ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಹೊಂಗಲ: ಸಾವಯವ ಕೃಷಿಯಲ್ಲಿ ಖುಷಿ ಕಂಡ ಮಾಜಿ ಸೈನಿಕ

Published 5 ಜನವರಿ 2024, 6:34 IST
Last Updated 5 ಜನವರಿ 2024, 6:34 IST
ಅಕ್ಷರ ಗಾತ್ರ

ಬೈಲಹೊಂಗಲ: 26 ವರ್ಷಗಳ ಗಡಿಯಲ್ಲಿ ದೇಶಸೇವೆ ಮಾಡಿದ ಮಾಜಿ ಸೈನಿಕರೊಬ್ಬರು, ಈಗ ಕೃಷಿ ಕಾಯಕದಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಇದು ಸಮೀಪದ ಇಂಚಲದ ಬಸಪ್ಪ ಜಕಾತಿ ಅವರ ಯಶೋಗಾಥೆ. ಮೂರು ಎಕರೆ ಜಮೀನು ಹೊಂದಿರುವ ಅವರು, 20 ಗುಂಟೆಯಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ.

‘ರಾಸಾಯನಿಕ ಬಳಸಿ ಕೃಷಿ ಮಾಡಿದರೆ ಖರ್ಚು–ವೆಚ್ಚ ಹೆಚ್ಚಾಗುತ್ತದೆ. ಭೂಮಿ ಫಲವತ್ತತೆ ಕಳೆದುಕೊಳ್ಳುತ್ತದೆ. ಹಾಗಾಗಿ ಸಗಣಿ ಗೊಬ್ಬರ, ಜೀವಾಮೃತ, ಎರೆಹುಳು ಗೊಬ್ಬರವನ್ನು ನಾನೇ ಸಿದ್ಧಪಡಿಸಿ, ಬಳಸುತ್ತಿರುವುದರಿಂದ ಕಡಿಮೆ ಖರ್ಚಿನಲ್ಲೇ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಿದೆ’ ಎನ್ನುತ್ತಾರೆ ಅವರು.

‘ರಾಸಾಯನಿಕ ಬಳಸಿ ಕೃಷಿ ಮಾಡಿದರೆ, ಹೆಚ್ಚು ಆದಾಯ ಸಿಗಬಹುದು. ಆದರೆ, ವಿಷಮುಕ್ತ ಆಹಾರ ಉತ್ಪಾದನೆ ಮುಖ್ಯ. ಹಾಗಾಗಿ ರೈತರು ಸಾವಯವದತ್ತ ಮರಳಬೇಕು ಎಂಬ ಸದುದ್ದೇಶದಿಂದ ಈ ಹೆಜ್ಜೆ ಇರಿಸಿದ್ದೇನೆ. ಸಾವಯವ ಪದ್ಧತಿಯಲ್ಲೇ ಸೌತೆಕಾಯಿ, ಬೆಂಡಿಕಾಯಿ, ಪುಂಡಿ ಪಲ್ಯೆ, ಕೋತಂಬರಿ, ಪಾಲಕ್‌ ಸೊಪ್ಪು ಸೇರಿದಂತೆ ವಿವಿಧ ತರಕಾರಿ ಬೆಳೆಯುತ್ತೇನೆ. ಬೈಲಹೊಂಗಲದಲ್ಲಿ ಪ್ರತಿವಾರ ನಡೆಯುವ ಸಾವಯವ ಕೃಷಿ ಸಂತೆಯಲ್ಲಿ ಅವುಗಳನ್ನು ತಂದು ಮಾರಾಟ ಮಾಡುತ್ತೇನೆ. ಇದರಿಂದ ಉತ್ತಮ ಆದಾಯ ಕೈಗೆಟುಕುತ್ತಿದೆ’ ಎಂದು ಸಂತಸ ಹಂಚಿಕೊಂಡರು.

ಬಸಪ್ಪ ಎರಡೂವರೆ ಎಕರೆ ಭೂಮಿಯಲ್ಲಿ ರಾಸಾಯನಿಕ ಬಳಸಿ, ಕಬ್ಬು ಮತ್ತಿತರ ಬೆಳೆ ಬೆಳೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಡೀ ಭೂಮಿಯಲ್ಲಿ ಸಾವಯವ ಬೇಸಾಯ ಮಾಡಲು ಯೋಜಿಸಿದ್ದಾರೆ. ಕೊಳವೆಬಾವಿಯಿಂದ ಬೆಳೆಗಳಿಗೆ ಸಮರ್ಪಕವಾಗಿ ನೀರುಣಿಸುತ್ತಿದ್ದಾರೆ.

ಬೈಲಹೊಂಗಲ ಸಮೀಪದ ಇಂಚಲದಲ್ಲಿ ಮಾಜಿ ಸೈನಿಕ ಬಸಪ್ಪ ಜಕಾತಿ ಸಾವಯವ ಕೃಷಿಯಲ್ಲಿ ತೊಡಗಿರುವುದು
ಬೈಲಹೊಂಗಲ ಸಮೀಪದ ಇಂಚಲದಲ್ಲಿ ಮಾಜಿ ಸೈನಿಕ ಬಸಪ್ಪ ಜಕಾತಿ ಸಾವಯವ ಕೃಷಿಯಲ್ಲಿ ತೊಡಗಿರುವುದು
ಬಸಪ್ಪ ಜಕಾತಿ ಸೇನೆಯಿಂದ ನಿವೃತ್ತಿ ಹೊಂದಿದ ನಂತರ ಕೈಕಟ್ಟಿ ಕುಳಿತಿಲ್ಲ. ಬದಲಿಗೆ ಉತ್ಸಾಹದಿಂದ ಕೃಷಿಯತ್ತ ಮುಖಮಾಡಿದ್ದಾರೆ. ಪ್ರಥಮ ಹಂತವಾಗಿ ಅರ್ಧ ಎಕರೆಯಲ್ಲಿ ಸಾವಯವ ಕೃಷಿ ಮಾಡುತ್ತಿರುವುದು ಖುಷಿ ತಂದಿದೆ
–ಬಾಬುರಾವ್ ಪಾಟೀಲ ಸಾವಯವ ಕೃಷಿಕ
ಸಾವಯವ ಪದ್ಧತಿಯಲ್ಲಿ ಬೆಳೆದ ಬೆಳೆಗಳನ್ನು ಬಸಪ್ಪ ಅವರು ಬೈಲಹೊಂಗದಲ್ಲಿ ಪ್ರತಿವಾರ ನಡೆಯುವ ಸಾವಯವ ಸಂತೆಗೆ ತಂದು ಮಾರಾಟ ಮಾಡುತ್ತಾರೆ. ಕೃಷಿಯಲ್ಲಿ ಹೊಸ ಪ್ರಯೋಗಗಳಿಗೆ ಕೈಹಾಕಲು ತಯಾರಿ ನಡೆಸಿದ್ದಾರೆ
–ವಿಜಯ ಪತ್ತಾರ ಮುಖ್ಯಸ್ಥ ಸಾವಯವ ಸಂತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT