ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ವಿಮೆ ಬಗ್ಗೆ ಜಾಗೃತಿ ಮೂಡಿಸಿ: ಕೃಷಿ ಇಲಾಖೆ ಅಧಿಕಾರಿಗಳಿಗೆ ಡಿ.ಸಿ. ಸೂಚನೆ

Last Updated 30 ಜೂನ್ 2021, 13:40 IST
ಅಕ್ಷರ ಗಾತ್ರ

ಬೆಳಗಾವಿ: ‘ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಕುರಿತು ರೈತರಿಗೆ ಸೂಕ್ತ ಮಾಹಿತಿ ನೀಡಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು.

ನಗರದ ಕೃಷಿ ಸಂಕೀರ್ಣದಲ್ಲಿ 2021–22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನ ಕುರಿತುಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವ್ಯಾಪ್ತಿಗೆ ಒಳಪಡುವ ಬೆಳೆಗಳಿಗೆ ವಿಮೆ ಮಾಡಿಸಲು ಕೃಷಿ ಇಲಾಖೆಯಿಂದ ರೈತರಿಗೆ ಸೂಕ್ತ ಸಲಹೆ ನೀಡಬೇಕು. ಬೆಳೆ ಹಾನಿಯದಲ್ಲಿ ಸರ್ಕಾರದ ವಿಮಾ ಯೋಜನೆಯಿಂದ ಸಹಾಯವಾಗಲಿದೆ’ ಎಂದು ತಿಳಿಸಿದರು.

‘ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರಗಳು ರೈತರಿಗೆ ಸಮರ್ಪಕವಾಗಿ ದೊರೆತಿವೆ. ಆದರೆ, ಬರುವ ದಿನಗಳಲ್ಲಿ ಪ್ರಕೃತಿ ವಿಕೋಪ, ಕೀಟ ಅಥವಾ ರೋಗ ಬಾಧೆಯಿಂದ ಬೆಳೆ ವಿಫಲವಾದ ಸಂದರ್ಭದಲ್ಲಿ ರೈತರಿಗೆ ವಿಮಾ ರಕ್ಷಣೆ ಮತ್ತು ಹಣಕಾಸು ಬೆಂಬಲ ನೆರವಾಗಲಿದೆ’ ಎಂದು ಹೇಳಿದರು.

ಸಿಲುಕದಂತೆ ನೋಡಿಕೊಳ್ಳಿ: ‘ಜಿಲ್ಲೆಯಲ್ಲಿ ಬೆಳೆಗಳ ಪ್ರಮಾಣ ಹೆಚ್ಚಾಗಿದ್ದು, ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕದಂತೆ ನೋಡಿಕೊಳ್ಳಲು ವಿಮಾ ಯೋಜನೆಯ ತಿಳಿವಳಿಕೆ ಮೂಡಿಸಬೇಕು. ರೈತರಿಗೆ ಬೆಳೆ ಸಾಲ ನೀಡುವ ಜೊತೆಗೆ ವಿಮಾ ಯೋಜನೆಯಲ್ಲಿ ಭಾಗವಹಿಸುವಂತೆಯೂ ತಿಳಿಸಬೇಕು’ ಎಂದರು.

‘ಬೆಳೆ ಸಾಲ ಮಂಜೂರಾದ ಎಲ್ಲ ರೈತರೂ ಪ್ರಸಕ್ತ ಸಾಲಿನಿಂದ ವಿಮಾ ಯೋಜನೆಗೆ ಒಳಪಟ್ಟಿರುತ್ತಾರೆ. ಇಚ್ಛೆ ಇಲ್ಲದಿದ್ದರೆ ಆಯಾ ಬ್ಯಾಂಕ್ ವ್ಯವಸ್ಥಾಪಕರಿಗೆ ಮುಚ್ಚಳಿಕೆ ಬರೆದು ಕೊಡಬೇಕು. ರೈತರು ತಮ್ಮ ವ್ಯಾಪ್ತಿಯ ಬ್ಯಾಂಕ್, ಸಹಕಾರಿ ಸಂಘ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ವಿಮೆ ಕಂತು ಪಾವತಿಸಿ ನೋಂದಣಿ ಮಾಡಬಹುದು’ ಎಂದು ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.

ಉದ್ದೇಶಗಳೇನು?: ‘ಪ್ರಮುಖ ಬೆಳೆಗಳನ್ನು ಗ್ರಾಮ ಪಂಚಾಯ್ತಿ ಮಟ್ಟ ಹಾಗೂ ಉಳಿದ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಅಧಿಸೂಚಿಸಲಾಗಿದೆ. ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ ಹಾಗೂ ಕೀಟ/ರೋಗ ಬಾಧೆಗಳಿಂದ ಅಧಿಸೂಚಿತ ಬೆಳೆ ವಿಫಲವಾದಲ್ಲಿ ವಿಮಾ ರಕ್ಷಣೆ ಸಿಗಲಿದೆ. ಮಳೆ ಅಭಾವ ಅಥವಾ ಇತರ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಘಟಕದಲ್ಲಿ ಶೇ 75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ 25ರಷ್ಟು ಪರಿಹಾರವನ್ನು ಆಯಾ ಸಂಸ್ಥೆಯು ವಿಮೆ ಮಾಡಿಸಿದ ರೈತರಿಗೆ ಇತ್ಯರ್ಥಪಡಿಸುವುದು’ ಎಂದು ಮಾಹಿತಿ ನೀಡಿದರು.

‘ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲೆ ಒಣಗಲು ಬಿಟ್ಟಾಗ (14 ದಿನಗಳೊಳಗೆ) ಚಂಡಮಾರುತ, ಮಳೆಯಿಂದಾಗಿ ಬೆಳೆ ನಾಶವಾದರೆ ವೈಯಕ್ತಿಕವಾಗಿ ವಿಮಾ ಸಂಸ್ಥೆಯು ನಷ್ಟ ನಿರ್ಧರಿಸಿ ಬೆಳೆ ನಷ್ಟ ಪರಿಹಾರ ಇತ್ಯರ್ಥಪಡಿಸುವುದು ಯೋಜನೆಯ ಉದ್ದೇಶವಾಗಿದೆ. ರೈತರು ಅಧಿಸೂಚಿತ ಬೆಳೆಗಳಿಗೆ ವಿಮಾ ರಕ್ಷಣೆ ಒದಗಿಸಬೇಕು’ ಎಂದು ಕೋರಿದರು.

‘ಹೆಸರು (ಮಳೆ ಆಶ್ರಿತ) ಬೆಳೆಗೆ ಜುಲೈ 15 ಹಾಗೂ ಉಳಿದ ಅಧಿಸೂಚಿತ ಬೆಳೆಗಳಿಗೆ ಜುಲೈ 31 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ ಮೊ: 9964064451, 6363921268 ಸಂಪರ್ಕಿಸಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT