ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮ್ಮರಗುದ್ದಿ ಬಳಿ ಎಸ್​ಟಿಪಿ ನಿರ್ಮಿಸಿ: ಸತೀಶ ಜಾರಕಿಹೊಳಿ ಆಗ್ರಹ

Last Updated 7 ಜೂನ್ 2021, 15:37 IST
ಅಕ್ಷರ ಗಾತ್ರ

ಬೆಳಗಾವಿ: ‘ನಗರದಿಂದ ಹರಿಯುವ ಬಳ್ಳಾರಿ ನಾಲಾದ ಕಲುಷಿತ ನೀರನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ತಾಲ್ಲೂಕಿನ ತುಮ್ಮರಗುದ್ದಿ ಬಳಿ ಎಸ್‌ಟಿಪಿ (ಮಲಿನ ನೀರು ಶುದ್ಧೀಕರಣ ಘಟಕ) ನಿರ್ಮಿಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಸೋಮವಾರ ಭೇಟಿಯಾಗಿ ಚರ್ಚಿಸಿದ ಅವರು, ‘ಹಲಗಾ ಬಳಿ ಎಸ್‌ಟಿಪಿ ನಿರ್ಮಾಣ ಮಾಡಲಾಗುತ್ತಿದೆ. ನಗರದಿಂದ ಹರಿದುಬರುವ ಬಳ್ಳಾರಿ ನಾಲಾದ ಕಲುಷಿತ ನೀರಿನಿಂದ ಬೆಳಗಾವಿ, ಹುಕ್ಕೇರಿ ಹಾಗೂ ಗೋಕಾಕ ತಾಲ್ಲೂಕುಗಳ ಜನರಿಗೆ ಬಹಳಷ್ಟು ಸಮಸ್ಯೆ ಆಗುತ್ತಿದೆ. ನಾಲಾದ ನೀರನ್ನು ಸ್ವಚ್ಛ ಮಾಡಿ, ಬಿಡುವುದೇ ಇದಕ್ಕೆ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ತಿಳಿಸಿದರು.

‘ಕಬಲಾಪುರ ಹಾಗೂ ಸಿದ್ದನಹಳ್ಳಿ ಗ್ರಾಮದ ಮಧ್ಯೆ ಹರಿಯುವ ಬಳ್ಳಾರಿ ನಾಲಾಕ್ಕೆ ಅಡ್ಡಲಾಗಿ ಈಗಾಗಲೇ ₹ 600 ಕೋಟಿ ವೆಚ್ಚದಲ್ಲಿ ಆಣೆಕಟ್ಟು ನಿರ್ಮಿಸಲಾಗುತ್ತಿದೆ. ನೀರು ಆಣೆಕಟ್ಟು ಸೇರುವ ಮುನ್ನ ಸ್ವಚ್ಛಗೊಳಿಸುವುದರಿಂದ, ರೈತರು ಹಾಗೂ ಸುತ್ತಲಿನ ಗ್ರಾಮಗಳ ಜನರು ಹಾಗೂ ಜಾನುವಾರುಗೆ ಅನುಕೂಲ ಆಗುತ್ತದೆ. ತುಮ್ಮರಗುದ್ದಿ ಸಮೀಪದ ರೈಲ್ವೆ ಹಳಿ ಬಳಿ ಇರುವ ನಾಲಾ ಸೇತುವೆಯ ಹತ್ತಿರ ಎಸ್‌ಟಿಪಿ ನಿರ್ಮಿಸುವುದು ಉತ್ತಮ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಯೋಜನೆ ಸಿದ್ಧಪಡಿಸಬೇಕು’ ಎಂದು ಕೋರಿದರು.

ಪುನರ್ವಸತಿ ಕಲ್ಪಿಸಿ

‘ಕಬಲಾಪುರ ಹಾಗೂ ಸಿದ್ದನಹಳ್ಳಿ ಗ್ರಾಮದ ಮಧ್ಯೆ ಹರಿಯುವ ಬಳ್ಳಾರಿ ನಾಲಾಕ್ಕೆ ನಿರ್ಮಿಸಲಾಗುತ್ತಿರುವ ಆಣೆಕಟ್ಟೆಯಿಂದ ಭೂಮಿ ಕಳೆದುಕೊಂಡಿರುವ ಕಬಲಾಪುರ, ಸಿದ್ದನಹಳ್ಳಿ ಹಾಗೂ ಮಾಸ್ತಿಹೊಳಿ ಗ್ರಾಮಗಳ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಈ ಗ್ರಾಮಗಳು ಕಾಲುವೆಯ ಹಿನ್ನೀರಿನಿಂದ ಮುಳುಗಡೆ ಆಗುತ್ತವೆ. ಹೀಗಾಗಿ, ಅವರಿಗೆ ಪುನರ್ವಸತಿ ಕಲ್ಪಿಸಿಕೊಡಬೇಕು’ ಎಂದು ಆಗ್ರಹಿಸಿದರು.

ಸ್ಪಂದಿಸಿದ ಜಿಲ್ಲಾಧಿಕಾರಿ, ‘ಈ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಮಹಾನಗರ ಪಾಲಿಕೆ, ನೀರಾವರಿ, ಅರಣ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಯಾನಿಟೈಸರ್ ವಿತರಣೆ

ಇದೇ ವೇಳೆ ಜಿಲ್ಲಾಧಿಕಾರಿ ಕಾರ್ಯಾಲಯದ ಸಿಬ್ಬಂದಿಗೆ ಸತೀಶ ತಮ್ಮ ಸತೀಶ ಶುಗರ್ಸ್ ವತಿಯಿಂದ ಸ್ಯಾನಿಟೈಸರ್ ಬಾಟಲಿಗಳನ್ನು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT