ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿರುವ ಶಿವಸೇನಾದ ಕಚೇರಿ ಮುಚ್ಚಿಸಲು ಆಗ್ರಹ

Last Updated 15 ಮಾರ್ಚ್ 2021, 12:54 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿರುವ ಶಿವಸೇನಾ ಕಚೇರಿ ಮುಚ್ಚಿಸಬೇಕು ಹಾಗೂ ಆ ಸಂಘಟನೆಗೆ ಸೇರಿದ ವಾಹನಗಳನ್ನು ಜಪ್ತಿ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯವರು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸೋಮವಾರ ಸಲ್ಲಿಸಿದರು.

‘ಕರ್ನಾಟಕ ಹಾಗೂ ಕನ್ನಡಿಗರ ವಿರುದ್ಧವೇ ನಾಡದ್ರೋಹಿ ಚಟುವಟಿಕೆ ನಡೆಸುವ ಶಿವಸೇನಾಗೆ ನಮ್ಮ ನೆಲದಲ್ಲೇ ಕಾರ್ಯಾಲಯ ನಡೆಸಲು ಅವಕಾಶ ಕೊಟ್ಟಿರುವುದು ಎಷ್ಟು ಸರಿ? ನಮ್ಮ ವಿರುದ್ಧವೇ ಪಿತೂರಿ ನಡೆಸುವ ಇಂತಹ ಸಂಘಟನೆಯ ವಾಹನಗಳಿಗೆ ಮರಾಠಿಯಲ್ಲಿ ನಾಮಫಲಕ ಹಾಕಿಕೊಂಡು ನಮ್ಮ ಮುಂದೆಯೇ ಸಂಚರಿಸಲು ಬಿಟ್ಟಿರುವುದು ಎಷ್ಟು ಸಮಂಜಸ?’ ಎಂದು ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಕೇಳಿದರು.

‘ಕೂಡಲೇ ಕಚೇರಿ ಮುಚ್ಚಿಸಬೇಕು ಹಾಗೂ ಆ ಸಂಘಟನೆಯ ವಾಹನಗಳನ್ನು ಜಪ್ತಿ ಮಾಡಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಶಂಕರ ಬಾಗೇವಾಡಿ, ಕಸ್ತೂರಿ ಭಾವಿ ಇದ್ದರು.

3ನೇ ದಿನವೂ ಸ್ಥಗಿತ:

ಈ ನಡುವೆ, ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿದಿದ್ದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವುದರಿಂದಾಗಿ ಇಲ್ಲಿಂದ ಆ ರಾಜ್ಯಕ್ಕೆ ಸಾರಿಗೆ ಬಸ್‌ಗಳ ಕಾರ್ಯಾಚರಣೆಯನ್ನು 3ನೇ ದಿನವಾದ ಸೋಮವಾರವೂ ಸ್ಥಗಿತಗೊಳಿಸಲಾಯಿತು.

‘ಆ ರಾಜ್ಯಕ್ಕೆ ಬಸ್‌ಗಳ ಕಾರ್ಯಾಚರಣೆ ನಿಲ್ಲಿಸಿರುವುದರಿಂದ 3 ದಿನಗಳಲ್ಲಿ ₹ 50 ಲಕ್ಷ ನಷ್ಟವಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರಕ್ಕೆ ನಿತ್ಯ ತೆರಳುತ್ತಿದ್ದ 348 ಹಾಗೂ ಅಲ್ಲಿಂದ ಇಲ್ಲಿಗೆ ಬರುವ ಬಸ್‌ಗಳ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಪ್ರಯಾಣಿಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಕೊಲ್ಹಾಪುರ ವಿಭಾಗೀಯ ನಿಯಂತ್ರಣಾಧಿಕಾರಿ ಜೊತೆ ಮಾತನಾಡಿದ್ದೇನೆ. ಜಿಲ್ಲಾಧಿಕಾರಿ ಹಾಗೂ ಎಸ್ಪಿ ಜೊತೆ ಚರ್ಚಿಸಿ, ಮುಂದಿನ ಕ್ರಮದ ಬಗ್ಗೆ ತಿಳಿಸುವುದಾಗಿ ಹೇಳಿದ್ದಾರೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್. ಮುಂಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT