ಬುಧವಾರ, ಆಗಸ್ಟ್ 10, 2022
23 °C

ಕುರಿ, ಮೇಕೆ ಪರಿಹಾರ ಮುಂದುವರಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಕುರಿ ಮತ್ತು ಮೇಕೆಗಳು ಮೃತಪಟ್ಟರೆ ತಲಾ ₹ 5ಸಾವಿರ ಪರಿಹಾರವನ್ನು ಸಾಕುವವರಿಗೆ ನೀಡುವ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿಸಿದೆ. ಇದನ್ನು ಖಂಡಿಸಿ ಹಾಗೂ ಸೌಲಭ್ಯ ಮುಂದುವರಿಸುವಂತೆ ಆಗ್ರಹಿಸಿ ಪ್ರತಿಭಟನೆ ತೀವ್ರಗೊಳಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ಕುರಿ ಮತ್ತು ಮೇಕೆ ಮಹಾಮಂಡಲದ ಅಧ್ಯಕ್ಷ ಪಂಡಿತ್ ರಾವ್ ಚಿದ್ರಿ ತಿಳಿಸಿದರು.

‘ರೈತರು, ಕುರಿ ಮತ್ತು ಮೇಕೆ ಸಾಕಣೆ ಮಾಡುವವರಿಗೆ ಸಂಕಷ್ಟದ ಪರಿಸ್ಥಿತಿಯಲ್ಲಿ ಸಹಾಯವಾಗಲಿ ಎಂಬ ಉದ್ದೇಶದಿಂದ 2014ರಲ್ಲಿ ಪರಿಹಾರ ಯೋಜನೆ ಜಾರಿಗೊಳಿಸಲಾಗಿತ್ತು’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಜಿಲ್ಲೆಯೊಂದರಲ್ಲೇ 2014ರಿಂದ 2020ರ ಏಪ್ರಿಲ್‌ವರೆಗೆ ₹ 1.08 ಕೋಟಿ ಪರಿಹಾರ ವಿತರಣೆ ಮಾಡಲಾಗಿದೆ. ಏಪ್ರಿಲ್‌ನಿಂದ ಈವರೆಗೆ ₹ 51 ಲಕ್ಷ ಪರಿಹಾರ ಬರಬೇಕಾಗಿದೆ. ಆದರೆ, ಯೋಜನೆ ಸ್ಥಗಿತಗೊಳಿಸಿರುವುದರಿಂದ ಕುರಿಗಾಹಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ತಿಳಿಸಿದರು.

‘ಸರ್ಕಾರದ ಧೋರಣೆ ಖಂಡಿಸಿ ಕೊಪ್ಪಳ, ಬೀದರ್, ವಿಜಯಪುರ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿ‌ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದ್ದೇವೆ. ಅದೇ ರೀತಿ ಬೆಳಗಾವಿಯಲ್ಲೂ ಪ್ರತಿಭಟಿಸಲಾಗುವುದು. ಆಗಲೂ ಸರಕಾರ ಸ್ಪಂದಿಸದಿದ್ದರೆ ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾಧಿಕಾರಿ ಕಚೇರಿ ಎದುರು, ಕುರಿಗಳ ಕಳೆಬರ ಇಟ್ಟು ಪ್ರತಿಭಟಿಸಲಾಗುವುದು. ಬಳಿಕವೂ ಬೇಡಿಕೆ ಈಡೇರಿಸದಿದ್ದರೆ ಕುರಿಗಾಹಿಗಳಿಂದ ಬೆಂಗಳೂರು ಚಲೋ‌ ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.

‘ಈಗಿನ ಸರ್ಕಾರ ಮಹಾಮಂಡಲಕ್ಕೆ ಅನುದಾನ ನೀಡಿಲ್ಲ. ಮಹಾಮಂಡಲದ ಸೊಸೈಟಿಗಳಿಂದ ವಿತರಿಸಲು ಔಷಧವನ್ನೂ ಕೊಡುತ್ತಿಲ್ಲ. ಒಂದೇ ಸಮುದಾಯವಷ್ಟೇ ಕುರಿ ಮತ್ತು ಮೇಕೆ ಸಾಕುತ್ತಿಲ್ಲ. ಹೀಗಾಗಿ, ಸರ್ಕಾರ ಕುರಿ ಸಾಕುವವರನ್ನು ಕಡೆಗಣಿಸಬಾರದು’ ಎಂದು ಒತ್ತಾಯಿಸಿದರು.

ಮಹಾಮಂಡಲದ ನಿರ್ದೇಶಕರಾದ ಗಜಾನನ ಕೊಳ್ಳಿ, ಎಸ್.ವಿ. ಲಿಂಗರಾಜ, ಸಂಗಮೇಶ ವಾಲೀಕಾರ, ರಾಜ್ಯ ಕುರುಬರ ಸಂಘ ಉಪಾಧ್ಯಕ್ಷ ಶಂಕರ ಹೆಗಡೆ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.