ಶನಿವಾರ, ಡಿಸೆಂಬರ್ 5, 2020
25 °C

ಬೆಳಗಾವಿ: ಅರವಿಂದಗೆ ಜಯ, ಕಾಂಗ್ರೆಸ್‌ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ಡಿಸಿಸಿ (ಜಿಲ್ಲಾ ಕೇಂದ್ರ ಸಹಕಾರ) ಬ್ಯಾಂಕ್ ಚುನಾವಣೆಯಲ್ಲಿ ಖಾನಾಪುರ ತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘದ ಮತ ಕ್ಷೇತ್ರದಿಂದ ಮಾಜಿ ಶಾಸಕ ಅರವಿಂದ ಪಾಟೀಲ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ಸೋಲನುಭವಿಸಿದ್ದಾರೆ.

ಇಲ್ಲಿನ ಬಿ.ಕೆ. ಮಾಡೆಲ್‌ ಶಾಲೆಯಲ್ಲಿ ಶುಕ್ರವಾರ ಮತದಾನ ನಡೆಯಿತು. ಅರವಿಂದಗೆ 27 ಮತಗಳು ಬಂದರೆ, ಅಂಜಲಿ 25 ಮತಗಳು ದೊರೆತವು. ಅನರ್ಹ ಮತದಾರರೆಂದು ಘೋಷಿಸಲಾಗಿದ್ದ ನಾಲ್ವರು ನಿಯಮಗಳಲ್ಲಿ ಅವಕಾಶ ಇರುವಂತೆ, ನ್ಯಾಯಾಲಯದ ಆದೇಶ ಪಡೆದು ಕೊನೆಯ ಕ್ಷಣದಲ್ಲಿ ಬಂದು ಮತ  ಚಲಾಯಿಸಿದ ಬಳಿಕ ಫಲಿತಾಂಶ ಬದಲಾಗಿದೆ ಎನ್ನಲಾಗುತ್ತಿದೆ. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಬಿಜೆಪಿಯ ಜಿಲ್ಲಾ ನಾಯಕರು ಒಗ್ಗಟ್ಟಾಗಿ ತಂತ್ರ ರೂಪಿಸುವ ಮೂಲಕ ತಮ್ಮ ಬೆಂಬಲಿತ ಅಭ್ಯರ್ಥಿ ಗೆಲ್ಲಿಸಿಕೊಂಡು, ಅಂಜಲಿಗೆ ಮುಖಭಂಗ ಉಂಟು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಜೆಪಿ ಬೆಂಬಲ: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಜೊತೆ ಗುರುತಿಸಿಕೊಂಡಿರುವ ಪಾಟೀಲಗೆ ಬಿಜೆಪಿಯವರು ಬೆಂಬಲವಾಗಿ ನಿಂತಿದ್ದರು. ಅವರು ನಿರ್ದೇಶಕರಾಗಿ ಮರು ಆಯ್ಕೆಯಾಗಿದ್ದಾರೆ.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ,  ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕ ಮಹಾಂತೇಶ ದೊಡ್ಡಗೌಡರ ನಗರದಲ್ಲೇ ಇದ್ದುಕೊಂಡು ಮತದಾನದ ಮಾಹಿತಿ ಪಡೆದರು.

ಈ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ ಮಹಿಳೆ ಎಂಬ ದಾಖಲೆ ಅಂಜಲಿ ಅವರದಾಗಿದೆ.

ಕೃಷ್ಣಗೆ ಭರ್ಜರಿ ಗೆಲುವು: ರಾಮದುರ್ಗ ತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘದ ಮತ ಕ್ಷೇತ್ರದಲ್ಲಿ ಶ್ರೀಕಾಂತ ಡವಣ 16 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಪ್ರತಿ ಸ್ಪರ್ಧಿ ಭೀಮಪ್ಪ ಬೆಳವಣಕಿ 13 ಮತಗಳನ್ನು ಗಳಿಸಿದರು. ಶ್ರೀಕಾಂತ ಅವರಿಗೆ ಬಿಜೆಪಿ ಬೆಂಬಲ ನೀಡಿತ್ತು.

ನೇಕಾರರ ಸಹಕಾರ ಕ್ಷೇತ್ರಗಳ ಮತ ಕ್ಷೇತ್ರದಿಂದ ಕಾಂಗ್ರೆಸ್ ಮುಖಂಡ ಕೃಷ್ಣ ಅನಗೋಳಕರ 55 ಮತಗಳನ್ನು ಗಳಿಸಿ ಜಯಭೇರಿ ಬಾರಿಸಿದರು. ಪ್ರತಿ ಸ್ಪರ್ಧಿ ಗಜಾನನ ಕ್ವಳ್ಳಿ 38 ಮತಗಳನ್ನಷ್ಟೆ ಗಳಿಸಲು ಸಾಧ್ಯವಾಯಿತು. ಪರಾಜಿತ ಗಜಾನನ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದರು.

‘15 ವರ್ಷಗಳಿಂದ ರೈತರ ಪರವಾಗಿ ಹೋರಾಡಿದ್ದಕ್ಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳು ನನ್ನನ್ನು ಬೆಂಬಲಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೇರಿದಂತೆ ಬಿಜೆಪಿಯ ಜಿಲ್ಲಾ ಮುಖಂಡರೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ನಾನು ಎಂದಿಗೂ ರೆಸಾರ್ಟ್‌ ರಾಜಕಾರಣ ಮಾಡಿಲ್ಲ’ ಎಂದು ವಿಜೇತ ಅರವಿಂದ ಪಾಟೀಲ ಪ್ರತಿಕ್ರಿಯಿಸಿದರು.

‘ಬಿಜೆಪಿ ಸೇರ್ಪಡೆ ಕುರಿತು ಸದ್ಯಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದರು.

‘ಸೋತಿದ್ದೇನೆ ಎಂದು ಹೇಳಲು ಬಯಸುವುದಿಲ್ಲ. 25 ಮಂದಿ ಮತ ದಾನ ಮಾಡಿ ಆಶೀರ್ವದಿಸಿದ್ದಾರೆ. ಸಹಕಾರ ಕ್ಷೇತ್ರದಲ್ಲಿ, ರೈತರ ಪರವಾಗಿ ಹೋರಾಟ ಮುಂದುವರಿಸುತ್ತೇನೆ’ ಎಂದು ಅಂಜಲಿ ಪ್ರತಿಕ್ರಿಯಿಸಿದರು.

16 ನಿರ್ದೇಶಕ ಸ್ಥಾನಗಳ ಪೈಕಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು.

ಬಿಮ್ಸ್ ಮುಖ್ಯ ಆಡಳಿತಾಧಿಕಾರಿ ಸಯೀದಾ ಅಫ್ರೀನಬಾನು ಬಳ್ಳಾರಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಮತಗಟ್ಟೆಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಭೇಟಿ ನೀಡಿ ಪರಿಶೀಲಿಸಿದರು.
ಫಲಿತಾಂಶ ಹೊರಬಿದ್ದ ನಂತರ, ವಿಜೇತರ ಬೆಂಬಲಿಗರು ಸಂಭ್ರಮ ಆಚರಿಸಿದರು.

ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇನ್ನು, ಅಧ್ಯಕ್ಷರಾಗಿ ಆಯ್ಕೆಯಾಗುವವರು ಯಾರು ಎನ್ನುವುದು ಕುತೂಹಲ ಮೂಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು