ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚಲಿ ಜಾತ್ರೆಯಲ್ಲಿ ಭಕ್ತರ ದಂಡು

ಎಲ್ಲೆಡೆ ಮೊಳಗಿದ ‘ಮಾಯಕ್ಕಾ ದೇವಿ ಚಾಂಗ ಭಲೋ..’
Last Updated 13 ಫೆಬ್ರುವರಿ 2020, 9:04 IST
ಅಕ್ಷರ ಗಾತ್ರ

ರಾಯಬಾಗ: ತಾಲ್ಲೂಕಿನ ಚಿಂಚಲಿ ಮಾಯಕ್ಕಾದೇವಿಯ ಜಾತ್ರೆಯ ಅಂಗವಾಗಿ ಬುಧವಾರ ಜರುಗಿದ ದೇವಿಯ ಮಹಾ ನೈವೇದ್ಯ ಕಾರ್ಯಕ್ರಮದಲ್ಲಿ ಕೊಂಕಣ ಹಾಗೂ ವಿವಿಧ ಪ್ರದೇಶಗಳಿಂದ ಬಂದಿದ್ದ ಲಕ್ಷಾಂತರ ಭಕ್ತರು ಪಾಲ್ಗೊಂಡರು. ‘ಮಾಯಕ್ಕಾದೇವಿ ಚಾಂಗಭಲೋ...’ ಎನ್ನುವ ಘೋಷಣೆಗಳು ಮೊಳಗಿದವು.

ಚಿಂಚಲಿಯಲ್ಲಿ ನೆಲೆ ನಿಂತ ಶಕ್ತಿ ದೇವತೆಯಾದ ಮಾಯಕ್ಕಾದೇವಿಯ ಜಾತ್ರೆಗೆ ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದಿಂದ ಭಕ್ತರ ಮಹಾಪೂರವೇ ಹರಿದು ಬರುತ್ತಿದೆ. ಮಹಾ ನೈವೇದ್ಯ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಬಂದಿದ್ದರು. ತಮ್ಮ ಹರಕೆಗಳನ್ನು ತೀರಿಸುವುದರೊಂದಿಗೆ ದೇವಿಗೆ ವಿಶೇಷಪೂಜೆ ಹಾಗೂ ಕಾಣಿಕೆ ಸಲ್ಲಿಸಿದರು.

ಕರ್ನಾಟಕ, ಗೋವಾ, ಮಹಾ ರಾಷ್ಟ್ರ, ಆಂಧ್ರಪ್ರದೇಶ, ದೆಹಲಿ, ಗುಜರಾತ್, ರಾಜಸ್ಥಾನ ಹಾಗೂ ಕೊಂಕಣದಿಂದ ಬಂದಿದ್ದ ಭಕ್ತರು ಭಾವ ಪರವಶರಾಗಿ ದೇವಿಯ ಆರಾಧನೆ ಯಲ್ಲಿ ತೊಡಗಿದ್ದರು. ವಿಶೇಷವಾಗಿ ಕೊಂಕಣಿಯರು ಕಪ್ಪು ನಿಲುವಂಗಿ ತೊಟ್ಟು ಕೈಯಲ್ಲಿ ಕೋಲು ಹಿಡಿದುಕೊಂಡು ಭಂಡಾರ ಎರಚುತ್ತಾ ಮೈ ಮೇಲೆ ದೇವಿ ಬಂದಂತೆ ವಾದ್ಯಗಳ ಮೇಳಕ್ಕೆ ತಕ್ಕಂತೆ ಕುಣಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕೆಲವರು ತಮ್ಮ ಹರಕೆ ತೀರಿಸುವು ದಕ್ಕಾಗಿ ನೋಟುಗಳ ಮಾಲೆಗಳನ್ನು ದೇವಿಗೆ ಅರ್ಪಿಸಿದರು. ಕೆಲವರು ಯಲ್ಲಮ್ಮ ಗುಡ್ಡದಿಂದ ಬಂದು ಹಾಲಹಳ್ಳದಲ್ಲಿ ಪವಿತ್ರ ಸ್ನಾನ ಮಾಡಿ ದೇವಿಗೆ ಸ್ಥಳದಲ್ಲಿಯೇ ಒಲೆ ಹೂಡಿ ಕರಿಗಡಬು, ಹೋಳಿಗೆ, ವಡೆ ಮತ್ತಿತರ ಖಾದ್ಯಗಳನ್ನು ತಯಾರಿಸಿ ಉಡಿ ತುಂಬಿ ವಾದ್ಯ ಮೇಳಗಳೊಂದಿಗೆ ಕುಣಿಯುತ್ತ ಮೆರವಣಿಗೆಯಲ್ಲಿ ಸಾಗಿ ‘ಮಾಯಕ್ಕಾ ಚಾಂಗಭಲೋ...’ ಎಂದು ಭಾವಪರವಶರಾಗಿ ದೇವಿಗೆ ಮಹಾನೈವೇದ್ಯ ಅರ್ಪಿಸಿದರು.

ಸಂಪ್ರದಾಯದಂತೆ ಭಂಡಾರ ವನ್ನು ಗಾಳಿಯಲ್ಲಿ ಹಾರಿಸಿ, ಓಕುಳಿ ಆಡಿದರು. ದೇವಸ್ಥಾನದ
ಆವರಣ ಪೂರ್ಣವಾಗಿ ಹಳದಿಮಯವಾಗಿತ್ತು.

ಚಿಂಚಲಿಗೆ ಸಂಪರ್ಕ ಕಲ್ಪಿಸುವ ರಾಯಬಾಗ- ಕುಡಚಿ- ಸುಟ್ಟಟ್ಟಿ- ಬೆಕ್ಕೇರಿ- ಜಲಾಲಪೂರ ಹಾಗೂ ಹಾಲಹಳ್ಳದ ಮಾರ್ಗದಲ್ಲಿ ಲಕ್ಷಾಂತರ ಭಕ್ತರ ಭೇಟಿಯಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥವಾಗಿತ್ತು. ಎಲ್ಲ ಮಾರ್ಗಗಳಲ್ಲೂ 2ರಿಂದ 3 ಕಿ.ಮೀವರೆಗೆ ವಾಹನಗಳು ಸಾಲುಗಟ್ಟಿದ್ದವು. ‘ಜಾತ್ರೆಗೆ ಬರುವ ಭಕ್ತರಿಗಾಗಿ ಕುಡಿಯುವ ನೀರು, ಬೀದಿದೀಪ, ಶೌಚಾಲಯ, ಸಂಚಾರಿ ಆಸ್ಪತ್ರೆ, ಅಗ್ನಿಶಾಮಕ ದಳದ ವ್ಯವಸ್ಥೆ ಮಾಡಲಾಗಿದೆ’ ಎಂದು ಟ್ರಸ್ಟ್ ಸಮಿತಿಯ ಅಧ್ಯಕ್ಷ ಜಿತೇಂದ್ರ ಜಾಧವ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT