ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಇನ್ನೂ ಆರಂಭವಾಗಿಲ್ಲ ಪ್ರವಾಹ ಪರಿಹಾರ ವಿತರಣೆ

ಸಂಕಷ್ಟಕ್ಕೆ ಸಿಲುಕಿರುವವರಿಗೆ ದೊರೆಯದ ನೆರವು
Last Updated 3 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಉಂಟಾದ ಪ್ರವಾಹ ಮತ್ತು ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸರ್ಕಾರದಿಂದ ಮೊದಲ ಹಂತದ ಪರಿಹಾರ ವಿತರಣೆ ಕಾರ್ಯ ಇನ್ನೂ ಆರಂಭವಾಗಿಲ್ಲ.

ಹೋದ ವರ್ಷದ ಹಿಂದೆಂದೂ ಕಂಡರಿಯದ ರೀತಿಯಲ್ಲಿ ನೆರೆ ಮತ್ತು ಅತಿವೃಷ್ಟಿ ಆಗಿತ್ತು. ಈ ಬಾರಿಯೂ ಜಿಲ್ಲೆಯು ‘ನೆರೆಪೀಡಿತ’ ಎಂಬ ಪಟ್ಟಿಗೆ ಸೇರ್ಪಡೆಯಾಗಿದೆ. ನೂರಾರು ಮಂದಿ ಮನೆಗಳನ್ನು ಕಳೆದುಕೊಂಡಿದ್ದಾರೆ. ಸಾವಿರಾರು ಕೃಷಿಕರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲಾಗಲಿಲ್ಲ. ನೆರೆಯು ಗಾಯದ ಮೇಲೆ ‘ಬರೆ’ ಎಳೆದಿದ್ದು, ಜನರು ಪರಿಹಾರದ ‘ಮುಲಾಮಿಗಾಗಿ’ ಕಾಯುತ್ತಿದ್ದಾರೆ.

ಹೆಚ್ಚಿನ ಮಳೆ

ಜಿಲ್ಲಾಡಳಿತದ ಅಂಕಿ–ಅಂಶದ ಪ್ರಕಾರ, ಜಿಲ್ಲೆಯಲ್ಲಿ ಜುಲೈ 1ರಿಂದ ಆ.31ರವರೆಗೆ 476 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ, ವಾಸ್ತವವಾಗಿ 603 ಮಿ.ಮೀ. ಅಂದರೆ ಶೇ 27ರಷ್ಟು ಜಾಸ್ತಿ ಮಳೆ ಬಿದ್ದಿದೆ. ಆಗಸ್ಟ್‌ನ 4, 5, 6, 7, 16, 17ರಂದು ಈ ಹಂಗಾಮಿನಲ್ಲೇ ಅತಿ ಹೆಚ್ಚು ಮಳೆ ಬಿದ್ದಿದೆ. ಇದರಿಂದ ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳಲ್ಲಿ ಮಹಾಪೂರವೂ ಉಂಟಾಗಿತ್ತು. ಮೂಡಲಗಿ, ಗೋಕಾಕ, ಚಿಕ್ಕೋಡಿ, ರಾಮದುರ್ಗ ಮತ್ತು ನಿಪ್ಪಾಣಿಯಲ್ಲಿ 2,767 ಕುಟುಂಬಗಳ 28,743 ಮಂದಿಯನ್ನು ಸ್ಥಳಾಂತರಿಸಲಾಗಿತ್ತು. ಇವರಲ್ಲಿ 26,272 ಮಂದಿ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದರು. ಇಬ್ಬರು ಮೃತಪಟ್ಟಿದ್ದರು. 11 ದನಗಳು ಸಾವಿಗೀಡಾಗಿದ್ದವು.

ಬೈಲಹೊಂಗಲ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 556 ಸೇರಿದಂತೆ ಜಿಲ್ಲೆಯಲ್ಲಿ 2,588 ಮನೆಗಳಿಗೆ ಹಾನಿಯಾಗಿದೆ. ಇದರಿಂದ ₹ 45.21 ಲಕ್ಷ ನಷ್ಟ ಸಂಭವಿಸಿದೆ. 96,436 ಹೆಕ್ಟೇರ್‌ ಕೃಷಿ ಬೆಳೆಗಳು ಮುಳುಗಿದ್ದರಿಂದ ₹ 1,334.03 ಕೋಟಿ, 3,479.6 ಹೆಕ್ಟೇರ್‌ ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿದ್ದು, ಇದರಿಂದ ₹ 37.59 ಕೋಟಿ ನಷ್ಟವಾಗಿದೆ. ಜೊತೆಗೆ ರಸ್ತೆ, ಸೇತುವೆ, ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಸೌಲಭ್ಯಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು ₹ 1,702.49 ಕೋಟಿ ನಷ್ಟ ಸಂಭವಿಸಿದೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಸಮೀಕ್ಷೆ ಪ್ರಗತಿಯಲ್ಲಿದೆ

ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ಪ್ರಗತಿಯಲ್ಲಿದ್ದು, ನಷ್ಟದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಸೆ.8ರಂದು ಕೇಂದ್ರದ ಅಧಿಕಾರಿಗಳ ತಂಡ ಜಿಲ್ಲೆಯ ವಿವಿಧೆಡೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತ್ತು. ಇದಾಗಿ ತಿಂಗಳು ಸಮೀಪಿಸುತ್ತಿದ್ದರೂ ದೊರೆತಿಲ್ಲದಿರುವುದು ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ‘ಪರಿಹಾರ ವಿತರಣೆ ಇನ್ನೂ ಆರಂಭವಾಗಿಲ್ಲ. ಮನೆ ಹಾಗೂ ಬೆಳೆ ಹಾನಿ ಅನುಭವಿಸಿದ ಸಂತ್ರಸ್ತರಿಗೆ ಪರಿಹಾರ ಒದಗಿಸಲು ನಿಗದಿತ ತಂತ್ರಾಂಶದಲ್ಲಿ ಮಾಹಿತಿ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದು ಪೂರ್ಣಗೊಳ್ಳುತ್ತಿದ್ದಂತೆಯೆ ಪರಿಹಾರ ದೊರೆಯಲಿದೆ. ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ಅವರವರ ಖಾತೆಗೆ ಹಣ ಜಮೆಯಾಗಲಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT