ಶನಿವಾರ, ಸೆಪ್ಟೆಂಬರ್ 25, 2021
29 °C

‘ಚಿಹ್ನೆ’ಯಲ್ಲಿ ಸ್ಪರ್ಧೆ: ರಂಗೇರಲಿದೆ ಕಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಚಿಹ್ನೆಯಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿರುವುದರಿಂದಾಗಿ, ಕಣವು ಹಿಂದೆಂದಿಗಿಂತಲೂ ರಂಗೇರುವ ಸಾಧ್ಯತೆ ನಿಚ್ಚಳವಾಗಿದೆ.

ಪಕ್ಷದಿಂದ ಚಿಹ್ನೆ ಆಧಾರದ ಮೇಲೆ ಅಭ್ಯರ್ಥಿಗಳನ್ನು ಹಾಕಲಾಗುವುದು ಎಂದು ಬಿಜೆಪಿ, ಕಾಂಗ್ರೆಸ್‌ ಹಾಗೂ ಅಖಿಲ ಭಾರತೀಯ ಮಜಿಲಿಸ್‌–ಎ–ಇತ್ತೆಹಾದುಲ್ ಮುಸ್ಲೀಮೀನ್‌ (ಎಐಎಂಐಎಂ) ಪಕ್ಷಗಳು ಹಿಂದೆಯೇ ಘೋಷಿಸಿವೆ. ಜೆಡಿಎಸ್‌ ತನ್ನ ನಡೆ ಏನು ಎನ್ನುವುದನ್ನು ಪ್ರಕಟಿಸಿಲ್ಲ. ಮಹಾರಾಷ್ಟ್ರ ಏಕೀಕರಣ ಸಮಿತಿ (ಇದಕ್ಕೆ ಪಕ್ಷದ ಸ್ಥಾನಮಾನವಿಲ್ಲ) ತನ್ನ ಬೆಂಬಲಿಗರನ್ನು ಕಣಕ್ಕಿಳಿಸಲಿದೆ. ಕಾಂಗ್ರೆಸ್‌, ಹಿಂದೆಯೇ ಚುನಾವಣೆ ನಿರ್ವಹಣಾ ಸಮಿತಿ ರಚಿಸಿ ಎಐಸಿಸಿ ಕಾರ್ಯದರ್ಶಿಗೆ ಉಸ್ತುವಾರಿ ಹುದ್ದೆ ಹೊಂದಿರುವ ನಾಯಕನಿಗೆ ಜವಾಬ್ದಾರಿ ನೀಡಿರುವುದು ಕುತೂಹಲ ಮೂಡಿಸಿದೆ.

ಈವರೆಗೆ ಇಲ್ಲಿನ ಚುನಾವಣೆ ಪಕ್ಷಗಳ ಆಧಾರದ ಮೇಲೆ ನಡೆಯುತ್ತಿರಲಿಲ್ಲ. ಅಭ್ಯರ್ಥಿಗಳು ಪಕ್ಷಗಳ ಬೆಂಬಲಿತರು ಎಂದು ಹೇಳಿಕೊಳ್ಳುತ್ತಿದ್ದರು. ಕನ್ನಡ ಅಥವಾ ಉರ್ದು ಭಾಷಿಕರು ಹಾಗೂ ಎಂಇಎಸ್ ಬೆಂಬಲಿತರು ಎಂದು ಹೇಳಿಕೊಂಡು ಪ್ರಚಾರ ನಡೆಸುತ್ತಿದ್ದರು. ತಮ್ಮ ಕಾರ್ಯಕರ್ತರನ್ನು ಪಕ್ಷಗಳು ಬೆಂಬಲಿಸುತ್ತಿದ್ದವು. ನಾಯಕರು ಅವರ ಪರವಾಗಿ ಪ್ರಚಾರ ಮಾಡುತ್ತಿದ್ದರು. ಆದರೆ, ಈ ಬಾರಿ ಪಕ್ಷಗಳು ಅಧಿಕೃತವಾಗಿಯೇ ಹಣಾಹಣಿಗೆ ಮುಂದಾಗಿರುವುದು ಅಖಾಡದಲ್ಲಿ ತುರುಸಿನ ಸ್ಪರ್ಧೆ ಏರ್ಪಡುವ ಲಕ್ಷಣಗಳು ಗೋಚರಿಸುತ್ತಿವೆ.

ಪಕ್ಷದ ಟಿಕೆಟ್ ಮೇಲೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಮುಖಂಡರು ಬಹಳ ಹಿಂದೆಯೇ ಪ್ರಕಟಿಸಿದ್ದರು. ಕಾಂಗ್ರೆಸ್‌ನಿಂದಲೂ ಅಧಿಕೃತವಾಗಿ ಅಭ್ಯರ್ಥಿಗಳನ್ನು ಹಾಕಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದರು.

ಚುನಾವಣಾ ನಿರ್ವಹಣಾ ಸಮಿತಿ ರಚಿಸುವ ಮೂಲಕ ಕಾಂಗ್ರೆಸ್‌, ಚುನಾವಣೆಗೆ ಪೂರ್ವ ತಯಾರಿ ಆರಂಭಿಸಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮಿತಿ ರಚಿಸಿ, ಜವಾಬ್ದಾರಿ ಹಂಚಿಕೆ ಮಾಡಿದ್ದರು. ‘ಈ ಬಾರಿ ಪಕ್ಷದ ಚಿಹ್ನೆಯಲ್ಲಿ ಚುನಾವಣೆ ಎದುರಿಸಲಾಗುವುದು. 58 ವಾರ್ಡ್‌ಗಳ ವ್ಯಾಪ್ತಿಯಲ್ಲೂ ಬೂತ್ ಸಮಿತಿಗಳನ್ನು ರಚಿಸಬೇಕು. ಚುನಾವಣೆಗೆ ಸಜ್ಜಾಗಬೇಕು’ ಎಂದು ತಿಳಿಸಿದ್ದರು.

‘ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್‌ ಅವರಿಗೆ ಉಸ್ತುವಾರಿ ವಹಿಸಲಾಗಿದೆ. ಸಂಯೋಜಕರಾಗಿ ಉತ್ತರ ಕ್ಷೇತ್ರಕ್ಕೆ (ವಾರ್ಡ್ ನಂ.1ರಿಂದ 27) ಮಾಜಿ ಶಾಸಕ ಫಿರೋಜ್‌ ಸೇಠ್, ದಕ್ಷಿಣ ಕ್ಷೇತ್ರಕ್ಕೆ ಪರಾಜಿತ ಅಭ್ಯರ್ಥಿ ಎಂ.ಡಿ. ಲಕ್ಷ್ಮಿನಾರಾಯಣ (ವಾರ್ಡ್ ನಂ.28ರಿಂದ 39, 41, 43ರಿಂದ 54, 56ರಿಂದ 58) ಹಾಗೂ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ (ವಾರ್ಡ್ ನಂ. 40, 42, 45) ಅವರನ್ನು ನಿಯೋಜಿಸಲಾಗಿದೆ. 10 ಸದಸ್ಯರನ್ನು  ನೇಮಿಸಲಾಗಿದೆ. 15 ದಿನಗಳೊಳಗೆ ವಾರ್ಡ್‌ ಸಮಿತಿ ಹಾಗೂ ಬೂತ್ ಸಮಿತಿ ರಚಿಸಬೇಕು’ ಎಂದು ಶಿವಕುಮಾರ್‌ ಸೂಚಿಸಿದ್ದರು. ಈ ನಾಯಕರಿಗೇ ಜವಾಬ್ದಾರಿ ಮುಂದುವರಿಸಲಾಗುವುದೇ ಅಥವಾ ಬದಲಿಸಲಾಗುವುದೆ ಎನ್ನುವುದು ಸ್ಪಷ್ಟವಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.