ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಾತ್ಮ ಸೈನಿಕರ ಕುಟುಂಬಗಳಿಗೆ ವಂಚನೆಗೆ ಸಹಕಾರ: ಆರೋಪಿ ಬಂಧನ

ಹಲವರನ್ನು ವಂಚಿಸಿರುವ, ಮದುವೆಯಾಗಿರುವ ನಕಲಿ ಸೇನಾಧಿಕಾರಿ
Last Updated 9 ನವೆಂಬರ್ 2020, 13:30 IST
ಅಕ್ಷರ ಗಾತ್ರ

ಬೆಳಗಾವಿ: ಸೇನಾಧಿಕಾರಿ ಎಂದು ಹೇಳಿಕೊಂಡು ಹುತಾತ್ಮ ಸೈನಿಕರ ಕುಟುಂಬಗಳಿಗೆ ವಂಚಿಸಿರುವ ಆರೋಪದ ಮೇಲೆ ಬಂಧಿತರಾಗಿರುವ ವ್ಯಕ್ತಿಗೆ ಸಹಕಾರನೀಡಿದ ವ್ಯಕ್ತಿಯನ್ನು ಇಲ್ಲಿನ ಕ್ಯಾಂಪ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದ ಮಂಜುನಾಥ ಬಿರಾದಾರ ಬಂಧಿತ. ಇವರುನಕಲಿ ಸೇನಾಧಿಕಾರಿ ಎನ್ನುವುದು ಖಚಿತವಾಗಿದೆ. ಅವರಿಗೆ ಸಹಾಯ ಮಾಡಿದ ಹುಕ್ಕೇರಿಯ ನಿವೃತ್ತ ಸೈನಿಕ ಶಿವಲಿಂಗ ಕೆಂಚವ್ವಗೋಳ ಎನ್ನುವವರನ್ನು ಬಂಧಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಮಂಜುನಾಥ ವಿಚಾರಣೆ ವೇಳೆ ನೀಡಿದ ಮಾಹಿತಿ ಆಧರಿಸಿ ಇನ್ನೂ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದು ಡಿಸಿಪಿ ವಿಕ್ರಮ್‌ ಅಮಟೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿನ ಕ್ಯಾಂಪ್‌ ಪ್ರದೇಶದಲ್ಲಿ ಸಮವಸ್ತ್ರ ಧರಿಸಿ ಓಡಾಡುತ್ತಿದ್ದ ಮಂಜುನಾಥ ಅವರನ್ನು ಸೇನೆಯವರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಗುರುತಿನ ಚೀಟಿ ಮತ್ತಿತರ ದಾಖಲೆಗಳು ಇಲ್ಲದಿದ್ದರಿಂದ ಕ್ಯಾಂಪ್‌ ಠಾಣೆ ಪೊಲೀಸರಿಗೆ ಒಪ್ಪಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ಈ ವೇಳೆ, ಆರೋಪಿಯು ಐವರನ್ನು ಮದುವೆ ಆಗಿರುವುದು ಮತ್ತು ಹುತಾತ್ಮ ಸೈನಿಕರ ಕುಟುಂಬಗಳಿಂದ ಹಣ ಪಡೆದು ವಂಚಿಸಿರುವ ಮಾಹಿತಿ ನೀಡಿದ್ದಾರೆ. ಒಂದು ಮದುವೆಯನ್ನಷ್ಟೆ ನೋಂದಣಿ ಮಾಡಿಸಿರುವುದು ಗೊತ್ತಾಗಿದೆ’ ಎಂದು ಮಾಹಿತಿ ನೀಡಿದರು.

‘ಅವರು, ಸೇನೆಯಲ್ಲಿ ಸುಬೇದಾರ್ ಆಗಿದ್ದೇನೆ ಎಂದು ಕೆಲವರಿಗೆ, ಮೇಜರ್ ಆಗಿದ್ದೇನೆ ಎಂದು ಕೆಲವರಿಗೆ ಹೇಳಿ ಮೋಸ ಮಾಡಿದ್ದಾರೆ ಎಂದು ತಿಳಿದುಬಂದಿದೆ. ವಿಜಯಪುರ, ಬಾಗಲಕೋಟೆ, ರಾಯಚೂರು, ಮಂಗಳೂರು ಮೊದಲಾದ ಕಡೆಗಳಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ವಂಚಿಸಿರುವುದು ಗೊತ್ತಾಗಿದೆ. ಹುತಾತ್ಮ ಯೋಧರಿಗೆ ಸರ್ಕಾರದಿಂದ ಸೌಲಭ್ಯ, ಉದ್ಯೋಗ ಕೊಡಿಸುವುದಾಗಿ ಹೇಳಿ ಹಣ ಪಡೆದು ಮೋಸ ಮಾಡಿದ್ದಾರೆ. ಅವರಿಗೆ ನೆರವಾದ ಕೆಲವರ ಬಗ್ಗೆ ಮಾಹಿತಿ ಇದ್ದು, ಅವರನ್ನೂ ಬಂಧಿಸಲಾಗುವುದು’ ಎಂದು ತಿಳಿಸಿದರು.

‘ಆರೋಪಿಯು, ಕೆಲವು ಗ್ರಾಮಗಳಲ್ಲಿ ‘ಯೋಧರಿಗೊಂದು ನಮನ’ ಎಂಬ ಕಾರ್ಯಕ್ರಮ ಆಯೋಜಿಸಿ ಹುತಾತ್ಮ ಸೈನಿಕರ ಕುಟುಂಬದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ಮದುವೆ ಆಗುವುದಾಗಿ ವಿವಿಧೆಡೆ ಇನ್ನೂ ನಾಲ್ವರು ಯುವತಿಯರನ್ನು ನೋಡಿದ್ದ, ಆ ಕುಟುಂಬದವರೊಂದಿಗೆ ಮಾತುಕತೆಯನ್ನೂ ನಡೆಸಿದ್ದರು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT