ಬುಧವಾರ, ಸೆಪ್ಟೆಂಬರ್ 22, 2021
23 °C
ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ

ಹೈಕೋರ್ಟ್‌ ನ್ಯಾಯಮೂರ್ತಿಯಿಂದ ತನಿಖೆ ನಡೆಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಕೋವಿಡ್‌ ನಿಯಂತ್ರಣಕ್ಕಾಗಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರವಾಗಿದ್ದು, ಈ ಪ್ರಕರಣದ ತನಿಖೆಯನ್ನು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯೊಬ್ಬರಿಂದ ಮಾಡಿಸಬೇಕು’ ಎಂದು ಶಾಸಕ ಕೆ.ಆರ್‌. ರಮೇಶಕುಮಾರ್‌ ಒತ್ತಾಯಿಸಿದರು.

ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘₹ 50ಕ್ಕೆ ಸಿಗುವ ಮಾಸ್ಕ್‌ ಅನ್ನು ₹ 100ರಿಂದ ₹ 150 ಕೊಟ್ಟು ಖರೀದಿಸಲಾಗಿದೆ. ಥರ್ಮಲ್‌ ಸ್ಕ್ಯಾನರ್‌ ಬೆಲೆ ₹ 2,000ದಿಂದ ₹ 3,000 ಇದೆ. ಆರೋಗ್ಯ ಇಲಾಖೆಯು ₹ 5,900 ನೀಡಿ ಖರೀದಿಸಿದ್ದರೆ, ಸಮಾಜ ಕಲ್ಯಾಣ ಇಲಾಖೆಯು ₹ 9,000 ನೀಡಿದೆ. ಸ್ಯಾನಿಟೈಸರ್‌ ದರ ಮಾರುಕಟ್ಟೆಯಲ್ಲಿ ₹ 80ರಿಂದ 100 ಇದೆ. ಆರೋಗ್ಯ ಇಲಾಖೆಯು ಇದಕ್ಕೆ ₹ 250 ನೀಡಿದ್ದರೆ ಸಮಾಜ ಕಲ್ಯಾಣ ಇಲಾಖೆಯು ₹ 600 ನೀಡಿದೆ. ಹೀಗೆ ಪ್ರತಿಯೊಂದು ವಸ್ತುಗಳನ್ನು ಮಾರುಕಟ್ಟೆ ಬೆಲೆಗಿಂತ ಹಲವು ಪಟ್ಟು ಹೆಚ್ಚು ನೀಡಿ ಖರೀದಿಸಲಾಗಿದೆ’ ಎಂದು ಆರೋಪಿಸಿದರು.

‘ಇದರ ಬಗ್ಗೆ ಸತ್ಯಾಸತ್ಯತೆ ಹೊರಬರಬೇಕಾದರೆ ನ್ಯಾಯಮೂರ್ತಿಯೊಬ್ಬರಿಂದ ತನಿಖೆಯಾಗಲೇ ಬೇಕು’ ಎಂದು ಒತ್ತಾಯಿಸಿದರು.

‘ಹಿಂದಿನ ಸಿದ್ದರಾಮಯ್ಯ ಸರ್ಕಾರವಿದ್ದಾಗ ಆರೋಗ್ಯ ಇಲಾಖೆಯಲ್ಲಿ ಅವ್ಯವಹಾರವಾಗಿತ್ತು ಎಂದು ಬಿಜೆಪಿಯವರು ಪ್ರತ್ಯಾರೋಪ ಮಾಡುತ್ತಿದ್ದಾರೆ. ಆರೋಪಕ್ಕೆ ಪ್ರತ್ಯಾರೋಪ ಉತ್ತರವಾಗುವುದಿಲ್ಲ. ಜನರನ್ನು ಹಣವನ್ನು ಸರ್ಕಾರ ಯದ್ವಾತದ್ವಾ ಖರ್ಚು ಮಾಡುತ್ತಿದ್ದರೆ, ಅಂತಹ ದುರುಪಯೋಗವನ್ನು ತಡೆಯುವುದು ವಿರೋಧ ಪಕ್ಷದ ಕೆಲಸ. ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಇದರಲ್ಲಿ  ಯಾವುದೇ ರಾಜಕಾರಣವಿಲ್ಲ, ನೀಚತನವಿಲ್ಲ’ ಎಂದು ಸ್ಪಷ್ಟನೆ ನೀಡಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ‘ದೇಶದ ಜನರು ಆರ್ಥಿಕ ಸಂಕಷ್ಟದಿಂದ ಹಾಗೂ ಕೊರೊನಾ ಭೀತಿಯಿಂದ ನಲುಗಿಹೋಗಿದ್ದಾರೆ. ಇಂತಹ ಸಂದರ್ಭದಲ್ಲೂ ಬಿಜೆಪಿಯವರು ಮಧ್ಯಪ್ರದೇಶ ಕಾಂಗ್ರೆಸ್‌ ಸರ್ಕಾರವನ್ನು ಕೆಡವಿದರು. ಈಗ ರಾಜಸ್ಥಾನದಲ್ಲೂ ಅದನ್ನೇ ಮಾಡಲು ಹೊರಟಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ’  ಎಂದು ಟೀಕಿಸಿದರು.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಇಳಿವಯಸ್ಸಿನಲ್ಲೂ ತುಂಬಾ ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ಇತರ ಸಚಿವರ ಸಹಕಾರ ಸಿಗುತ್ತಿಲ್ಲ. ಅವರ ನಡುವೆ ಸಮನ್ವಯ ಇಲ್ಲ’ ಎಂದು ಕಿಚಾಯಿಸಿದರು.

ಶಾಸಕಿ ಅಂಜಲಿ ನಿಂಬಾಳ್ಕರ, ವಿಧಾನ ಪರಿಷತ್‌ ಸದಸ್ಯ ನಸೀರ್‌ ಅಹ್ಮದ್‌, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಮುಖಂಡ ಫಿರೋಜ್‌ ಸೇಠ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು