ಸೋಮವಾರ, ಏಪ್ರಿಲ್ 6, 2020
19 °C
ಮೀನುಗಾರಿಕೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

ಮೀನು ಬಿತ್ತನೆ: ಕೆರೆಗಳ ಸಮೀಕ್ಷೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಜಿಲ್ಲೆಯ ಎಲ್ಲ ಕೆರೆಗಳ ಸಮೀಕ್ಷೆ ನಡೆಸಿ‌ ಎಲ್ಲೆಲ್ಲಿ ಮೀನು ಬಿತ್ತನೆಗೆ ಅವಕಾಶವಿದೆ ಹಾಗೂ ಅದರಿಂದ ಸಿಗುವ ಆದಾಯದ ಕುರಿತು ಸಮಗ್ರ ವರದಿ ಸಲ್ಲಿಸಬೇಕು’ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

ಇಲ್ಲಿ ಮಂಗಳವಾರ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪ್ರತಿ ವರ್ಷದ ಮೀನು ಉತ್ಪಾದನೆ ಪ್ರಮಾಣ, ಆದಾಯ ಮತ್ತು ಸರ್ಕಾರದ ಸೌಲಭ್ಯಗಳ ವಿತರಣೆ ಬಗ್ಗೆ ಅಧಿಕಾರಿಗಳು ಸಮರ್ಪಕ ಮಾಹಿತಿ ಹೊಂದಿರಬೇಕು. ಹೀಗಿದ್ದಾಗ ಮಾತ್ರ ಲಭ್ಯವಿರುವ ಕೆರೆಗಳನ್ನು ಅರ್ಹ ಮೀನುಗಾರ ಕುಟುಂಬಗಳಿಗೆ ಹಂಚಿಕೆ ಮಾಡಲು ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

ನಿರ್ಲಕ್ಷ್ಯ ವಹಿಸಬೇಡಿ: ‘ಕೆಲಸ ಕಡಿಮೆ ಇರುವ ತಾಲ್ಲೂಕುಗಳ ಅಧಿಕಾರಿಗಳು ಇಡೀ ಜಿಲ್ಲೆ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಸೌಲಭ್ಯ ಹಂಚಿಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಪ್ರತಿ ಅಧಿಕಾರಿಯೂ ಶಾಸಕರನ್ನು ಕಡ್ಡಾಯವಾಗಿ ಭೇಟಿ ಮಾಡಿ ಇಲಾಖೆ ಯೋಜನೆಗಳ ಮಾಹಿತಿ ಕೊಡಬೇಕು. ಸೌಲಭ್ಯ ಹಂಚಿಕೆ ಹಾಗೂ ಗುರಿ ಸಾಧನೆಯಲ್ಲಿ ನಿರ್ಲಕ್ಷ್ಯ ಕಂಡುಬಂದರೆ‌ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘220 ಕೆರೆಗಳಲ್ಲಿ ಮೀನು ಅಭಿವೃದ್ಧಿ ಕಾರ್ಯ ನಡೆದಿದೆ. ಇದರಲ್ಲಿ 84 ಕೆರೆಗಳಲ್ಲಿ ಇಡೀ ವರ್ಷ ನೀರು ಲಭ್ಯವಿರುವುದಿಲ್ಲ. ಮೀನಗಾರರ ಸಹಕಾರ ಸಂಘಗಳಿಂದ ಅರ್ಜಿ ಆಹ್ವಾನಿಸಿ ಸಂಘಕ್ಕೆ ಗರಿಷ್ಠ 3 ಕೆರೆಗಳನ್ನು ಗುತ್ತಿಗೆ ನೀಡಬಹುದು’ ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರು ಎಸ್.ವಿ. ಕುಲಕರ್ಣಿ ತಿಳಿಸಿದರು.

ಅತಿಕ್ರಮಣ ತೆರವಿಗೆ ಸೂಚನೆ: ‘ರಾಯಬಾಗದಲ್ಲಿರುವ ಮೀನುಗಾರಿಕೆ ಇಲಾಖೆಯ 20 ಗುಂಟೆ ಕಚೇರಿ ಆವರಣದಲ್ಲಿ ಕೆಲವರು ಅತಿಕ್ರಮ ಮಾಡಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಡಿ.ಎಂ. ಐಹೊಳೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಹಿಡಕಲ್ ಜಲಾಶಯದಲ್ಲಿ ಇಲಾಖೆಯಿಂದ 9.44 ಲಕ್ಷ, ನವಿಲುತೀರ್ಥದಲ್ಲಿ 4.72 ಲಕ್ಷ ಹಾಗೂ ಮಾರ್ಕಂಡೇಯ ಜಲಾಶಯದಲ್ಲಿ 1.44 ಲಕ್ಷ ಮೀನು ಮರಿಗಳನ್ನು ಬಿಡಲಾಗಿದೆ. ಕೃಷಿ ಹೊಂಡದಲ್ಲೂ ಕೂಡ ಮೀನುಮರಿಗಳನ್ನು ಬಿಡಲು ಸರ್ಕಾರ ನಿರ್ದೇಶನ ನೀಡಿದ್ದು, ಈ ಬಗ್ಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಕುಲಕರ್ಣಿ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ಉಪ ವಿಭಾಗಾಧಿಕಾರಿಗಳಾದ ಶಿವಾನಂದ‌ ಭಜಂತ್ರಿ, ರವೀಂದ್ರ ಕರಲಿಂಗಣ್ಣವರ, ಸವದತ್ತಿ ಯಲ್ಲಮ್ಮ ದೇವಸ್ಥಾನದ ಇಒ ರವಿ ಕೋಟಾರಗಸ್ತಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು