ಸಂತೋಷ ಈ. ಚಿನಗುಡಿ
ಬೆಳಗಾವಿ: ಮಳೆಗಾಲದ ಆರಂಭದಿಂದಲೂ ಜಿಲ್ಲೆಯಲ್ಲಿ ಸಣ್ಣದಾಗಿ ಕಾಣಿಸಿಕೊಳ್ಳುತ್ತಿದ್ದ ಡೆಂಗಿ ಈಗ ದಾಂಗುಡಿ ಇಡುತ್ತಿದೆ. ಜುಲೈ 29ರವರೆಗೆ ಒಟ್ಟು 115 ಡೆಂಗಿ ಪೀಡಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈಗಾಗಲೇ ಆರೋಗ್ಯ ಇಲಾಖೆಯಿಂದ ಕೂಡ ಜಾಗೃತಿ ಹಾಗೂ ಪರಿಹಾರ ಕಾರ್ಯಗಳನ್ನು ಆರಂಭಿಸಲಾಗಿದೆ.
ಜಿಲ್ಲೆಯಲ್ಲಿ ಎಲ್ಲಕ್ಕಿಂತ ಮುಂಚೂಣಿಯಲ್ಲಿರುವುದು ಬೈಲಹೊಂಗಲ ತಾಲ್ಲೂಕು. 60ಕ್ಕೂ ಹೆಚ್ಚು ಡೆಂಗಿ ಪ್ರಕರಣಗಳು ಈ ತಾಲ್ಲೂಕಿನಲ್ಲಿ ಕಂಡುಬಂದಿವೆ. ಎರಡನೇ ಸ್ಥಾನದಲ್ಲಿ ಬೆಳಗಾವಿ ನಗರವಿದೆ. ನಗರದ ಅನಗೋಳ, ಉದ್ಯಮಭಾಗ, ನಾನಾವಾಡಿ, ಪೀರನವಾಡಿ ಸೇರಿದಂತೆ ಕೈಗಾರಿಕಾ ಪ್ರದೇಶದಲ್ಲೇ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ 20 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂರನೇ ಸ್ಥಾನದಲ್ಲಿ ಖಾನಾಪುರ (19) ತಾಲ್ಲೂಕು ಇದೆ. ಖಾನಾಪುರ ಪಟ್ಟಣ, ಪಾರಿಶ್ವಾಡ, ಗಣಿಬೈಲ್ ಮುಂತಾದ ಊರುಗಳ ಬಳಿ ಗಣಿಗಾರಿಕೆ ಇರುವ ಕಾರಣ ಅಲ್ಲಿ ಡೆಂಗಿ ಸೊಳ್ಳೆಗಳು ಹೆಚ್ಚಾಗಿ ಉತ್ಪತ್ತಿಯಾಗುತ್ತಿವೆ. ನಂತರದ ಸ್ಥಾನದಲ್ಲಿ ಅಥಣಿ, ಚಿಕ್ಕೋಡಿ, ರಾಯಬಾಗ ಹಾಗೂ ಗೋಕಾಕ ತಾಲ್ಲೂಕುಗಳು ಇವೆ.
ತಪಾಸಣೆ
ಡೆಂಗಿ ಸೊಳ್ಳೆಗಳು ಹುಟ್ಟುವ ಜಾಗದ ಪತ್ತೆ ಹಾಗೂ ನಿಯಂತ್ರಣಕ್ಕೆ ತುರ್ತು ಕ್ರಮ ವಹಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿಯ ಜತೆಗೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ಪ್ರತಿ ಮಳೆಗಾಲದ ಆರಂಭದಲ್ಲಿ ಡೆಂಗಿ ಸೊಳ್ಳೆಗಳು ಹುಟ್ಟುವುದು ಸಾಮಾನ್ಯ. ಪ್ರತಿ ತಿಂಗಳು ಇಲಾಖೆಯಿಂದ 12 ಲಕ್ಷ ಮನೆಗಳ ಸರ್ವೆ ಮಾಡಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಕೋಣಿ ತಿಳಿಸಿದರು.
ಆದರೆ, ಮುಂಜಾಗ್ರತಾ ಕ್ರಮಗಳು ಸೂಕ್ತವಾಗಿಲ್ಲ ಎನ್ನುವುದು ಜನರ ತಕರಾರು. ಲಾರ್ವ ಸಮೀಕ್ಷೆ, ಅರಿವು ಮೂಡಿಸುವುದು, ತ್ಯಾಜ್ಯ ವಿಲೇವಾರಿ, ಔಷಧ ಸಂಗ್ರಹ, ಬಿಳಿರಕ್ತ ಕಣಗಳ ಸಂಗ್ರಹ ಸೇರಿದಂತೆ ಇನ್ನಷ್ಟು ಮುಂಜಾಗ್ರತಾ ಕ್ರಮಗಳು ಅಗತ್ಯ ಎನ್ನುತ್ತಾರೆ ಸೋಂಕಿತರು.
ಇನ್ನೂ ಹೆಚ್ಚಲಿದೆ ಸೋಂಕು
‘ಈಡೀಸ್ ಈಜಿಪ್ಟೈ’ ಎಂಬ ಸೊಳ್ಳೆ ಕಚ್ಚುವುದರಿಂದ ಡೆಂಗಿ ಬರುತ್ತದೆ. ಶುದ್ಧ ನೀರಿನಲ್ಲಿ ಹುಟ್ಟುವುದೇ ಈ ಸೊಳ್ಳೆಯ ಅಪಾಯಕಾರಿ ಗುಣ. ಇದೊಂದೇ ಸೊಳ್ಳೆಯಿಂದ ಡೆಂಗಿ, ಚಿಕೂನ್ ಗುನ್ಯ ಹಾಗೂ ಜೀಕಾ (ಮಿದುಳು ಬೆಳವಣಿಗೆಗೆ ಸಮಸ್ಯೆ) ಸೋಂಕುಗಳು ಹುಟ್ಟುತ್ತವೆ. ಸದ್ಯ ಮಳೆ ಬಂದು ಎಲ್ಲೆಂದರಲ್ಲಿ ನೀರು ನಿಂತಿದೆ. ಟ್ಯೂಬ್, ಟಯರ್, ತೆಂಗಿನ ಚಿಪ್ಪು, ಗಣಿಗಾರಿಕೆಗೆ ಅಗೆದ ತಗ್ಗು ಮಾತ್ರವಲ್ಲ; ಬಹಳ ದಿನಗಳವರೆಗೆ ಮನೆಯಲ್ಲಿ ನೀರು ಸಂಗ್ರಹಿಸಿ ಇಟ್ಟ ಪಾತ್ರೆಗಳಲ್ಲೂ ಈ ಸೊಳ್ಳೆ ಹುಟ್ಟಿಕೊಳ್ಳುತ್ತದೆ.
ಮಳೆಗಾಲದಲ್ಲಿ ಡೆಂಗಿ ಸೊಳ್ಳೆ ಹುಟ್ಟುವುದು ಸಾಮಾನ್ಯ. ಇದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಎಲ್ಲ ಕ್ರಮ ಕೈಗೊಂಡಿದೆ. ಮನೆಮನೆ ಸಮೀಕ್ಷೆ ಆರಂಭಿಸಲಾಗಿದೆ. ಎಲ್ಲೆಂದರಲ್ಲಿ ನೀರು ನಿಲ್ಲದಂತೆ ಅರಿವು ಮೂಡಿಲಾಗುತ್ತಿದೆ. ಇದೂವರೆಗೆ ಯಾವುದೇ ಸಾವು ಸಂಭವಿಸಿಲ್ಲ. ಇಲಾಖೆಯ ಸಿಬ್ಬಂದಿ ಮುಂಜಾಗ್ರತಾ ಕ್ರಮ ವಹಿಸಿದ್ದಾರೆ. ಜನ ಭಯಪಡಬೇಕಿಲ್ಲ. –ಡಾ.ಮಹೇಶ ಕೋಣಿ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಮನೆ ಬಳಕೆಯ ವಸ್ತುಗಳು, ಕಟ್ಟಡ ನಿರ್ಮಾಣ ಸಾಮಗ್ರಿಗಳು, ಪ್ಲಾಸ್ಟಿಕ್ ಬ್ಯಾಗ್, ಪ್ಲಾಸ್ಟಿಕ್ ಬಕೆಟ್, ಬುಟ್ಟಿ, ಕೊಡ, ವಾಹನಗಳ ಟೈರ್, ಟ್ಯೂಬ್‌ಗಳ ತುಂಡುಗಳನ್ನು ಎಲ್ಲೆಂದರಲ್ಲಿ ಬಿಸಾಕುವುದು ರೂಢಿ. ಅಂಥ ವಸ್ತುಗಳಲ್ಲಿ ಮಳೆ ನೀರು ನಿಲ್ಲುತ್ತದೆ. ಒಂದು ಸೊಳ್ಳೆ ಒಂದು ಹನಿ ನೀರಿನಲ್ಲಿಯೂ ಮೊಟ್ಟೆ ಇಡಬಲ್ಲದು. ಹೀಗೆ ಒಂದು ಬಾರಿಗೆ ಒಂದು ಸೊಳ್ಳೆ 300ರಿಂದ 350 ಮೊಟ್ಟೆಗಳನ್ನು ಇಡುತ್ತದೆ. ಒಂದೇ ವಾರದಲ್ಲಿ ಅವೆಲ್ಲವೂ ರೆಕ್ಕೆ ಬೆಳೆದು ಹಾರಾಡಲು ಶುರು ಮಾಡುತ್ತವೆ. ಅಂದರೆ ಎಲ್ಲಿ ಒಂದು ಸೊಳ್ಳೆ ಪತ್ತೆಯಾಗುತ್ತದೆಯೋ ಅಲ್ಲಿ ಒಂದೇ ವಾರದಲ್ಲಿ ಸಾವಿರ– ಸಾವಿರ ಸಂಖ್ಯೆಯಲ್ಲಿ ಹುಟ್ಟುತ್ತವೆ ಎನ್ನುತ್ತಾರೆ ಕೀಟಶಾಸ್ತ್ರಜ್ಞರು.
ಪರಿಹಾರ ಕ್ರಮ
’ಡೆಂಗಿ ಸೊಳ್ಳೆ ಹುಟ್ಟದಂತೆ ಎಚ್ಚರಿಕೆ ವಹಿಸಲು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಯಾವುದೇ ಊರಲ್ಲಿ ಪ್ರಕರಣ ಕಂಡುಬಂದರೂ ಸ್ಥಳ ಪರಿಶೀಲನೆ ನಡೆಸಿ, ನಿಂತ ನೀರಿನಲ್ಲಿ ಟೆಮಿಫಾಸ್ ದ್ರಾವಣ ಸುರಿದು ಸೊಳ್ಳೆಯ ಲಾರ್ವ ನಾಶ ಮಾಡಲಾಗುತ್ತಿದೆ. ಒಂದೇ ಸ್ಥಳದಲ್ಲಿ ಹೆಚ್ಚು ಪ್ರಕರಣ ಕಂಡುಬಂದರೆ ಫಾಗಿಂಗ್ ಮಾಡಲಾಗುತ್ತದೆ. ಟೈರ್, ತೆಂಗಿನಕಾಯಿ ಚಿಪ್ಪುಗಳನ್ನು ಹಾಗೇ ಬಿಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎನ್ನುವುದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳ ಮಾಹಿತಿ.
ಡೆಂಗಿ ಚಿಕೂನ್ ಗುನ್ಯ ವೈರಾಣು ಹರಡುವಿಕೆಯನ್ನು ತುರ್ತಾಗಿ ತಡೆಗಟ್ಟಬೇಕು. ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಫಾಗಿಂಗ್ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕು. ನಿಂತ ನೀರನ್ನು ಹರಿದು ಹೋಗುವಂತೆ ನೋಡಿಕೊಳ್ಳಬೇಕು. ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪೂರಕ ವ್ಯವಸ್ಥೆ ಕಲ್ಪಿಸಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ನಾಗರಿಕರಲ್ಲಿ ಅರಿವು ಮೂಡಿಸಬೇಕು.ಸೋಮನಾಥ ಸೊಪ್ಪಿಮಠ
ವೈದ್ಯರ ಸಲಹೆ ಏನು?
ಮನೆಯಲ್ಲಿ ವಾಟರ್ ಫಿಲ್ಟರ್ ಬಕೀಟ್ ಟ್ಯಾಂಕ್ ಜಗಲಿಕಟ್ಟೆ ಡ್ರಮ್‌ಗಳನ್ನು ಎರಡು ದಿನಕ್ಕೊಮ್ಮೆ ಚೆನ್ನಾಗಿ ಉಜ್ಜಿ ತೊಳೆಯಿರಿ
ಈ ಎಲ್ಲ ಪಾತ್ರೆಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಬಿಸಲಲ್ಲಿ ಒಣಗಿಸಬೇಕು
ಮನೆಯ ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸಿ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ
ಮಕ್ಕಳಿಗೆ ಉದ್ದ ತೋಳಿನ ಉಲನ್ ಬಟ್ಟೆ ಹಾಕಿದರೆ ಸೊಳ್ಳೆ ಕಚ್ಚುವುದಿಲ್ಲ
ಮಲಗುವಾಗ ಸೊಳ್ಳೆಪರದೆಗಳನ್ನು ಕಡ್ಡಾಯವಾಗಿ ಬಳಸಿ
ಪ್ರತಿದಿನ ಬೇವಿನ ತಪ್ಪಲು ಲೋಬಾನ ಹೊಗೆ ಅಥವಾ ಸೊಳ್ಳೆ ಬತ್ತಿಗಳನ್ನು ಉರಿಸಿ
ಸಣ್ಣ ಪ್ರಮಾಣದ ಜ್ವರ ತಲೆನೋವು ಸುಸ್ತು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ
ಬೈಲಹೊಂಗಲ ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗಿವೆ. ಆರೋಗ್ಯ ಇಲಾಖೆ ಪೂರ್ವ ತಯಾರಿ ಮಾಡಿಕೊಳ್ಳದಿರುವುದೇ ಇದಕ್ಕೆ ಕಾರಣ. ಕಳೆದ ಹತ್ತು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಜನರ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತಿದೆ. ಡೆಂಗಿ ಚಿಕೂನ್ ಗುನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂದು ಗೊತ್ತಿದ್ದರೂ ಆರೋಗ್ಯ ಇಲಾಖೆ ಪುರಸಭೆ ಅಧಿಕಾರಿಗಳು ತಕ್ಷಣ ಗಮನ ಹರಿಸಬೇಕಿತ್ತು.ರಾಜು ಸೊಗಲ, ಬೈಲಹೊಂಗಲ
ಸೊಳ್ಳೆ ಗುರುತಿಸುವುದು ಹೇಗೆ?
ಈಡೀಸ್ ಈಜಿಪ್ಟೈ ಸೊಳ್ಳೆ ಮೈಮೇಲೆ ಬಿಳಿಚುಕ್ಕೆಗಳು ಇರುವುದರಿಂದ ಸುಲಭವಾಗಿ ಗುರುತಿಸಬಹುದು. ಈ ಚುಕ್ಕೆಗಳ ಕಾರಣವೇ ಇದನ್ನು ‘ಟೈಗರ್ ಸೊಳ್ಳೆ’ ಎಂದೂ ಗುರುತಿಸಲಾಗುತ್ತದೆ. ಈ ಮೊಟ್ಟೆಗಳ ಗಟ್ಟಿತನ ಎಷ್ಟಿರುತ್ತದೆ ಎಂದರೆ ಯಾವುದೇ ವಸ್ತುವಿನಲ್ಲಿಯೂ ವರ್ಷದವರೆಗೆ ಅದು ಅಂಟಿಕೊಂಡಿರಬಲ್ಲದು. ಅದಕ್ಕೆ ನೀರಿನ ಸಂಪರ್ಕ ಬಂದ ತಕ್ಷಣ ಬೆಳವಣಿಗೆ ಶುರುವಾಗುತ್ತದೆ. ವಿಶೇಷವೆಂದರೆ ಈ ಸೊಳ್ಳೆ ಬೆಳಕಿನಲ್ಲಿ ಮಾತ್ರ ಕಚ್ಚುತ್ತದೆ. ಕಚ್ಚಿದಾಗ ನೋವು ಆಗುವುದಿಲ್ಲ. ಹೀಗಾಗಿ ಸೊಳ್ಳೆ ಯಾವಾಗ ಕಚ್ಚಿದೆ ಎಂಬುದೇ ಗೊತ್ತಾಗುವುದಿಲ್ಲ.
ಎಲ್ಲೆಲ್ಲಿ ಇವೆ ಲ್ಯಾಬ್?
ಬಿಮ್ಸ್ ಜಿಲ್ಲಾ ಆಸ್ಪತ್ರೆ ಕೆಎಲ್‌ಇಎಸ್ ಆಸ್ಪತ್ರೆ ಡಯಗ್ನಾಸ್ಟಿಕ್ ಸೆಂಟರ್ ಸೇರಿ ನಾಲ್ಕು ವಿಆರ್‌ಡಿಎಲ್ (ವೈರಸ್ ರಿಸರ್ಜ್ ಅಂಡ್ ಡಯಾಗ್ನಾಸ್ಟಿಕ್ ಲ್ಯಾಬ್) ಪ್ರಯೋಗಾಲಯಗಳು ಇವೆ. ವೈರಾಣು ಪರೀಕ್ಷೆ ನಿರಂತರವಾಗಿ ಸಾಗಿದೆ.
ತಿಳಿದಿರಬೇಕಾದ ಅಂಶಗಳು
ಡೆಂಗಿ ಜ್ವರದಲ್ಲಿ ಮೂರು ವಿಧ: ಸಾಧಾರಣ ಡೆಂಗಿ. ರಕ್ತಸ್ರಾವ ಡೆಂಗಿ. ಶಾಕ್ ಡೆಂಗಿ 104– ರಕ್ತ ಹಾಗೂ ರಕ್ತಕಣಗಳ ತುರ್ತು ಅಗತ್ಯಕ್ಕಾಗಿ ಕರೆ ಮಾಡಬೇಕಾದ ಸಹಾಯವಾಣಿ ಸಂಖ್ಯೆ ಜೀಕಾ: ಈಡಿಪಸ್ ಈಜಿಪ್ಟೈ ಸೊಳ್ಳೆಯಿಂದ ಬರುವ ಈ ರೋಗ ಹಸುಳೆಗಳನ್ನು ಬಾಧಿಸುತ್ತದೆ. ಗರ್ಭಿಣಿಯರು ತುಂಬ ಎಚ್ಚರಿಕೆ ವಹಿಸಬೇಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.