ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಎಂಜಾಯ್‌ ಮಾಡ್ತಿರೋರು 17 ಮಂದಿಯ ತ್ಯಾಗ ಮರಿಬೇಡಿ: ಬಾಲಚಂದ್ರ

ಬೆಳಗಾವಿಯಲ್ಲಿ ನಡೆದಿರುವ ಬೆಳವಣಿಗೆ ಪಕ್ಷದ ದೃಷ್ಟಿಯಿಂದ ಒಳ್ಳೆಯದಲ್ಲ​
Last Updated 27 ಜನವರಿ 2022, 8:42 IST
ಅಕ್ಷರ ಗಾತ್ರ

ಬೆಳಗಾವಿ: ‘ಈಗಿನ ಬಿಜೆಪಿ ಸರ್ಕಾರದಲ್ಲಿ ಅಧಿಕಾರ ಎಂಜಾಯ್‌ ಮಾಡುತ್ತಿರುವವರು ಕಾಂಗ್ರೆಸ್‌–ಜೆಡಿಎಸ್‌ನಿಂದ ಬಂದ 17 ಮಂದಿಯ ತ್ಯಾಗವನ್ನು ಮರೆಯಬಾರದು’ ಎಂದು ಅರಭಾವಿ ಬಿಜೆಪಿ ಶಾಸಕರೂ ಆಗಿರುವ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕೋರಿದರು.

ಜಿಲ್ಲೆಯ ಗೋಕಾಕದಲ್ಲಿ ಪತ್ರಕರ್ತರೊಂದಿಗೆ ಗುರುವಾರ ಅವರು ಮಾತನಾಡಿದರು.

‘ನಾನಾಗಲಿ, ಶಾಸಕ ರಮೇಶ ಜಾರಕಿಹೊಳಿ ಅವರಾಗಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಲ್ಲ. ರಮೇಶ, ಮಹೇಶ ಕುಮಠಳ್ಳಿ, ಶ್ರೀಮಂತ ಪಾಟೀಲ ಸೇರಿದಂತೆ ಬೇರೆ ಪಕ್ಷದಿಂದ ಬಂದವರ ತ್ಯಾಗದಿಂದಾಗಿ ಅಧಿಕಾರ ಎಂಜಾಯ್‌ ಮಾಡುತ್ತಿದ್ದೀರಿ ನೆನಪಿರಲಿ’ ಎಂದರು.

ಪರೋಕ್ಷ ವಾಗ್ದಾಳಿ:

‘ಅವರು ಬರಲಿಲ್ಲವಾಗಿದ್ದರೆ ಯಾರೂ ಸಚಿವ, ರಾಜ್ಯಸಭಾ ಸದಸ್ಯ, ಉಪ ಮುಖ್ಯಮಂತ್ರಿ ಆಗುತ್ತಿರಲಿಲ್ಲ’ ಎಂದು ಉಮೇಶ ಕತ್ತಿ, ಈರಣ್ಣ ಕಡಾಡಿ ಹಾಗೂ ಲಕ್ಷ್ಮಣ ಸವದಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

‘ಬೆಳಗಾವಿಯಲ್ಲಿ ಪಕ್ಷದ ಕೆಲವರು ಈಚೆಗೆ ನಡೆಸಿದ ಸಭೆಗೆ ನಮ್ಮನ್ನು ಯಾರೂ ಕರೆದಿಲ್ಲ. ಕೆಲವರು ಅದು ಅಧಿಕೃತ ಎನ್ನುತ್ತಾರೆ; ಕೆಲವರು ಅನಧಿಕೃತ ಸಭೆ ಎಂದು ಹೇಳಿದ್ದಾರೆ. ಸಭೆ ನಾನು ಕರೆದಿಲ್ಲ ಎಂದು ಸಚಿವ ಉಮೇಶ ಕತ್ತಿ ಹೇಳಿದ್ದಾರೆ. ಆದ್ದರಿಂದ ಪಕ್ಷದವರೆ ಎಲ್ಲವನ್ನೂ ಸ್ಪಷ್ಟಪಡಿಸಬೇಕು’ ಎಂದು ಪ್ರತಿಕ್ರಿಯಿಸಿದರು. ‘ಅಧಿಕೃತ ಸಭೆಯಾಗಿದ್ದರೆ ಎಲ್ಲರನ್ನೂ ಆಹ್ವಾನಿಸಬೇಕಿತ್ತು’ ಎಂದರು.

‘ಜಿಲ್ಲೆಯಲ್ಲಿ ನಡೆದಿರುವುದು ಪಕ್ಷದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಮುಖಂಡರೆಲ್ಲರೂ ಕೂಡಿ ಸಮಸ್ಯೆ ಬಗೆಹರಿಸಿಕೊಂಡರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ. ವೈಮನಸ್ಸು ಇರುತ್ತವೆ. ಅದನ್ನು ಬಗೆಹರಿಸಿಕೊಳ್ಳಬೇಕಾಗುತ್ತದೆ. ನಾಯಕರು ಹಾಗೂ ಆರ್‌ಎಸ್‌ಎಸ್‌ನವರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅಂತರ ಸರಿಪಡಿಸುತ್ತಾರೆ’ ಎಂದರು.

‘ವಿಧಾನಪರಿಷತ್ ಚುನಾವಣೆ ಸಮಯದಿಂದ ಭಿನ್ನಾಭಿಪ್ರಾಯ ಶುರುವಾಗಿದೆ. ಮುಖಂಡರು– ನಾವೆಲ್ಲರೂ ಸಮಾಧಾನದಿಂದ ಸಮಸ್ಯೆ ಬಗೆಹರಿಸಿಕೊಳ್ಳಬೇಕಾಗಿದೆ’ ಎಂದು ಹೇಳಿದರು.

‘ಜಿಲ್ಲಾ ನಾಯಕರು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಾಗಿ ಪಕ್ಷ ಕಟ್ಟಬೇಕು. ಎಲ್ಲರನ್ನೂ ಸೇರಿಸಿ ಸಭೆ ನಡೆಸಿ ಒಗ್ಗೂಡಿಸುವ ಪ್ರಾಮಾಣಿಕ ಪ್ರಯತ್ನವನ್ನು ನಾನಂತೂ ನಡೆಸುತ್ತೇನೆ. ಎಲ್ಲರೂ ಹಟ ಮಾಡುತ್ತಾ ಕುಳಿತರೆ ಅಂತರ ಹೆಚ್ಚಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

ಅರಭಾವಿಯಿಂದಲೇ, ಬಿಜೆಪಿಯಂದಲೇ ಸ್ಪರ್ಧೆ:

‘ನಾನು ಮುಂದಿನ ಚುನಾವಣೆಗೆ ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಅರಭಾವಿ ಕ್ಷೇತ್ರದಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ. ಇದನ್ನು ಬಾಂಡ್‌ ಪೇಪರ್‌ನಲ್ಲಿ ಬೇಕಾದರೂ ಬರೆದುಕೊಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.

‘ರಮೇಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕೊಡುವುದು ಮುಖ್ಯಮಂತ್ರಿಗೆ ಬಿಟ್ಟಿದ್ದು. ಜಿಲ್ಲೆಯ ನಾಯಕರು ಯಾರನ್ನೂ ಸಚಿವರನ್ನಾಗಿ ಮಾಡಲಾಗದು; ತೆಗೆಯಲಾಗದು. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸಚಿವ ಸ್ಥಾನ ಕೊಡಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ. ನ್ಯಾಯಾಲಯದಲ್ಲಿರುವ ಪ್ರಕರಣ ಬಗೆಹರಿದರೆ ರಮೇಶ ಸಚಿವ ಸ್ಥಾನ ಪಡೆದೇ ಪಡೆಯುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT