ಸವದತ್ತಿ: ‘ಲಾಕ್‌ಡೌನ್ ಸಡಿಲಿಕೆಯಾಗಿ ಮದ್ಯದಂಗಡಿಗಳು ಪುನರಾರಂಭ ಆದಾಗಿನಿಂದ ಪುರುಷರು ಕುಡಿದ ಅಮಲಿನಲ್ಲಿ ಮಹಿಳೆಯರನ್ನು ಹಿಂಸಿಸುವ ಘಟನೆಗಳು ಹೆಚ್ಚಾಗುತ್ತಿವೆ. ಇದರಿಂದ ಕುಟುಂಬದ ನೆಮ್ಮದಿ ಹಾಳಾಗುತ್ತಿದೆ. ಹೀಗಾಗಿ, ಕೂಡಲೇ ತಾಲ್ಲೂಕಿನ ಉಗರಗೋಳದಲ್ಲಿನ ಮದ್ಯದಂಗಡಿಗಳನ್ನು ಬಂದ್ ಮಾಡಿಸಬೇಕು’ ಎಂದು ಒತ್ತಾಯಿಸಿ ಆದಿಶಕ್ತಿ ಮಾತಂಗಿ ದೇವಿ ಮಹಿಳಾ ಸಂಘದವರು ತಹಶೀಲ್ದಾರ್ ಪ್ರಶಾಂತ ಪಾಟೀಲ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
‘ಗ್ರಾಮದಲ್ಲಿ 2 ಮದ್ಯದಂಗಡಿಗಳಿವೆ. ನಿತ್ಯ ಕುಡಿದು ಬರುವ ಪತಿ ಮತ್ತು ಮಕ್ಕಳಿಂದ ಹಿಂಸೆ ಅನುಭವಿಸುವಂತಾಗಿದೆ. ಲಾಕ್‌ಡೌನ್‌ನಿಂದ ಆರ್ಥಿಕವಾಗಿ ತೊಂದರೆಯಾದರೂ ಕುಟುಂಬದಲ್ಲಿ ಕಲಹವಿರಲಿಲ್ಲ. ಮದ್ಯದಂಗಡಿ ಆರಂಭ ಆದಾಗಿನಿಂದ ಪರಿಸ್ಥಿತಿ ಹದಗೆಟ್ಟಿದೆ. ಹೆಂಡತಿ, ಮಕ್ಕಳು ಉಪವಾಸ ಇರುವಂತಾಗಿದೆ. ನಿಂದನೆ ಹೆಚ್ಚಾಗಿದೆ’ ತಿಳಿಸಿದರು.
‘ಈ ಮದ್ಯದಂಗಡಿಗಳು ಬಸವೇಶ್ವರ ದೇವಸ್ಥಾನ, ಮಠ, ಶಾಲೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅತ್ಯಂತ ಸಮೀಪದಲ್ಲಿವೆ. ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ನಿರ್ಲಕ್ಷ್ಯ ವಹಿಸಿದಲ್ಲಿ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಸಂಘದ ದುರಗವ್ವ ಮ್ಯಾಗೇರಿ, ರೇಣವ್ವ ಬಡೆಪ್ಪನವರ, ದಾಕ್ಷಾಯಿಣಿ ಬಸಲಿಂಗನವರ, ಮಹಾದೇವಿ ಕಾಳಪ್ಪನವರ, ರೇಣುಕಾ ಮ್ಯಾಗೇರಿ, ಅನುಸೂಯಾ ಬಸಲಿಂಗನವರ, ಕಸ್ತೂರೆವ್ವ ಕೋಟೂರ, ಪಾರ್ವತೆವ್ವ ಹೊಸಮನಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.