ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಉಳಿವಿಗಾಗಿ BJPಗೆ ಮತ ಚಲಾಯಿಸಬೇಡಿ: ದೇಶ ಉಳಿಸಿ ಸಂಕಲ್ಪ ಸಮಾವೇಶದಲ್ಲಿ ಕರೆ

Published 8 ಏಪ್ರಿಲ್ 2024, 15:51 IST
Last Updated 8 ಏಪ್ರಿಲ್ 2024, 15:51 IST
ಅಕ್ಷರ ಗಾತ್ರ

ಬೆಳಗಾವಿ: ‘ದೇಶದ ಉಳಿವಿಗಾಗಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಬೇಡಿ. 400 ಸೀಟುಗಳನ್ನು ಗೆಲ್ಲಬೇಕೆಂಬ ಬಿಜೆಪಿ ಮೈತ್ರಿ ಕೂಟದ ಆಶಯ ಈಡೇರಲು ಅವಕಾಶ ನೀಡಬೇಡಿ’ ಎಂದು ಇಲ್ಲಿನ ಗಾಂಧಿ ಭವನದಲ್ಲಿ ಕರ್ನಾಟಕದ ಸಮಸ್ತ ಜನಪರ ಸಂಘಟನೆಗಳು ಸೋಮವಾರ ಹಮ್ಮಿಕೊಂಡಿದ್ದ ‘ದೇಶ ಉಳಿಸಿ ಸಂಕಲ್ಪ ಸಮಾವೇಶ’ದಲ್ಲಿ ಕರೆ ನೀಡಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಮಾವೇಶದ ಅಧ್ಯಕ್ಷ ಎಸ್‌.ಆರ್‌.ಹಿರೇಮಠ, ‘ಜನರಿಗೆ ಅಚ್ಛೆ ದಿನ ಆಸೆ ತೋರಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜನರ ಸೂಲಿಗೆಗೆ ನಿಂತಿದೆ. ಅಗತ್ಯ ವಸ್ತುಗಳ ಬೆಲೆ ಏರಿಸಿ, ಸಾಮಾನ್ಯರ ದುಡಿಮೆಯನ್ನೆಲ್ಲ ದೋಚುತ್ತಿದೆ. ಆದರೆ, ದೊಡ್ಡ ಕಂಪನಿಗಳಿಗೆ ದೇಶದ ಕೊಳ್ಳೆ ಹೊಡೆಯಲು ಮುಕ್ತ ಪರವಾನಗಿ ನೀಡಿದೆ’ ಎಂದು ಆರೋಪಿಸಿದರು.

‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವು ಗ್ಯಾಂಗ್‌ ಮಾಫಿಯಾ ಆಗಿ ಪರಿವರ್ತನೆಯಾಗಿದೆ. ಚುನಾವಣೆ ಬಾಂಡ್‌ ಹೆಸರಿನಲ್ಲಿ ಹಫ್ತಾ ವಸೂಲಿ ನಡೆಯುತ್ತಿದೆ. ವಿವಿಧ ತನಿಖಾ ಸಂಸ್ಥೆಗಳು ಗೂಂಡಾಗಿರಿ ಮತ್ತು ವಸೂಲಿ ದಂಧೆಗಿಳಿದಿದೆ. ಇದನ್ನು ಪ್ರಶ್ನಿಸಿದವರನ್ನು ಜೈಲಿಗೆ ತಳ್ಳಲಾಗುತ್ತಿದೆ’ ಎಂದು ದೂರಿದರು.

ಮುಖಂಡ ಪ್ರಕಾಶ ಕಮ್ಮರಡಿ, ‘ಈ ಚುನಾವಣೆಯಲ್ಲಿ ಕೃಷಿಗೆ ಸಂಬಂಧಿಸಿದ ಬೆಂಬಲ ಬೆಲೆ ವಿಚಾರ ಮುನ್ನೆಲೆಗೆ ಬಂದಿದೆ. ಹಾಗಾಗಿ ರೈತರು ರೈತರಾಗಿಯೇ ಮತ ಚಲಾಯಿಸಬೇಕೇ ಹೊರತು, ಜಾತಿ ಮತ್ತು ಧರ್ಮಕ್ಕೆ ಬಲಿಯಾಗಬಾರದು’ ಎಂದರು.

‘ಕೇಂದ್ರದ ಬಿಜೆಪಿ ಸರ್ಕಾರ ರೈತರ ಬೆಂಬಲ ಬೆಲೆ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ಇದು ಅಂಬಾನಿ, ಅದಾನಿ, ಪತಂಜಲಿ ವ್ಯಾಪ್ತಿಗೆ ಬರುವ 40ಕ್ಕೂ ಅಧಿಕ ಕೃಷಿ ಕಂಪನಿಗಳಿಗೆ ರಕ್ಷಣೆ ನೀಡುವಂತಹ ಮಧ್ಯವರ್ತಿ ಪಕ್ಷ’ ಎಂದು ಆರೋಪಿಸಿದ ಅವರು, ‘ಕಾಂಗ್ರೆಸ್‌ ರೈತರ ಬೇಡಿಕೆ ಈಡೇರಿಸುವ ಭರವಸೆ ಕೊಟ್ಟಿದೆ. ಅದು ಕೃಷಿಗೆ ಸಂಬಂಧಿಸಿ ಉದಾರೀಕರಣ ಮತ್ತು ಜಾಗತೀಕರಣ ನೀತಿ ಸರಿಪಡಿಸಬೇಕು. ಕೃಷಿಯನ್ನು ಮುಕ್ತ ವ್ಯಾಪಾರ ಮತ್ತು ವಿಶ್ವ ವ್ಯಾಪಾರ ಒಡಂಬಡಿಕೆಯಿಂದ ಹೊರಗಿಡಬೇಕು’ ಎಂದು ಹೇಳಿದರು.

ಯೂಸುಫ್‌ ಖನ್ನಿ ಮಾತನಾಡಿ, ‘ಬಿಜೆಪಿ ಸೋಲಿಸುವುದೇ ಸಂಕಲ್ಪ ಯಾತ್ರೆ ಉದ್ದೇಶ. ಬಿಜೆಪಿಗೆ ಅಂಬೇಡ್ಕರ್‌, ಮಹಾತ್ಮ ಗಾಂಧೀಜಿ, ಭಗತ್ ಸಿಂಗ್ ಎಂದರೆ ಆಗುವುದಿಲ್ಲ. ಈ ಬಾರಿ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20 ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಅನುಭವಿಸಲಿದೆ’ ಎಂದರು.

ಬಡಗಲಪುರ ನಾಗೇಂದ್ರ, ‘ಈ ಬಾರಿ ಚುನಾವಣೆಯಲ್ಲಿ ಮೋದಿ ಮತ್ತೆ ಗೆದ್ದರೆ ದೇಶ ಸೋಲುತ್ತದೆ. ಮೋದಿ ಸೋತರಷ್ಟೇ ದೇಶ ಉಳಿಯುತ್ತದೆ’ ಎಂದು ಹೇಳಿದರು.

ಬಿ.ಟಿ.ಲಲಿತಾ ನಾಯಕ್, ಶಿವಾಜಿ ಕಾಗಣಿಕರ, ರಹಮತ್‌ ತರೀಕೆರೆ, ರಂಜಾನ್‌ ದರ್ಗಾ, ತಾರಾ ರಾವ್‌, ವರಲಕ್ಷ್ಮಿ, ಎನ್‌.ವೆಂಕಟೇಶ, ಶ್ರೀಪಾದ ಭಟ್‌, ಜೆ.ಎಂ.ವೀರಸಂಗಯ್ಯ, ಡಿ.ಎಸ್‌.ಚೌಗಲೆ, ಸಿದಗೌಡ ಮೋದಗಿ, ಯಲ್ಲಪ್ಪ ಹಿಮ್ಮಡಿ ಇತರರಿದ್ದರು.

ಮೂರು ಪ್ರತ್ಯೇಕ ಮಾರ್ಗಗಳಲ್ಲಿ ಸಂಚರಿಸುತ್ತಿರುವ ‘ದೇಶ ಉಳಿಸಿ ಸಂಕಲ್ಪ’ ಯಾತ್ರೆ ಸೋಮವಾರ ಬೆಳಗಾವಿ ಪ್ರವೇಶಿಸಿತು. ಅಂಬೇಡ್ಕರ್‌ ಉದ್ಯಾನದಿಂದ ಗಾಂಧಿ ಭವನದವರೆಗೆ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT