್ಕಾರಗಳು ಜ್ಞಾನಾಧಾರಿತ ಉದ್ಯಮ ನಿರೀಕ್ಷಿಸುವ ಮಾನವ ಸಂಪನ್ಮೂಲದ ಸ್ವರೂಪವನ್ನೇ ಬದಲಾಯಿಸಿಬಿಟ್ಟಿವೆ. ತಂತ್ರಜ್ಞಾನವನ್ನು ಬಳಸುವ ಕೌಶಲಕ್ಕಿಂತ ತಂತ್ರಜ್ಞಾನವನ್ನು ಸೃಷ್ಟಿಸುವ ಕೌಶಲಕ್ಕೀಗ ಮೊದಲ ಮಣೆ. ಈ ಬಗೆಯ ಕೌಶಲ ನೀಡಲು ಸಾಧ್ಯವಾಗುವುದು ನಮ್ಮ ಶಿಕ್ಷಣದ ಮೂಲ ನೆಲೆಗಟ್ಟು ಭದ್ರವಾಗಿದ್ದಾಗ ಮಾತ್ರ. ಎಲ್ಲ ಪಕ್ಷಗಳ ಪ್ರಣಾಳಿಕೆಗಳೂ ಮೌನವಾಗಿರುವುದು ಈ ಮೂಲಭೂತ ವಿಷಯದಲ್ಲಿ. ಅದನ್ನು ಮರೆಮಾಚುವುದಕ್ಕೆ ತಾಂತ್ರಿಕ ಎನಿಸುವಂಥ ಆಡಂಬರದ ಪದಗಳನ್ನು ಬಳಸಲಾಗಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT