ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನವಿ ಕೇಳಲು ಕಾರಿನಿಂದ ಇಳಿಯದ ಸಂಸದ ಅನಂತಕುಮಾರ್ ಹೆಗಡೆ: ರೈತರ ಮುತ್ತಿಗೆ

Last Updated 18 ಆಗಸ್ಟ್ 2020, 11:56 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿಯ ಗಂಗಾಂಬಿಕೆ ಐಕ್ಯಮಂಟಪದ ಬಳಿ ಮಲಪ್ರಭಾ ನದಿಯಿಂದ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಚಾಲನೆ ನೀಡಿ ಮಂಗಳವಾರ ತೆರಳುತ್ತಿದ್ದ ಸಂಸದ ಅನಂತಕುಮಾರ್ ಹೆಗಡೆ ಹಾಗೂ ಶಾಸಕ ಮಹಾಂತೇಶ ದೊಡ್ಡಗೌಡರ ಪ್ರಯಾಣಿಸುತ್ತಿದ್ದ ಕಾರ್‌ಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಮನವಿ ಕೊಟ್ಟು ಮಾತನಾಡಲು ರೈತರು ಮುಂದಾದರು. ಆದರೆ, ಸಂಸದರಾಗಲಿ ಶಾಸಕರಾಗಲಿ ವಾಹನದಿಂದ ಇಳಿಯಲು ನಿರಾಕರಿಸಿದರು. ಇದರಿಂದ ಕುಪಿತಗೊಂಡ ರೈತ ಸಂಘಟನೆ ಕಾರ್ಯಕರ್ತರು ವಾಹನಕ್ಕೆ ಮುತ್ತಿಗೆ ಹಾಕಿದರು. ಪೊಲೀಸರು ಬಂದು ದಾರಿ ಮಾಡಿಕೊಟ್ಟ ನಂತರ ವಾಹನ ತೆರಳಿತು.

ಇದರಿಂದ ಆಕ್ರೋಶಗೊಂಡ ರೈತರು ಸಂಸದರ ವಿರುದ್ಧ ಧಿಕ್ಕಾರ ಕೂಗಿದರು. ಅವಾಚ್ಯ ಶಬ್ದಗಳನ್ನು ಪ್ರಯೋಗಿಸಿದರು. ‘ಜನರ ಸಂಕಷ್ಟ ಆಲಿಸಿದ ಸಂಸದರಿಗೆ ಬುದ್ಧಿ ಕಲಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘಟನೆ ಉತ್ತರ ಕರ್ನಾಟಕ ಘಟಕದ ಗೌರವ ಅಧ್ಯಕ್ಷ ಶಶಿಕಾಂತ ಪಡಸಲಗಿ ಮಾತನಾಡಿ, ‘ಹಸಿರು ಶಾಲು ಹಾಕಿಕೊಂಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಬಿ.ಎಸ್. ಯಡಿಯೂರಪ್ಪ ಅವರು ರೈತರಿಗೆ ಮರಣ ಶಾಸನ ತರಲು ಹೊರಟಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂಸ್ವಾಧೀನ ಕಾಯ್ದೆ ತಿದ್ದುಪಡಿ ಕೃಷಿಕರ ಬದುಕಿಗೆ ಮಾರಕವಾಗಿವೆ. ನೆರೆ ಬಂದು ಮನೆ ಕಳೆದುಕೊಂಡ ಕುಟುಂಬಗಳಿಗೆ ಇನ್ನೂ ಸರಿಯಾಗಿ ಪರಿಹಾರ ಕೊಟ್ಟಿಲ್ಲ’ ಎಂದು ದೂರಿದರು.

‘ಕೃಷಿಕರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದ್ದರೆ ಎಂ.ಎಸ್. ಸ್ವಾಮಿನಾಥನ್ ವರದಿಯ ಶಿಫಾರಸುಗಳನ್ನು ಜಾರಿಗೆ ತರಬೇಕು’ ಎಂದು ಅವರು ಆಗ್ರಹಿಸಿದರು.

‘ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲು ಎಸ್ಸೆಸ್ಸೆಲ್ಸಿ, ವಿಧಾನಸಭೆಗೆ ಪದವಿ, ಲೋಕಸಭೆಗೆ ಪಿಎಚ್‌.ಡಿ ಪದವಿ ವಿದ್ಯಾರ್ಹತೆ ನಿಗದಿಪಡಿಸಬೇಕು. ಆ ಮಾತ್ರ ಈಗಿರುವ ರಾಜಕಾರಣಿಗಳು ಅಧಿಕಾರದಿಂದ ಹೊರಗೆ ಉಳಿಯುತ್ತಾರೆ. ಜನರಿಗೆ ಅನುಕೂಲವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT