ಸೋಮವಾರ, ಅಕ್ಟೋಬರ್ 18, 2021
23 °C

ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ: ಬೆನಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ ಎಂಬ ಬಸವಣ್ಣನವರ ವಚನದಂತೆ ಶಿಕ್ಷಣದಿಂದ ಮಾತ್ರವೇ ಜನಸಮುದಾಯದ ಪ್ರಗತಿ ಸಾಧ್ಯ. ಹೀಗಾಗಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಹೆಚ್ಚಿನ ಸುಧಾರಣೆ ಆಗಬೇಕು’ ಎಂದು ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅಭಿಪ್ರಾಯಪಟ್ಟರು.

ಇಲ್ಲಿನ ರಾಮತೀರ್ಥ ನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಸಂಘಗಳ ಉದ್ಘಾಟನೆ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವು ಯಶಸ್ವಿಯಾಗಲು ಶಿಕ್ಷಣ ಇಲಾಖೆಯೊಂದಿಗೆ ಪಾಲಕರು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು’ ಎಂದರು.

‘ಈ ಶಾಲೆಗೆ 4 ಶೌಚಾಲಯಗಳನ್ನು ಕಟ್ಟಿಸಿಕೊಟ್ಟ ಮುಖಂಡ ಸುರೇಶ ಯಾದವ ಅವರ ಕಾರ್ಯ ಅಭಿನಂದನಾರ್ಹ’ ಎಂದು ಹೇಳಿದರು.

ನಗರ ಬಿಇಒ ರವಿ ಭಜಂತ್ರಿ ಮಾತನಾಡಿ, ‘ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ಬಡ, ಮಧ್ಯಮ ವರ್ಗದ ಮಕ್ಕಳು ಶಿಕ್ಷಣ ಪಡೆಯುತ್ತಾರೆ. ಆ ಸಮುದಾಯಗಳ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಇಲಾಖೆ ನಿರಂತರವಾಗಿ ಪ್ರಯತ್ನಿಸುತ್ತಿದೆ. ಆಯಾ ಭಾಗದ ಸಾರ್ವಜನಿಕರ ಸಹಕಾರ ಶಾಲೆಗಳಿಗೆ ಮತ್ತಷ್ಟು ಶಕ್ತಿ ನೀಡಬಲ್ಲದು’ ಎಂದರು.

ಸುರೇಶ ಯಾದವ ಪ್ರತಿಷ್ಠಾನದ ಅಧ್ಯಕ್ಷ ಸುರೇಶ ಯಾದವ, ರೋಟರಿ ಕ್ಲಬ್ (ಉತ್ತರ) ಅಧ್ಯಕ್ಷ ಅಭಯಕುಮಾರ ಮತ್ತು ನಗರಪಾಲಿಕೆ ಸದಸ್ಯ ಹಣಮಂತ
ಕೊಂಗಾಲಿ ಅವರನ್ನು ಸತ್ಕರಿಸಲಾಯಿತು.

ಮುಖಂಡ ಎಸ್.ಎ. ಕಿವಡಸನ್ನವರ, ಮುಖ್ಯಶಿಕ್ಷಕಿ ಎನ್.ಆರ್. ಮೆಳವಂಕಿ, ಎಚ್.ಎ. ಮುಲ್ಲಾ, ಎಂ.ಎಸ್. ವಾಲಿ ಉಪಸ್ಥಿತರಿದ್ದರು.

ಐ.ಡಿ. ಹಿರೇಮಠ ಸ್ವಾಗತಿಸಿದರು. ಎಂ.ವೈ. ಕಟಕೋಳ ನಿರೂಪಿಸಿದರು. ಎಂ.ಎಸ್. ತುರಮರಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.