ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ರೈಲು ಮಾರ್ಗ: ಕಾಲಿಮಿತಿ ಇಲ್ಲ

ಅಂದಾಜುಪಟ್ಟಿ ಸಲ್ಲಿಕೆಯಾಗಿಲ್ಲ: ಸಚಿವ ಆನಂದ್ ಸಿಂಗ್
Last Updated 6 ಮಾರ್ಚ್ 2021, 15:48 IST
ಅಕ್ಷರ ಗಾತ್ರ

ಬೆಳಗಾವಿ: ‘ಧಾರವಾಡ–ಕಿತ್ತೂರು–ಬೆಳಗಾವಿ ನೂತನ ರೈಲು ಮಾರ್ಗದ ಯೋಜನೆ ಪೂರ್ಣಗೊಳಿಸಲು ಸದ್ಯಕ್ಕೆ ಕಾಲಮಿತಿ ನಿಗದಿಪಡಿಸುವುದು ಸಾಧ್ಯವಿಲ್ಲ’ ಎಂದು ಮೂಲಸೌಲಭ್ಯ ಅಭಿವೃದ್ಧಿ, ವಕ್ಫ್‌ ಹಾಗೂ ಹಜ್ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

ಇಲ್ಲಿಯವರೇ ಆಗಿರುವ ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅವರು ವಿಧಾನಮಂಡಲ ಅಧಿವೇಶನದಲ್ಲಿ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಮೇಲಿನಂತೆ ಲಿಖಿತ ಉತ್ತರ ನೀಡಿದ್ದಾರೆ.

‘ಹೊಸ ಮಾರ್ಗ ನಿರ್ಮಾಣದಿಂದ, ಎರಡೂ ನಗರಗಳ ನಡುವಿನ ರೈಲು ಪ್ರಯಾಣದ ಅವಧಿಯು 31 ಕಿ.ಮೀ. ಕಡಿಮೆ ಆಗಲಿದೆ. ನಿರ್ಮಾಣಕ್ಕೆ ಅಂದಾಜು ₹ 988.30 ಕೋಟಿ ಬೇಕಾಗುತ್ತದೆ. ಒಟ್ಟು 335 ಎಕರೆ ಜಮೀನಿನ ಅಗತ್ಯ ಇದೆ. ಶೇ 50ರಷ್ಟು ಅಂದರೆ ₹ 494.15 ಕೋಟಿಯನ್ನು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ. ವಿಸ್ತೃತ ಯೋಜನಾ ವರದಿಯು ಸಿದ್ಧವಾಗುತ್ತಿದ್ದು, ರೈಲ್ವೆ ಇಲಾಖೆಯು ನಿಖರವಾದ ಅಂದಾಜು ಪಟ್ಟಿ ಸಲ್ಲಿಸಿದ ಬಳಿಕ ಅಗತ್ಯವಿರುವ ಅನುದಾನ ಕಾಯ್ದಿರಿಸಲು ಕ್ರಮ ವಹಿಸಲಾಗುವುದು’ ಎಂದು ತಿಳಿಸಿದ್ದಾರೆ.

‘ಸಮಗ್ರ ಯೋಜನಾ ವರದಿ ಸಿದ್ಧವಾದ ನಂತರ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗುವುದು. ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದಿದ್ದಾರೆ.

‘ಸರ್ಕಾರದಿಂದ ಸಒದಗಿಸಿದ ಉತ್ತರ ಅಸಮರ್ಪಕವಾಗಿದೆ’ ಎಂದು ಕವಟಗಿಮಠ ಹೇಳಿದ್ದಾರೆ.

‘ಧಾರವಾಡ-ಬೆಳಗಾವಿ ನಡುವೆ ಹೊಸ ರೈಲು ಮಾರ್ಗ ನಿರ್ಮಾಣ ಮಾಡಬೇಕೆಂಬ ಈ ಭಾಗದ ಜನರ ಆಗ್ರಹ ನೆನ್ನೆ– ಮೊನ್ನೆಯದಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಇದೆ. ಪ್ರಸ್ತುತ ಧಾರವಾಡದಿಂದ ಬೆಳಗಾವಿ ತಲುಪಲು ನಾಲ್ಕು ತಾಸು ಸಮಯ ಬೇಕು. ಲೋಂಡಾ ಬಳಸಿಕೊಂಡು ಬೆಳಗಾವಿಗೆ ಬರಬೇಕು. ನೇರ ರೈಲು ಮಾರ್ಗ ನಿರ್ಮಾಣವಾದರೆ ಸಮಯ ಉಳಿತಾಯ ಆಗುತ್ತದೆ. ಕೇವಲ 45 ನಿಮಿಷಗಳಲ್ಲಿ ತಲುಪಬಹುದು. ಈ ಹಿನ್ನಲೆಯಲ್ಲಿ 1996ರಲ್ಲಿ ಆಗಿನ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಇದರ ಸರ್ವೇಗೆ ಆದೇಶ ಹೊರಡಿಸಿದ್ದರು. ಆದರೆ, ಕಳೆದ ವರ್ಷ ಸರ್ವೇ ಕಾರ್ಯ ನಡೆಸಲಾಗಿದೆ’ ಎಂದು ತಿಳಿಸಿದ್ದಾರೆ.

‘ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರ ಇಚ್ಛಾಶಕ್ತಿ ಫಲವಾಗಿ 2020–21ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಯೋಜನೆ ಘೋಷಿಸಲಾಗಿದೆ. ಕೇಂದ್ರ ಅನುದಾನವನ್ನೂ ಒದಗಿಸಿದೆ. ಇದಕ್ಕೆ ರಾಜ್ಯ ಸರ್ಕಾರವು ಪೂರಕವಾಗಿ ಸ್ಪಂದಿಸಿ ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಬೇಕಾಗಿದೆ. ಭೂ ಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಿ ಸಂಪೂರ್ಣ ಸಹಕಾರ ನೀಡಬೇಕಾದುದು ರಾಜ್ಯದ ಜವಾಬ್ದಾರಿ ಆಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜನರ ಬೇಡಿಕೆ ಈಡೇರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಈ ಬಾರಿಯ ಬಜೆಟ್‌ನಲ್ಲಿ ಯೋಜನೆಗೆ ಹಣಕಾಸು ಒದಗಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT