ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಕ್ಷೇತ್ರ: ಕ್ರಾಂತಿಕಾರಿ ಬದಲಾವಣೆಗೆ ಸಜ್ಜಾಗಬೇಕು

ವಿಟಿಯುನಿಂದ ಸನ್ಮಾನ ಸ್ವೀಕರಿಸಿದ ಡಾ.ಅಶೋಕ ಶೆಟ್ಟರ್
Last Updated 21 ಜನವರಿ 2021, 12:53 IST
ಅಕ್ಷರ ಗಾತ್ರ

ಬೆಳಗಾವಿ: ‘ನೂತನ ಶಿಕ್ಷಣ ನೀತಿ ಪರಿಣಾಮಕಾರಿಯಾಗಿ ಅನುಷ್ಠಾನ ಆಗಬೇಕಾದರೆ ಶಿಕ್ಷಣ ಕ್ಷೇತ್ರದಲ್ಲಿರುವ ನಾವು ಜಡತ್ವವನ್ನು ಬಿಟ್ಟು ಹೊಸ ಕ್ರಾಂತಿಕಾರಿ ಬದಲಾವಣೆಗೆ ಸಜ್ಜಾಗಬೇಕು. ಸುಧಾರಣೆಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ನಾವೀನ್ಯತೆಯ ಮನೋಭಾವ ಹೊಂದಬೇಕು’ ಎಂದು ಶಿಕ್ಷಣ ತಜ್ಞ ಡಾ.ಅಶೋಕ ಶೆಟ್ಟರ್ ಅಭಿಪ್ರಾಯಪಟ್ಟರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾದ ಹಿನ್ನೆಲೆಯಲ್ಲಿ ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ದಿಂದ ಸನ್ಮಾನ ಸ್ವೀಕಸಿರಿ ಅವರು ಮಾತನಾಡಿದರು.

‘ಸಾಧನೆಗಾಗಿ ವ್ಯಕ್ತಿಗೆ ಕೊಡುವ ಪ್ರಶಸ್ತಿ ವ್ಯಕ್ತಿ ಕೇಂದ್ರಿತವಾದರೆ ಆ ಸಾಧನೆ ಹಲವಾರು ಪಾಲುದಾರರನ್ನು ಪ್ರತಿನಿಧಿಸುತ್ತದೆ. ಏಕೆಂದರೆ ಸಾಧನೆಯನ್ನು ಒಬ್ಬ ವ್ಯಕ್ತಿಯಿಂದ ಅಥವಾ ನಿರ್ವಾತದಲ್ಲಿ ಸಾಧಿಸಲು ಸಾದ್ಯವಿಲ್ಲ. ಸಮಾಜ ಆ ವ್ಯಕ್ತಿಗೆ ನೀಡಿದ ಅವಕಾಶಗಳು ಹಾಗೂ ಆ ಅವಕಾಶಗಳ ಜೊತೆ ಕೂಡಿಕೊಂಡು ಕೆಲಸ ಮಾಡಿದ ಅನೇಕ ಜನರ ಶ್ರಮವೂ ಅದಕ್ಕೆ ಕಾರಣವಾಗಿರುತ್ತದೆ’ ಎಂದು ತಮ್ಮ ಸಾಧನೆಗೆ ಕಾರಣರಾದವರನೆಲ್ಲ ನೆನೆದರು. ‘ಇದರಲ್ಲಿ ವಿಟಿಯು ಕೊಡುಗೆಯೂ ಇದೆ’ ಎಂದು ಸ್ಮರಿಸಿದರು.

ಸನ್ಮಾನಿತರಾದ ಕೆಂಪವ್ವ ಹರಿಜನ ‘ಸಂಗ್ಯಾ-ಬಾಳ್ಯಾ ಬಯಲಾಟ’ದ ಎರಡು ಪದಗಳನ್ನು ಹೇಳಿ ಸಭಿಕರನ್ನು ರಂಜಿಸಿದರು.

ಪಂಡಿತ ಅನಂತ ತೇರದಾಳ ಅವರ ಪರವಾಗಿಸುಪತ್ರಿ ಶ್ರೀ ರಾಧಿಕಾ ದೇಶಪಾಂಡೆ ಸನ್ಮಾನ ಸ್ವೀಕರಿಸಿದರು. ‘ನನ್ನೀ ಸಾಧನೆ ಹಾಗೂ ಸಾಧನೆಗೆ ಸಂದ ಗೌರವಗಳನ್ನು ಗುರು ಪಂಡಿತ ಭೀಮಸೇನ ಜೋಶಿ ಅವರಿಗ ಸಮರ್ಪಿಸುತ್ತೇನೆ’ ಎಂದು ಅನಂತ ಅವರು ವಿಡಿಯೊ ಸಂದೇಶದಲ್ಲಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಕರಿಸಿದ್ದಪ್ಪ, ‘ಒಂದು ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಣ ಕ್ಷೇತ್ರ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತದೆ. ಅದು ತುಂಬಾ ಸೂಕ್ಷ್ಮವಾಗಿರುವುದರಿಂದ ಅದರಲ್ಲಿ ಸ್ವಾವಲಂಬನೆ ಸಾಧಿಸುವುದು ಬಹಳ ಮುಖ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು

ವಿಟಿಯು ಪ್ರಸಾರಂಗದ ಮಾರ್ಗದರ್ಶಕ ಪ್ರೊ.ಸಿ.ಕೆ. ಸುಬ್ಬರಾಯ ಮಾತನಾಡಿದರು.

ಹಣಕಾಸು ಅಧಿಕಾರಿ ಎಂ.ಎ. ಸಪ್ನಾ, ಕಾಲೇಜುಗಳ ಪ್ರಾಚಾರ್ಯರರು ಇದ್ದರು.

ಕುಲಸಚಿವ ಪ್ರೊ.ಆನಂದ ದೇಶಪಾಂಡೆ ಸ್ವಾಗತಿಸಿದರು. ಪ್ರಸಾರಂಗದ ನಿರ್ದೇಶಕ ಪ್ರೊ.ಎಂ.ಎನ್. ಬಿರ್ಜೆ ಪ್ರಾಸ್ತಾವಿಕ ಮಾತನಾಡಿದರು. ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಇ. ರಂಗಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT