ಮಂಗಳವಾರ, ಡಿಸೆಂಬರ್ 7, 2021
23 °C

‘ಕಿತ್ತೂರು ಕರ್ನಾಟಕ’ ಘೋಷಣೆ: ಉತ್ಸವದಲ್ಲೇ ಪ್ರಕಟಿಸುವಂತೆ ಮುಖ್ಯಮಂತ್ರಿಗೆ ಪಟ್ಟು

ಎಂ. ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮುಂಬೈ ಕರ್ನಾಟಕ ಪ್ರದೇಶವನ್ನು ‘ಕಿತ್ತೂರು ಕರ್ನಾಟಕ’ ಎಂದು ಮರುನಾಮಕರಣ ಮಾಡುವ ಬಗ್ಗೆ ಘೋಷಿಸುವಂತೆ ಇಲ್ಲಿನ ಜನರು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಅ.23ರಂದು ಜಿಲ್ಲೆಯ ಚನ್ನಮ್ಮನ ಕಿತ್ತೂರಿನಲ್ಲಿ ಆರಂಭಗೊಳ್ಳಲಿರುವ ‘ಚನ್ನಮ್ಮನ ಕಿತ್ತೂರು ಉತ್ಸವ’ದಲ್ಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಘೋಷಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ಜನರು ಕೂಡ ನಿರೀಕ್ಷಿಸುತ್ತಿದ್ದಾರೆ. ಪ್ರಸ್ತುತ ಜಿಲ್ಲಾ ಮಟ್ಟದ್ದಾಗಿರುವ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಘೋಷಿಸಬೇಕು ಎಂಬ ಬೇಡಿಕೆಯೂ ಇದೆ.

‘ಮುಂಬೈ ಕರ್ನಾಟಕ’ ಎನ್ನುವುದು ದಾಸ್ಯದ ಸಂಕೇತವಾಗಿದೆ. ಅದರಿಂದ ಮುಕ್ತಿ ಕೊಟ್ಟು ನಮ್ಮ ಅಸ್ಮಿತೆಯನ್ನು ಪೋಷಿಸಬೇಕು ಎನ್ನುವ ಬಹುವರ್ಷಗಳ  ಬೇಡಿಕೆಗೆ ಈ ಭಾಗದವರೇ ಆಗಿರುವ ಬಸವರಾಜ ಸ್ಪಂದಿಸುವರೆ ಎನ್ನುವ ಕುತೂಹಲ ಎಲ್ಲರದ್ದಾಗಿದೆ. ಕರ್ನಾಟಕ ರಾಜ್ಯೋತ್ಸವದ ಈ ಕೊಡುಗೆಗೆ ಕಾಯುತ್ತಿದ್ದಾರೆ.

ಹಲವು ವರ್ಷಗಳ ಬೇಡಿಕೆ:

1956ರಲ್ಲಿ ಕರ್ನಾಟಕ ಏಕೀಕರಣವಾಯಿತು. ಮುಂಬೈ ಪ್ರಾಂತ್ಯದಲ್ಲಿನ 4 ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ವಿಜಯಪುರ ಮತ್ತು ಉತ್ತರ ಕನ್ನಡ (ಪ್ರಸ್ತುತ ಗದಗ, ಹಾವೇರಿ ಮತ್ತು ಬಾಗಲಕೋಟೆ ಸೇರಿ 7 ಜಿಲ್ಲೆಗಳು) ಅಖಂಡ ಕರ್ನಾಟಕಕ್ಕೆ ಸೇರಿ 65 ವರ್ಷಗಳಾಗಿವೆ. ಈಗಲೂ ಈ ಭಾಗಕ್ಕೆ ಮುಂಬೈ ಕರ್ನಾಟಕವೆಂದೇ ಕರೆಯಲಾಗುತ್ತಿದೆ.

‘ಹೈದರಾಬಾದ್‌ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಎಂದು ಕರೆಯುವುದು ದಾಸ್ಯದ ಸಂಕೇತ. ಅವುಗಳನ್ನು ಕ್ರಮವಾಗಿ ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕು’ ಎಂದು ಖ್ಯಾತ ಸಂಶೋಧಕ ದಿ.ಚಿದಾನಂದ ಮೂರ್ತಿ ಬಲವಾಗಿ ಪ್ರತಿಪಾದಿಸಿದ್ದರು. ಹಲವು ಬಾರಿ ಸರ್ಕಾರದ ಗಮನ ಸೆಳೆದಿದ್ದರು.

‘ಮರುನಾಮಕರಣದ ಬಗ್ಗೆ ಹಿಂದಿನಿಂದಲೂ ಒತ್ತಾಯಿಸುತ್ತಿದ್ದೇವೆ. ಜಾಗೃತಿ ಮೂಡಿಸುವ ಕೆಲಸದಲ್ಲೂ ತೊಡಗಿದ್ದೇವೆ. ಬೆಳಗಾವಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ಕರಪತ್ರಗಳನ್ನೂ ಹಂಚಿದ್ದೇವೆ. ಈ ಬೇಡಿಕೆಯನ್ನು ನಾಡಿನ ಅನೇಕ ಸಂಘಟನೆಗಳವರು, ಚಿಂತಕರು ಮತ್ತು ಹೋರಾಟಗಾರರು ಬೆಂಬಲಿಸಿದ್ದಾರೆ. ಸರ್ಕಾರದ ಗಮನಕ್ಕೂ ತಂದಿದ್ದೇವೆ. ಆದರೆ, ಸ್ಪಂದನೆ ಸಿಕ್ಕಿಲ್ಲ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನವರ ಬೇಡಿಕೆ ಪರಿಗಣಿಸಲಿಲ್ಲ:

‘ಹೈದರಾಬಾದ್‌ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಲು ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕ್ರಮ ಕೈಗೊಂಡರು. 2019ರ ಸೆ.7ರಂದು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಯಿತು. ಸೆ.17ರಂದು ಹೈದರಾಬಾದ್‌ ವಿಮೋಚನಾ ದಿನದಂದು ಯಡಿಯೂರಪ್ಪ ಅವರು ಕಲಬುರ್ಗಿಯಲ್ಲೇ ಅಧಿಕೃತ ಘೋಷಣೆ ಮಾಡಿದರು. ಆದರೆ, ಕಿತ್ತೂರು ಕರ್ನಾಟಕದ ಬಗ್ಗೆ ಗಮನಿಸಲಿಲ್ಲ. ಮುಂಬೈ ಕರ್ನಾಟಕದ ಯಾವ ಶಾಸಕರೂ ಮನವಿ ಸಲ್ಲಿಸದಿರುವುದೂ ಖಂಡನೀಯ’ ಎನ್ನುತ್ತಾರೆ ಅವರು.

‘ಅವಕಾಶ ಕಳೆದುಕೊಳ್ಳದಿರಲಿ’

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ 2 ಬಾರಿ ಮನವಿ ಸಲ್ಲಿಸಿದ್ದೇವೆ. ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಈ ಭಾಗಕ್ಕೇ ಸೇರಿದ ಅವರಿಗೆ ಈ ಬಗ್ಗೆ ನೈತಿಕ ಹೊಣೆಗಾರಿಕೆಯೂ ಇದೆ. ಈ ಸುವರ್ಣ ಅವಕಾಶವನ್ನು ಕಳೆದುಕೊಳ್ಳಬಾರದು. ಬ್ರಿಟಿಷರ ವಿರುದ್ಧ ಸಿಡಿದೆದ್ದ ರಾಣಿ ಚನ್ನಮ್ಮಳ ಸಂಸ್ಥಾನವಾಗಿದ್ದ ಕಿತ್ತೂರು ಕೇವಲ ಬೆಳಗಾವಿ ಜಿಲ್ಲೆಗೆ ಸೇರಿದ್ದೆಂದು ಇತರ ಜಿಲ್ಲೆಯವರು ಭಾವಿಸಬಾರದು. ಕಿತ್ತೂರು ಇಡೀ ದೇಶಕ್ಕೆ ಸೇರಿದ್ದು. ಝಾನ್ಸಿ ರಾಣಿ ಲಕ್ಷ್ಮೀಬಾಯಿಗಿಂತಲೂ 32 ವರ್ಷ ಮೊದಲೇ ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಬಂಡಾಯದ ಕಹಳೆ ಮೊಳಗಿದ್ದರು. ಇಲ್ಲಿಗೆ ಆಕೆಯ ಸಂಸ್ಥಾನವಾಗಿದ್ದ ಕಿತ್ತೂರಿನ ಹೆಸರಿಡುವುದು ಭೂಷಣ. ಇದಕ್ಕೆ ಹಣವೇನೂ ಬೇಕಾಗುವುದಿಲ್ಲ’ ಎನ್ನುತ್ತಾರೆ ಅವರು.

***

ಗೌರವಿಸಬೇಕು

ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಮಾಡುವ ಘೋಷಣೆಯನ್ನು ಮುಖ್ಯಮಂತ್ರಿಯು ಕಿತ್ತೂರು ಉತ್ಸವದಲ್ಲೇ ಮಾಡಬೇಕು. ಈ ಭಾಗದ ಜನರ ಅಸ್ಮಿತೆಯನ್ನು ಗೌರವಿಸಬೇಕು.

–ಅಶೋಕ ಪೂಜಾರಿ, ಅಧ್ಯಕ್ಷ, ಉತ್ತರ ಕರ್ನಾಟಕ ವಿಕಾಸ ವೇದಿಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು