ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತ್ಯಸಂಸ್ಕಾರಕ್ಕೆ ಜಾಗ ಕಲ್ಪಿಸಿ; ಅಧಿಕಾರಿಗಳಿಗೆ ಗೋವಿಂದ ಕಾರಜೋಳ ಸೂಚನೆ

ಅಧಿಕಾರಿಗಳಿಗೆ ಗೋವಿಂದ ಕಾರಜೋಳ ಸೂಚನೆ
Last Updated 13 ಮೇ 2021, 8:26 IST
ಅಕ್ಷರ ಗಾತ್ರ

ಬೆಳಗಾವಿ: ‘ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಎದುರಾಗಿರುವ ಜಾಗದ ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ’ ಎಂದು ಉಪ ಮುಖ್ಯಮಂತ್ರಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಇಲ್ಲಿನ ಶ್ರೀನಗರದ ಆರೋಗ್ಯ ಕೇಂದ್ರದ ಆವರಣದಲ್ಲಿ ಪತ್ರಕರ್ತರೊಂದಿಗೆ ಗುರುವಾರ ಅವರು ಮಾತನಾಡಿದರು.

‘ನಗರ ಹಾಗೂ ಹಳ್ಳಿಗಳಲ್ಲಿ ಜಾಗದ ಕೊರತೆ ಉಂಟಾಗುತ್ತಿರುವ ಬಗ್ಗೆ ಬಹಳಷ್ಟು ದೂರುಗಳಿವೆ. ಕೋವಿಡ್ ಕಾರಣದಿಂದಾಗಿ ವಿಶೇಷವಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಅಂತ್ಯಸಂಸ್ಕಾರಕ್ಕೆ ಜಾಗ ಕೊಡಲು ಉಳ್ಳವರು ಬಯಸುತ್ತಿಲ್ಲ. ನಮ್ಮ ಜಮೀನಿಗೆ ಬರಬೇಡಿ ಎಂದು ಹೇಳುತ್ತಿರುವುದು ಕಂಡುಬಂದಿದೆ. ಹೀಗಾಗಿ, ಬಡವರಿಗೆ ಅಂತಿಮ ವಿಧಿವಿಧಾನ ನೆರವೇರಿಸಲು ತೊಂದರೆ ಆಗುತ್ತಿದೆ. ಆದ್ದರಿಂದ ಜಾಗ ಕಲ್ಪಿಸಬೇಕು. ಸರ್ಕಾರದ್ದು ಇಲ್ಲದಿದ್ದರೆ ಅನುಕೂಲ ಆಗುವ ಖಾಸಗಿಯವರ ಜಾಗವನ್ನು ತಾತ್ಕಾಲಿಕವಾಗಿ ಸ್ವಾಧೀನಪಡಿಸಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ’ ಎಂದರು.

ವಾಸ್ತವ ವರದಿ ಸಲ್ಲಿಕೆಗೆ ಆದೇಶ:

‘ಗೋಕಾಕ ಸರ್ಕಾರಿ ಆತ್ರೆಯಲ್ಲಿ ಆಮ್ಲಜನಕ ಪೂರೈಕೆ ಸರಿ ಇಲ್ಲ. ರೆಮ್‌ಡಿಸಿವಿರ್‌ ಚುಚ್ಚುಮದ್ದು ಇಲ್ಲ ಎನ್ನುವ ಬಗ್ಗೆ ಬಹಳ ದೂರುಗಳಿವೆ. ಡಿಎಚ್‌ಒ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ವರದಿ ಸಲ್ಲಿಸಬೇಕು. ಅಥಣಿಯಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಿಸಬೇಕು. ಕಟ್ಟಿಗೆ ಕೊರತೆ ಇದ್ದರೆ ಅರಣ್ಯ ಇಲಾಖೆಯಿಂದ ನೀಡಲು ಕ್ರಮ ವಹಿಸಬೇಕು. ಅಸಹಾಯಕರಿದ್ದರೆ ಉಚಿತವಾಗಿಯೇ ಕೊಡಿಸಬೇಕು. ಆಯುಷ್ ಕಿಟ್‌ಗಳನ್ನು ಮನೆ ಮನೆಗೆ ತಲುಪಿಸಬೇಕು ಎಂದು ತಿಳಿಸಲಾಗಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಆಮ್ಲಜನಕ ಸೌಲಭ್ಯವುಳ್ಳ ಹಾಸಿಗೆಗೆಳ ಕೊರತೆ ಇದೆ. ಪರಿಸ್ಥಿತಿ ಸುಧಾರಿಸುವುದಕ್ಕೆ ಕ್ರಮ ವಹಿಸಲಾಗುತ್ತಿದೆ’ ಎಂದು ಪ್ರತಿಕ್ರಿಯಿಸಿದರು.

ತರಬೇತಿ ಕೊಡಿ:

‘ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕಾಕರಣ ಆರಂಭಿಸಬೇಕು. ಜನಪ್ರತಿನಿಧಿಗಳ ಸಭೆಯಲ್ಲಿ ಆಮ್ಲಜನಕ, ರೆಮ್‌ಡಿಸಿವಿರ್, ಹಾಸಿಗೆಗಳು, ಆಂಬುಲೆನ್ಸ್‌ ಮತ್ತಿತರ ಸಮಸ್ಯೆಗಳನ್ನು ಚರ್ಚಿಸಲಾಗಿದೆ. ಅಥಣಿ ಸೇರಿದಂತೆ ಕೆಲ ತಾಲ್ಲೂಕು ಕೇಂದ್ರಗಳಲ್ಲಿ ಹೆಚ್ಚಿನ ಹಾಸಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂಬ ಬೇಡಿಕೆ ಬಂದಿದೆ. ಸಾಧ್ಯತೆ ಪರಿಶೀಲಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು. ಆಮ್ಲಜನಕ ಸಮರ್ಪಕ ಬಳಕೆಗೆ ಅನುಕೂಲ ಆಗುವಂತೆ ವೈದ್ಯರಿಗೆ ಆನ್‌ಲೈನ್ ತರಬೇತಿ ನೀಡಬೇಕು‌’ ಎಂದು ಸೂಚಿಸಿದರು.

ಕಠಿಣ ಕ್ರಮ ಜರುಗಿಸಬೇಕು

‘ಮೊದಲ ಡೋಸ್ ಲಸಿಕೆ ಪಡೆದುಕೊಂಡವರಿಗೆ 2ನೇ ಡೋಸ್ ನೀಡಲು ಪ್ರಥಮ ಆದ್ಯತೆ ನೀಡಲಾಗುತ್ತದೆ. ಕೊರತೆ ಇರುವುದರಿಂದಾಗಿ,18ರಿಂದ 44 ವರ್ಷದವರು ಕಾಯಬೇಕಾಗುತ್ತದೆ. ರೆಮ್‌ಡಿಸಿವಿರ್‌ಗೆ ಹೆಚ್ಚಿನ ದರ ಪಡೆಯುತ್ತಿರುವ ದೂರುಗಳು ಬಂದಾಗ ಸಂಬಂಧಿಸಿದ ಆಸ್ಪತ್ರೆಗಳಲ್ಲಿ ಪರಿಶೀಲಿಸಬೇಕು. ಕಾಳಸಂತೆಯಲ್ಲಿ ಮಾರುವ ಪ್ರಕರಣ ಕಂಡುಬಂದರೆ ತಕ್ಷಣವೇ ಪ್ರಕರಣ ದಾಖಲಿಸಿ ಕಠಿಣ ಕ್ರಮ ಜರುಗಿಸಬೇಕು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು’ ಎಂದು ಕಾರಜೋಳ ನಿರ್ದೇಶನ ನೀಡಿದರು.

‘ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿರುವುದರಿಂದ ಆಮ್ಲಜನಕ ಹಾಸಿಗೆ ಕೊರತೆ ಕಂಡುಬಂದಿದೆ. ಹಾಸಿಗೆಗಳ ಸಂಖ್ಯೆ ಹೆಚ್ಚಿಸಲು ಕ್ರಮ ವಹಿಸಲಾಗಿದೆ. ಸರ್ಕಾರಿ ವಸತಿನಿಲಯಗಳನ್ನು ಕೋವಿಡ್ ಕೇರ್ ಕೇಂದ್ರಗಳನ್ನಾಗಿ ಬಳಸಲಾಗುತ್ತಿದೆ. ಹೋಂ ಐಸೊಲೇಷನ್ ಇರಲು ತೊಂದರೆ ಇರುವವರಿಗೆ ಅಲ್ಲಿ ಅವಕಾಶ ಕಲ್ಪಿಸಲಾಗುವುದು’ ಎಂದರು.

ಸಂಸದೆ ಮಂಗಲಾ‌ ಅಂಗಡಿ, ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಎಸ್ಪಿ ಲಕ್ಷ್ಮಣ ನಿಂಬರಗಿ, ಡಿಸಿಪಿ ವಿಕ್ರಮ್ ಆಮಟೆ, ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ಇದ್ದರು.

ಕಾರಜೋಳ ಸೂಚನೆಗಳು

* ರೆಮ್‌ಡಿಸಿವಿರ್, ಆಕ್ಸಿಮೀಟರ್, ಸ್ಕ್ಯಾನಿಂಗ್‌ಗೆ ಹೆಚ್ಚಿನ ದರ ಪಡೆಯುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು.

* ಆಸ್ಪತ್ರೆವಾರು ಲಭ್ಯವಿರುವ ಹಾಸಿಗೆಗಳ, ಖಾಲಿ ಇರುವ ವಿಸ್ತೃತ ಮಾಹಿತಿಯನ್ನು ಜಾಲತಾಣದ ಮೂಲಕ ತಿಳಿಸಬೇಕು.

* 2ನೇ ಡೋಸ್ ಲಸಿಕೆ ವಿಳಂಬವಾದರೆ ಆತಂಕಪಡುವ ಅಗತ್ಯವಿಲ್ಲ.

* ಪ್ರಸ್ತುತ ಸೂಕ್ಷ್ಮ ಸ್ಥಿತಿ ಇದೆ. ಈಗ ರಾಜಕಾರಣ ಮಾಡುವಷ್ಟು ಅಸಹ್ಯದ ಮನೋಭಾವ ನನ್ನದಲ್ಲ. ವಿರೋಧ ಪಕ್ಷದವರು ಸೇರಿದಂತೆ ಯಾರೇ ಸಮಸ್ಯೆ ಹೇಳಿದರೂ ಪರಿಹಾರಕ್ಕೆ ಕ್ರಮ ವಹಿಸುವೆ.

- ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT