ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರಪ್ಪಗೆ ಕಾಳಜಿ ಇದ್ದರೆ ಸರ್ಕಾರಕ್ಕೆ ಗಡುವು ವಿಧಿಸಲಿ: ಅರವಿಂದ ದಳವಾಯಿ ಸವಾಲು

ಅರವಿಂದ ದಳವಾಯಿ ಸವಾಲು
Last Updated 27 ನವೆಂಬರ್ 2020, 9:09 IST
ಅಕ್ಷರ ಗಾತ್ರ

ಬೆಳಗಾವಿ: ‘ಕುರುಬ ಸಮಾಜಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ದೊರಕಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಚ್‌. ಈಶ್ವರಪ್ಪ ಅವರಿಗೆನಿಜವಾಗಿಯೂ ಕಾಳಜಿ ಇದ್ದರೆ, ಬೇಡಿಕೆ ಈಡೇರಿಕೆಗಾಗಿ ರಾಜ್ಯ ಸರ್ಕಾರಕ್ಕೆ ಗಡುವು ವಿಧಿಸಬೇಕು’ ಎಂದು ಸಂಗೊಳ್ಳಿರಾಯಣ್ಣ ಸ್ಮಾರಕ ‍ಪ್ರಾಧಿಕಾರ ರಚನೆ ಹೋರಾಟ ಸಮಿತಿ ಅಧ್ಯಕ್ಷ ಅರವಿಂದ ದಳವಾಯಿ ಸವಾಲು ಹಾಕಿದರು.

‘ಗಡುವಿನಲ್ಲಿ ಬೇಡಿಕೆ ಈಡೇರದಿದ್ದಲ್ಲಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಘೋಷಿಸಬೇಕು. ಎ.ಎಚ್. ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಆರ್. ಶಂಕರ್‌ ಕೂಡ ಇದೇ ಹಾದಿ ತುಳಿಯಬೇಕು’ ಎಂದು ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಕುರುಬ ಸಮಾಜಕ್ಕೆ ‍ಪ.ಪಂ. ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇದೆ. ಆಗೆಲ್ಲಾ ಸುಮ್ಮನಿದ್ದು, ಕೇವಲ 2–3 ತಿಂಗಳುಗಳಿಂದೀಚೆಗೆ ಈಶ್ವರಪ್ಪ ಹಾಗೂ ಅವರ ಕಂಪನಿ ಹೋರಾಟ ಆರಂಭಿಸಿದ್ದಾರೆ. ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಮನವಿ ಸಲ್ಲಿಸುವ ನಾಟಕವಾಡಿದ್ದಾರೆ. ಯಾರನ್ನು ಭೇಟಿಯಾಗಬೇಕೋ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿಲ್ಲ. ಅಧಿಕೃತವಾಗಿ ಕರ್ನಾಟಕ ಸರ್ಕಾರದಿಂದ ಶಿಫಾರಸು ಮಾಡಿಸದೆ ನಾಟಕ ಮಾಡುತ್ತಿದ್ದಾರೆ. ಬೀದಿ ಚಳವಳಿಗಿಳಿದಿದ್ದಾರೆ’ ಎಂದು ಟೀಕಿಸಿದರು.

‘ಈಶ್ವರಪ್ಪ ಸೇರಿದಂತೆ ಬಿಜೆಪಿಯ ಮುಖಂಡರು ಈ ವಿಷಯದ ಬಗ್ಗೆ ವಿಧಾನಸಭೆ ಅಥವಾ ವಿಧಾನಪರಿಷತ್‌ನಲ್ಲಿ ಒಮ್ಮೆಯೂ ಚರ್ಚಿಸಿಲ್ಲ. ಹೀಗಾಗಿಯೇ ಈ ಹೋರಾಟ ಆರ್‌ಎಸ್‌ಎಸ್‌ ಪ್ರಣೀತವಾಗಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಎರಡೂ ಕಡೆಯೂ ಬಿಜೆಪಿ ಸರ್ಕಾರವೇ ಇವೆ. ಸರ್ಕಾರ ಮನಸ್ಸು ಮಾಡಿದರೆ ತಿಂಗಳಲ್ಲಿ ಮೀಸಲಾತಿ ಕೊಡಬಹುದು. ಅದರ ಬದಲಿಗೆ, ಹೋರಾಟದ ಬೂಟಾಟಿಕೆಯ ನಾಟಕ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಯಡಿಯೂರಪ್ಪ ಅವರೊಂದಿಗೆ ಜಗಳವಾದಾಗೆಲ್ಲಾ ಈಶ್ವರಪ್ಪ ಅವರು ಸಮಾಜ ಮುಂದಿಟ್ಟುಕೊಂಡು ಬೀದಿಗೆ ಬರುತ್ತಾರೆ. ಆರ್‌ಎಸ್‌ಎಸ್‌ನವರು ಹಾಗೂ ಬಿ.ಎಲ್. ಸಂತೋಷ್ ಮೆಚ್ಚಿಸಲು ಈ ನಾಟಕ ಕಂಪನಿ ಹುಟ್ಟು ಹಾಕಿದ್ದಾರೆ. ಅವರ ಸ್ವಾರ್ಥಕ್ಕಾಗಿ ಸಮಾಜ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸ್ವಾಮೀಜಿಗಳ ದಾರಿಯನ್ನೂ ತಪ್ಪಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‌‘ಸಮಾಜಕ್ಕೆ ಎಸ್‌ಟಿ ಮೀಸಲಾತಿ ಸಿಗಬೇಕು ಎನ್ನುವುದು ನಮ್ಮ ಆಗ್ರಹವೂ ಆಗಿದೆ. ಆದರೆ, ಅಂದಾಭಿಮಾನ ಇಟ್ಟುಕೊಂಡು ಯಾರದೋ ಹಿಂದೆ ಹೋದರೆ ಮೀಸಲಾತಿ ಸಿಗುವುದಿಲ್ಲ. ಸಮಾಜದವರು ಈಶ್ವರಪ್ಪ ಮೊದಲಾದವರ ಹುನ್ನಾರ ಅರ್ಥ ಮಾಡಿಕೊಳ್ಳಬೇಕು’ ಎಂದು ಕೋರಿದರು.

ಮುಖಂಡರಾದ ಯಲ್ಲಪ್ಪ ಹೆಗಡೆ, ಗುರಪ್ಪ ಹಿಟ್ಟಣಗಿ, ಮಾಳಪ್ಪ ಬಿದರಿ, ಸುರೇಶ ಮಗದುಮ್ಮ, ಬಸವರಾಜ ಕುಕಡೊಳ್ಳಿ, ನಿಂಗಪ್ಪ ದೊಡ್ಡಮನಿ, ದೊಡ್ಡಸಿದ್ದಪ್ಪ ಕಾನಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT