ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್‌ಸ್ಟೆಬಲ್‌ಗಳಾದ ಎಂಜಿನಿಯರಿಂಗ್ ಪದವೀಧರರು

ಜನರಿಗೆ ಅನ್ಯಾಯ ಮಾಡಬೇಡಿ: ಗೃಹ ಸಚಿವ
Last Updated 1 ಡಿಸೆಂಬರ್ 2020, 13:58 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕೆಎಸ್‌ಆರ್‌ಪಿ ತರಬೇತಿ ಶಾಲೆಯಲ್ಲಿ ಬುನಾದಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ 13 ಎಂಜಿನಿಯರಿಂಗ್, 7 ಸ್ನಾತಕೋತ್ತರ ಹಾಗೂ 86 ಪದವೀಧರರು ಸೇರಿದಂತೆ 188 ‍ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಮಂಗಳವಾರ ನಡೆಯಿತು. ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸಜ್ಜಾಗಿರುವ ಅವರ ಸಂಭ್ರಮದಲ್ಲಿ ಪೋಷಕರು ಮತ್ತು ಬಂಧುಗಳು ಕೂಡ ಪಾಲ್ಗೊಂಡಿದ್ದರು.

ರಾಜ್ಯದ ವಿವಿಧ ಪಡೆಗಳಿಂದ 221 ಮಂದಿ ತರಬೇತಿಗೆ ವರದಿ ಮಾಡಿಕೊಂಡಿದ್ದರು. ಅವರಲ್ಲಿ 33 ಮಂದಿಯನ್ನು ವಿವಿಧ ಕಾರಣದಿಂದ ಬಿಡುಗಡೆ ಮಾಡಲಾಯಿತು. ಕೋವಿಡ್–19 ಕಾರಣದಿಂದಾಗಿ ತರಬೇತಿ ಪೂರ್ಣಗೊಳ್ಳುವುದು ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕೆಎಸ್ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್ ಮಾತನಾಡಿ, ‘ಯಾವುದೇ ಸಿಬ್ಬಂದಿ ಅಥವಾ ರ‍್ಯಾಂಕ್‌ನ ಅಧಿಕಾರಿಗಳು ನಿರ್ಗಮನ ಪಥಸಂಚಲನ ಮುಗಿಸಿಯೇ ಕರ್ತವ್ಯಕ್ಕೆ ಹಾಜರಾಗಬೇಕಾಗುತ್ತದೆ. ಈ ಬಾರಿ ಇಲ್ಲಿಗೆ ತರಬೇತಿಗೆ ಬಂದಿದ್ದ 51 ಮಂದಿಗೆ ಕೋವಿಡ್–19 ದೃಢಪಟ್ಟಿತ್ತು. ಎಲ್ಲರನ್ನೂ ಪ್ರತ್ಯೇಕವಾಗಿ ಇರಿಸಲಾಗಿತ್ತು. ಕಾರಣ, ತರಬೇತಿ ತಡವಾಗಿ ಪೂರ್ಣಗೊಂಡಿದೆ’ ಎಂದು ಹೇಳಿದರು.

ನ್ಯಾಯ, ರಕ್ಷಣೆ ಒದಗಿಸಿ:

ಪಥಸಂಚಲನ ಪರಿವೀಕ್ಷಣೆ ನಡೆಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘ರಾಜ್ಯ ಪೊಲೀಸ್ ರಾಷ್ಟ್ರದಲ್ಲೇ ಅತ್ಯಂತ ಶ್ರೇಷ್ಠವಾದುದು. ಅತ್ಯಂತ ಉತ್ತಮ ತರಬೇತಿಯನ್ನು ಇಲ್ಲಿ ನೀಡಲಾಗುತ್ತಿದೆ. ಇದರಿಂದ ವ್ಯಕ್ತಿತ್ವ ವಿಕಸನದೊಂದಿಗೆ, ಎಂಥದ್ದೇ ಸವಾಲುಗಳು ಬಂದರೂ ಆತ್ಮಸ್ಥೈರ್ಯದಿಂದ ಎದುರಿಸುವ ಸದೃಢತೆಯನ್ನು ಕೊಡುತ್ತದೆ. ಉನ್ನತ ಮಟ್ಟದ ಕಾರ್ಯಕ್ಷಮತೆಗಾಗಿ ತರಬೇತಿಗೆ ಮಹತ್ವ ಕೊಡಲಾಗುತ್ತಿದೆ. ಆಧುನಿಕ ಸವಾಲುಗಳನ್ನು ಎದುರಿಸುವ ಶಕ್ತಿಯನ್ನೂ ತುಂಬಲಾಗುತ್ತಿದೆ’ ಎಂದು ತಿಳಿಸಿದರು.

‘ಪೊಲೀಸ್ ಸಮವಸ್ತ್ರ ಹಾಗೂ ಶಸ್ತ್ರಾಸ್ತ್ರ ಎಲ್ಲರಿಗೂ ಕೊಡುವುದಿಲ್ಲ ಅಥವಾ ಸಿಗುವುದಿಲ್ಲ. ಪಡೆದವರು ಅವುಗಳ ಗೌರವ ಉಳಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ನ್ಯಾಯ ನಿಷ್ಠುರವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣದಿಂದಲೂ ನಿಮ್ಮಿಂದ ಜನರಿಗೆ ಅನ್ಯಾಯ ಆಗಬಾರದು. ಸಾಮಾನ್ಯ ಜನರಿಗೆ ನ್ಯಾಯ ಹಾಗೂ ರಕ್ಷಣೆ ಕೊಡಬೇಕು’ ಎಂದು ಸೂಚಿಸಿದರು.

ಕೋವಿಡ್–19ನಿಂದ ಮೃತಪಟ್ಟ ಇಬ್ಬರು ಸಿಬ್ಬಂದಿಯ ಕುಟುಂಬದವರಿಗೆ ಸರ್ಕಾರದಿಂದ ₹ 30 ಲಕ್ಷ ಪರಿಹಾರ ಚೆಕ್‌ ವಿತರಿಸಲಾಯಿತು.

ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ, ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ನಗರ ಪೊಲೀಸ್ ಆಯುಕ್ತ ಕೆ.ತ್ಯಾಜರಾಜನ್, ಕಮಾಂಡೆಂಟ್ ಹಂಜಾ ಹುಸೇನ್ ಇದ್ದರು.

ಬಹುಮಾನ ವಿಜೇತರು (ಕ್ರಮವಾಗಿ ಪ್ರಥಮ, ದ್ವಿತೀಯ)

* ಒಳಾಂಗಣ ಪರೀಕ್ಷೆ: ಮೈಸೂರಿನ 5ನೇ ಪಡೆಯ ವೈ.ಎಸ್. ಸಂಜಯ್‌ಕುಮಾರ್‌, ಶಿಗ್ಗಾವಿ 10ನೇ ಪಡೆಯ ನಾರಾಯಣ ಲಮಾಣಿ.

* ಹೊರಾಂಗಣ ಪರೀಕ್ಷೆ: ಮುನಿರಾಬಾದ್‌ ಐಆರ್‌ಬಿಯ ಎಚ್‌.ಎಂ. ವೆಂಕಟೇಶ್ ಹಾಗೂ ವೀರೇಶ್.

* ಫೈರಿಂಗ್ ಪರೀಕ್ಷೆ: ಮುನಿರಾಬಾದ್‌ ಐಆರ್‌ಬಿಯ ದ್ಯಾಮಪ್ಪ ಪೂಜಾರ, ತುಮಕೂರು 12ನೇ ಪಡೆಯ ಭೀಮಾಶಂಕರ.

* ಸರ್ವೋತ್ತಮ: ಮೈಸೂರಿನ 5ನೇ ಪಡೆಯ ವೈ.ಎಸ್. ಸಂಜಯ್‌ಕುಮಾರ್‌, ಮುನಿರಾಬಾದ್‌ ಐಆರ್‌ಬಿಯ ಎಸ್.ಹನಮಂತ.

ಕೋವಿಡ್‌ ದೃಢಪಟ್ಟಿದ್ದ ಪ್ರಶಿಕ್ಷಣಾರ್ಥಿಗಳು ಗುಣಮುಖರಾಗಿದ್ದಾರೆ. 33 ಮಂದಿ ಪ್ಲಾಸ್ಮಾ ದಾನಕ್ಕೂ ಸ್ವ ಇಚ್ಛೆಯಿಂದ ಮುಂದೆ ಬಂದಿದ್ದಾರೆ
- ರಮೇಶ್, ಪ್ರಾಂಶುಪಾಲ, ಕೆಎಸ್‌ಆರ್‌ಪಿ ತರಬೇತಿ ಶಾಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT