ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬರ: ಈ ವರ್ಷವೂ ನಿಂಬೆ ತುಟ್ಟಿ

ನಿರೀಕ್ಷಿತ ಮಟ್ಟದಲ್ಲಿ ಬಾರದ ಇಳುವರಿ
Published 13 ಮಾರ್ಚ್ 2024, 4:11 IST
Last Updated 13 ಮಾರ್ಚ್ 2024, 4:11 IST
ಅಕ್ಷರ ಗಾತ್ರ

ಬೆಳಗಾವಿ: ಬರಗಾಲದಿಂದಾಗಿ ಈ ಬಾರಿಯೂ ಜಿಲ್ಲೆಯಲ್ಲಿ ‘ನಿಂಬೆ’ ಇಳುವರಿ ಪ್ರಮಾಣ ಕುಸಿದಿದೆ.

ವಿಜಯಪುರ ಜಿಲ್ಲೆಯಿಂದ ಬೇಡಿಕೆಯಷ್ಟು ನಿಂಬೆ ಬಾರದ್ದರಿಂದ, ಇಲ್ಲಿನ ಚಿಲ್ಲರೆ ಮಾರುಕಟ್ಟೆಯಲ್ಲಿ ತುಟ್ಟಿಯಾಗಿದೆ. ಮಧ್ಯಮ ಗಾತ್ರದ ಒಂದು ನಿಂಬೆ ₹5ರಿಂದ ₹6ಕ್ಕೆ ಮಾರಾಟವಾದರೆ, ದೊಡ್ಡ ಗಾತ್ರದ ನಿಂಬೆ ದರ ₹7ರಿಂದ ₹10 ಇದೆ.

‘ನಾನು 20 ವರ್ಷಗಳಿಂದ ನಿಂಬೆ ಮಾರುತ್ತಿರುವೆ. ಒಂದೂವರೆ ತಿಂಗಳ ಹಿಂದೆ ಸಗಟು ರೂಪದಲ್ಲಿ 1 ಸಾವಿರ ನಿಂಬೆಗೆ ₹2 ಸಾವಿರ ದರ ಇತ್ತು. ಈಗ 1 ಸಾವಿರ ನಿಂಬೆಗೆ ₹6 ಸಾವಿರ ಇದೆ. ಇತರೆ ಖರ್ಚು ತೆಗೆದು, ಒಂದು ನಿಂಬೆಯನ್ನು ₹7ರಿಂದ ₹10ರ ದರದಲ್ಲಿ ಮಾರುತ್ತೇವೆ’ ಎಂದು ವ್ಯಾಪಾರಿ ಮನ್ಸೂರ್ ಬಾಗವಾನ್ ತಿಳಿಸಿದರು‌.

‘ಮಳೆ‌ ಕೊರತೆಯಿಂದ ಈ ಸಲ‌ ನಿರೀಕ್ಷಿತ ಇಳುವರಿ ಬಂದಿಲ್ಲ. ಬೇಡಿಕೆ ಅನುಸಾರ ಬೆಳೆಗಾರರಿಂದ ನಿಂಬೆ ಸಿಗುತ್ತಿಲ್ಲ. ಕಳೆದ ವರ್ಷ ಇದ್ದ ದುಬಾರಿ ದರ ಈ ವರ್ಷವೂ ಮುಂದುವರಿದಿದೆ. ಬೇಸಿಗೆ ಆರಂಭದಲ್ಲೇ ಪರಿಸ್ಥಿತಿ ಹೀಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಬಹುದು’ ಎಂದು ವ್ಯಾಪಾರಿ ಮೊಹ್ಸಿನ್ ದಫೇದಾರ್ ಹೇಳಿದರು.

‘ಮಾರ್ಚ್‌ ಎರಡನೇ ವಾರದಲ್ಲೇ ತಾಪಮಾನ ಏರಿಕೆಯಾಗಿದೆ.  ಬಿಸಿಲಿನಿಂದ ಪಾರಾಗಲು ತಂಪು ಪಾನೀಯ ಮೊರೆ ಹೋಗುತ್ತೇವೆ. ಶರಬತ್‌ಗೆ ಅಲ್ಲದೇ ಊಟಕ್ಕೂ ಹೆಚ್ಚಾಗಿ ನಿಂಬೆ ಬಳಸುತ್ತೇವೆ. ಅದಕ್ಕೆ ದರ ಹೆಚ್ಚಿದ್ದರೂ ಖರೀದಿ ಅನಿವಾರ್ಯವಾಗಿದೆ’ ಎಂದು ಗ್ರಾಹಕಿ ಆಶಾ ಪಾಟೀಲ ತಿಳಿಸಿದರು‌.

ದರ ಹೆಚ್ಚಳಕ್ಕೆ ಮುಂದಾದ ವ್ಯಾಪಾರಿ:

‘ಮೊದಲು ನಮ್ಮ ಅಂಗಡಿಯಲ್ಲಿ ನಿಂಬೆ ಸೋಡಾ ಮತ್ತು ಶರಬತ್‌ ದರ ₹20 ಇತ್ತು. ಆದರೆ, ನಿಂಬೆ ದರ ದುಬಾರಿಯಾದ ಕಾರಣ ಮೊದಲಿನ ದರಕ್ಕೆ ತಂಪುಪಾನೀಯ ಮಾರಲು ಆಗುವುದಿಲ್ಲ. ಅದಕ್ಕೆ ಶರಬತ್‌ ಮತ್ತು ಸೋಡಾ ದರವನ್ನು ₹25ಕ್ಕೆ ಹೆಚ್ಚಿಸುವುದು ಅನಿವಾರ್ಯ’ ಎಂದು ಕೋಲ್ಡ್‌ಡ್ರಿಂಕ್ಸ್‌ ಮಾಲೀಕ ಮಾರುತಿ ತಾಂದಳೆ ಹೇಳಿದರು.

.....
.....
....
....
ಸಮರ್ಪಕ ಮಳೆಯಿಲ್ಲದ ಕಾರಣ ಲಿಂಬೆಯ ಇಳುವರಿ ಪ್ರಮಾಣ ಕುಸಿದಿದೆ. ಬೇಸಿಗೆಯಲ್ಲಿ ಬಳಕೆದಾರರ ಪ್ರಮಾಣ ಹೆಚ್ಚು ಇರುವುದರಿಂದ ಲಿಂಬೆ ದರ ತುಟ್ಟಿಯಾಗಿದೆ
–ಮಹಾಂತೇಶ ಮುರಗೋಡ, ಉಪನಿರ್ದೇಶಕ ತೋಟಗಾರಿಕೆ ಇಲಾಖೆ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT