ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ‘ಮಳೆಗಾಲದ ಅಧಿವೇಶನ’ಕ್ಕೆ ಹೆಚ್ಚಿದ ಒತ್ತಡ

ಸುವರ್ಣ ವಿಧಾನಸೌಧದಲ್ಲೇ ನಡೆಸಲು ಆಗ್ರಹ
Last Updated 14 ಜುಲೈ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ‘ಈ ಬಾರಿಯ ವಿಧಾನಮಂಡಲ ಮಳೆಗಾಲದ ಅಧಿವೇಶನವನ್ನು ಇಲ್ಲಿನ ಸುವರ್ಣ ವಿಧಾನಸೌಧದಲ್ಲಿಯೇ ನಡೆಸಬೇಕು ಮತ್ತು ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂಬ ಒತ್ತಾಯ ತೀವ್ರವಾಗಿ ಕೇಳಿಬಂದಿದೆ.

2018ರಲ್ಲಿ ಇಲ್ಲಿ ಚಳಿಗಾಲದ ಅಧಿವೇಶನ ನಡೆದಿತ್ತು. 2019ರಲ್ಲಿ, ಜಿಲ್ಲೆಯಲ್ಲಿ ಹಿಂದೆಂದೂ ಕಂಡು–ಕೇಳರಿಯದ ರೀತಿಯಲ್ಲಿ ನೆರೆ ಹಾಗೂ ಅತಿವೃಷ್ಟಿ ಉಂಟಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಸಂಭವಿಸಿತ್ತು. ಸಾವಿರಾರು ಮಂದಿ ಸಂತ್ರಸ್ತರಾಗಿದ್ದರು. ಹೀಗಾಗಿ, ನೆರೆ ಪರಿಹಾರ ಕಾರ್ಯಗಳಲ್ಲಿ ಅಧಿಕಾರಿಗಳು ತೊಡಗಬೇಕು; ಅವರಿಗೆ ಸಮಯ ಬೇಕು; ಅಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸಲಾಗುವುದು ಎಂದು ಸರ್ಕಾರ ಹೇಳಿತ್ತು. ಹೋದ ವರ್ಷ ಕೋವಿಡ್-19 ಕಾರಣ ಹೇಳಿ ಚಳಿಗಾಲದ ಅಧಿವೇಶನವನ್ನು ಬೆಂಗಳೂರಿನಲ್ಲೇ ಮುಗಿಸಲಾಯಿತು.

‘ಉಪ ಮುಖ್ಯಮಂತ್ರಿ ಸೇರಿದಂತೆ ನಾಲ್ವರು (ಹೋದ ವರ್ಷ) ಪ್ರಭಾವಿ ಸಚಿವರು, ವಿಧಾನಸಭಾ ಉಪಾಧ್ಯಕ್ಷ, ವಿಧಾನಪರಿಷತ್ ಮುಖ್ಯಸಚೇತಕರು ಇಲ್ಲಿಯವರೇ ಆಗಿದ್ದರೂ ನಿಯಮಿತವಾಗಿ ಅಧಿವೇಶನ ನಡೆಯುವಂತೆ ನೋಡಿಕೊಳ್ಳುವಲ್ಲಿ ವಿಫಲವಾಗಿದ್ದಾರೆ’ ಎಂಬ ಟೀಕೆಗಳು ಜನರಿಂದ ವ್ಯಕ್ತವಾಗಿದ್ದವು.

ಪತ್ರ ಬರೆದು ಮನವಿ: ಹೀಗಾಗಿ, ಈ ಬಾರಿ ಚಳಿಗಾಲದ ಅಧಿವೇಶನಕ್ಕಾಗಿಯೇ ಒತ್ತಡ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಹಲವು ಮುಖಂಡರು ದನಿ ಎತ್ತಿದ್ದಾರೆ. ಈ ಭಾಗದವರೇ ಆದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ 15 ದಿನಗಳ ಹಿಂದೆಯೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿ ಗಮನಸೆಳೆದಿದ್ದಾರೆ. ಅವರೊಂದಿಗೆ ವಿಧಾನಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಕೂಡ ದನಿ ಎತ್ತಿದ್ದಾರೆ. ಬಿಜೆಪಿ ಮುಖಂಡರಲ್ಲೊಬ್ಬರಾದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅವರೂ ದನಿಗೂಡಿಸಿದ್ದಾರೆ. ಇಲ್ಲಿನ ಜನಪರ ಹೋರಾಟಗಾರರ ಆಗ್ರಹವೂ ಇದೇ ಆಗಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ಒತ್ತಾಯಿಸಿದ್ದಾರೆ. ಹೀಗಾಗಿ, ಸಚಿವ ಸಂಪುಟ ಸಭೆಯ ತೀರ್ಮಾನದತ್ತ ಇಲ್ಲಿನವರ ನೋಟ ನೆಟ್ಟಿದೆ.

ಈ ಭಾಗದ ಜನರಿಗೆ ಅನುಕೂಲ ಆಗುವಂತಹ ರಾಜ್ಯ ಮಟ್ಟದ ಪ್ರಮುಖ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳದಿರುವುದು ಮತ್ತು ಅಧಿವೇಶನ ನಡೆಸುವುದನ್ನೂ ತಪ್ಪಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರವು ಉತ್ತರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತಾಳುತ್ತಿದೆ ಎಂದು ಕಟುವಾದ ಮಾತುಗಳಲ್ಲಿ ಟೀಕಿಸುತ್ತಿದ್ದಾರೆ.

ಮಳೆಗಾಲದ ಅಧಿವೇಶನ ಮೊನ್ನೆ ನಡೆದಿದೆ: ಸುವರ್ಣ ವಿಧಾನಸೌಧ ನಿರ್ಮಾಣವಾದ ನಂತರ ವರ್ಷದಲ್ಲಿ 10 ದಿನಗಳು ವಿಧಾನಮಂಡಲ ಅಧಿವೇಶನವನ್ನು ನಡೆಸಲಾಗುತ್ತಿತ್ತು. ಚಳಿಗಾಲದ ಅಧಿವೇಶನಕ್ಕೆ ಆದ್ಯತೆ ನೀಡಲಾಗುತ್ತಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಅಂದರೆ 2015ರಲ್ಲಿ ಇಲ್ಲಿ ಮಳೆಗಾಲದ ಅಧಿವೇಶನ ನಡೆದಿತ್ತು. ಸತತ ಎರಡು ವರ್ಷ ಅಧಿವೇಶನ ವಂಚಿತವಾಗಿದೆ.

‘ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಬೇಕಾಗುತ್ತದೆ. ಕೋವಿಡ್ ಪರಿಸ್ಥಿತಿ ಇರುವುದರಿಂದಾಗಿ ಆರ್ಥಿಕ ಬಿಕ್ಕಟ್ಟು ಕೂಡ ಎದುರಾಗಿದೆ. ಇಲ್ಲಿ ಅಧಿವೇಶನ ನಡೆಸುವುದರಿಂದ ಆಗುವ ವೆಚ್ಚವನ್ನೂ ಪರಿಗಣಿಸಬೇಕಾಗುತ್ತದೆ. ಹೀಗಾಗಿ, ಮಳೆಗಾಲದ ಅಧಿವೇಶನಕ್ಕೆ ಆದ್ಯತೆ ಸಿಗುವುದು ಅನುಮಾನ. ಚಳಿಗಾಲದ ಅಧಿವೇಶನಕ್ಕೆ ಒತ್ತಡ ಹೇರಲಾಗುವುದು’ ಎಂದು ಬಿಜೆಪಿ ಮುಖಂಡರೊಬ್ಬರು ಪ್ರತಿಕ್ರಿಯಿಸಿದರು.

‘ಅಧಿವೇಶನಕ್ಕೆ ಬಹಳಷ್ಟು ಪೂರ್ವ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಪ್ರತಿಭಟನೆಗಳಿಗೆ ಅಲ್ಲಲ್ಲಿ ‌ಸ್ಥಳವನ್ನು ಸಜ್ಜುಗೊಳಿಸಬೇಕಾಗುತ್ತದೆ. ಕೋವಿಡ್ ನಿರ್ವಹಣೆಯ ಜವಾಬ್ದಾರಿಯೂ ಇದೆ. ಸರ್ಕಾರದ ನಿರ್ದೇಶನದಂತೆ ಕ್ರಮ ವಹಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

**
ಹೆದರುತ್ತಿರುವ ಸರ್ಕಾರ
ರೈತರು, ಸಂತ್ರಸ್ತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರವು, ಜನರಿಗೆ ಉತ್ತರ ಕೊಡಲಾಗದೆ ಪಲಾಯನ ಮಾಡುತ್ತಿದೆ. ಇಲ್ಲಿ ಅಧಿವೇಶನ ನಡೆಸಲು ಹೆದರುತ್ತಿದೆ.
–ಸತೀಶ ಜಾರಕಿಹೊಳಿ, ಕಾರ್ಯಾಧ್ಯಕ್ಷ, ಕೆಪಿಸಿಸಿ

**
ಮುಖ್ಯಮಂತ್ರಿ ಸ್ಪಂದಿಸುತ್ತಾರೆ
ಉತ್ತರ ಕರ್ನಾಟಕದ ಶಕ್ತಿ ಕೇಂದ್ರವಾದ ಸುವರ್ಣ ವಿಧಾನಸೌಧದಲ್ಲಿ ಈ ಬಾರಿ ಅಧಿವೇಶನ ನಡೆಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸುವೆ. ಅದಕ್ಕೆ ಸ್ಪಂದಿಸುತ್ತಾರೆ ಎಂಬ ಭರವಸೆ ಇದೆ.
–ಮಹಾಂತೇಶ ಕವಟಗಿಮಠ, ಮುಖ್ಯಸಚೇತಕ, ವಿಧಾನಪರಿಷತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT