ಬುಧವಾರ, ಜುಲೈ 28, 2021
21 °C
ಜಲಾಶಯಗಳಲ್ಲಿ ಈಗಾಗಲೇ ಶೇ 20ರಿಂದ 40ರಷ್ಟು ನೀರಿದೆ;

ಮಹಾರಾಷ್ಟ್ರದಲ್ಲಿ ಭಾರಿ ಮಳೆ; ಕೃಷ್ಣಾದಲ್ಲಿ ಮತ್ತೆ ಪ್ರವಾಹ ಭೀತಿ

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕಳೆದ ವರ್ಷ ಸುರಿದ ಮಳೆಯ ನೀರು ಇನ್ನೂ ಕೃಷ್ಣಾ ಹಾಗೂ ಉಪನದಿಗಳ ಜಲಾಶಯಗಳಲ್ಲಿರುವ ಸಂದರ್ಭದಲ್ಲಿ ಈಗ ಮಹಾರಾಷ್ಟ್ರದಲ್ಲಿ ಮುಂಗಾರು ಅಬ್ಬರಿಸುತ್ತಿರುವುದು ಆತಂಕ ಮೂಡಿಸಿದೆ. ಇದೇ ರೀತಿ ಮುಂದುವರಿದರೆ ಈ ವರ್ಷ ಬಲುಬೇಗನೇ ಜಲಾಶಯಗಳು ಭರ್ತಿಯಾಗಿ, ಪ್ರವಾಹ ಸೃಷ್ಟಿಯಾಗುವ ಆತಂಕ ಎದುರಾಗಿದೆ.

ಮಹಾರಾಷ್ಟ್ರದ ಮಹಾಬಳೇಶ್ವರ ಘಟ್ಟ ಪ್ರದೇಶದಲ್ಲಿ ಹುಟ್ಟಿ ರಾಜ್ಯದ ಮೂಲಕ ಹರಿಯುವ ಕೃಷ್ಣಾ ನದಿಯ ಮಾರ್ಗ ಮಧ್ಯೆದಲ್ಲಿರುವ ಹಲವು ಜಲಾಶಯಗಳಲ್ಲಿ ಈಗಾಗಲೇ ಶೇ 20ರಿಂದ 40ರಷ್ಟು ನೀರು ತುಂಬಿಕೊಂಡಿದೆ. ಈತನ್ಮಧ್ಯೆ, ನದಿಯ ಜಲಾನಯನ ಪ್ರದೇಶದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯು, ಜಲಾಶಯಗಳನ್ನು ಇನ್ನಷ್ಟು ಬೇಗನೇ ತುಂಬುವ ಆತಂಕ ಮೂಡಿಸಿದೆ.

ಕೃಷ್ಣಾ ನದಿಯ ಪ್ರಮುಖ ಜಲಾಶಯವಾದ ಮಹಾರಾಷ್ಟ್ರದ ಕೊಯ್ನಾ ಜಲಾಶಯ ಶೇ 28.11ರಷ್ಟು ತುಂಬಿಕೊಂಡಿದೆ. 2835.54 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಇರುವ ಜಲಾಶಯದಲ್ಲಿ ಈಗ 797.07 ಟಿಎಂಸಿ ಅಡಿ ನೀರು ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚಿನ ಸಂಗ್ರಹ ಇದಾಗಿದೆ. ಆಗ ಕೇವಲ 203.61 ಟಿಎಂಸಿ ಅಡಿ (ಶೇ 7.81) ನೀರಿತ್ತು.

ಇದೇ ರೀತಿ, ದೂಧ್‌ಗಂಗಾ ಜಲಾಶಯದಲ್ಲಿ 204.84 ಟಿಎಂಸಿ ಅಡಿ (ಶೇ 30.16), ವಾರಣಾ ಜಲಾಶಯದಲ್ಲಿ 161.08 ಟಿಎಂಸಿ ಅಡಿ (ಶೇ 20.67), ರಾಧಾನಗರಿ ಜಲಾಶಯದಲ್ಲಿ 39.43 ಟಿಎಂಸಿ ಅಡಿ (ಶೇ 17.93), ಧೂಮ್‌ ಜಲಾಶಯದಲ್ಲಿ 105.83 ಟಿಎಂಸಿ ಅಡಿ (ಶೇ 31.97) ನೀರು ಇದೆ.

ಕಳೆದ ವರ್ಷ ಜೂನ್‌ ವೇಳೆಯಲ್ಲಿ ಈ ಜಲಾಶಯಗಳಲ್ಲಿ ನೀರಿನ ಸಂಗ್ರಹ ತುಂಬಾ ಕಡಿಮೆ ಇತ್ತು. ಕೇವಲ ಶೇ 0.53ದಿಂದ ಶೇ 13.52ರಷ್ಟು ಮಾತ್ರ ಇತ್ತು. ಮಳೆಯು ಕೂಡ ವಿಳಂಬವಾಗಿ ಆರಂಭವಾಗಿತ್ತು. ಆಗಸ್ಟ್‌ನಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಆದರೆ, ಈಗ ಜಲಾಶಯಗಳಲ್ಲಿ ಈಗಾಗಲೇ ನೀರಿರುವ ಕಾರಣ ಹಾಗೂ ಜೂನ್‌ ಮೊದಲ ವಾರದಿಂದಲೇ ಮಳೆ ಜೋರಾಗಿ ಸುರಿಯುತ್ತಿರುವುದರಿಂದ ಜುಲೈ ತಿಂಗಳಲ್ಲಿ ಪ್ರವಾಹ ಕಾಣಿಸಿಕೊಳ್ಳುವ ಸಾಧ್ಯತೆ ಕಂಡುಬಂದಿದೆ. 

ಜೋರು ಮಳೆ

ದಕ್ಷಿಣ ಮಹಾರಾಷ್ಟ್ರದಲ್ಲಿ ಜೂನ್‌ ಮೊದಲ ವಾರದಿಂದಲೇ ಮಳೆ ಜೋರಾಗಿ ಸುರಿಯುತ್ತಿದೆ. ಕೊಯ್ನಾ ಭಾಗದಲ್ಲಿ 45.5ಸೆಂ.ಮೀ ಮಳೆಯಾಗಿದೆ. ಕಳೆದ ವರ್ಷ ಇಲ್ಲಿ ಕೇವಲ 13.0 ಸೆಂ.ಮೀ ಮಳೆಯಾಗಿತ್ತು. ಸುಮಾರು ಮೂರುವರೆ ಪಟ್ಟು ಹೆಚ್ಚಾಗಿದೆ. ಇದೇ ರೀತಿ, ವಾರಣಾ ಭಾಗದಲ್ಲಿ 34.5 ಸೆಂ.ಮೀ, ದೂಧ್‌ಗಂಗಾ ಪ್ರದೇಶದಲ್ಲಿ 60.8 ಸೆಂ.ಮೀ, ರಾಧಾ ನಗರಿ ಭಾಗದಲ್ಲಿ 70.4 ಸೆಂ.ಮೀ ಮಳೆಯಾಗಿದೆ. ರಾಜ್ಯದಲ್ಲಿ ಕೃಷ್ಣಾ ಹರಿಯುವ ಚಿಕ್ಕೋಡಿಯಲ್ಲಿ 32.2 ಸೆಂ.ಮೀ, ರಾಯಬಾಗದಲ್ಲಿ 16.0 ಸೆಂ.ಮೀ, ಅಥಣಿಯಲ್ಲಿ 5.0 ಸೆಂ.ಮೀ ಮಳೆಯಾಗಿ, ನದಿಗೆ ನೀರಿನ ಹರಿವು ಹೆಚ್ಚಿಸಿದೆ.

ಇದರ ಫಲವಾಗಿ ಈ ಸಲ ಆಲಮಟ್ಟಿ ಜಲಾಶಯಕ್ಕೆ ಬಲುಬೇಗನೇ ನೀರಿನ ಒಳಹರಿವು ಆರಂಭವಾಗಿದೆ. ಕಳೆದ ವರ್ಷ ಜುಲೈ ಮೊದಲ ವಾರದಲ್ಲಿ ಆರಂಭವಾಗಿದ್ದರೆ, ಈ ಸಲ ಜೂನ್‌ ಮೊದಲ ವಾರದಿಂದಲೇ ಆರಂಭವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಜಲಾಶಯ ಬೇಗನೆ ಭರ್ತಿಯಾಗಿ, ಹಿನ್ನೀರಿನಿಂದ ಪ್ರವಾಹ ಉಂಟಾಗುವ ಸಾಧ್ಯತೆಯೂ ಮೂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು