ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಹಾರಿಸುವ ಕನಸಿಗೆ ರೆಕ್ಕೆ- ತರಬೇತಿ ಕೇಂದ್ರ ನಿರ್ಮಾಣ ಕಾಮಗಾರಿಗೆ ವೇಗ

Last Updated 16 ಜನವರಿ 2022, 19:30 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಸಾಂಬ್ರಾದಲ್ಲಿರುವ ವಿಮಾನನಿಲ್ದಾಣದ ಆವರಣದಲ್ಲಿ ವಿಮಾನ ಹಾರಾಟ ತರಬೇತಿ ಕೇಂದ್ರ(ಫ್ಲೈಯಿಂಗ್ ಟ್ರೇನಿಂಗ್ ಸೆಂಟರ್)ದ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಈ ಭಾಗದಲ್ಲಿ ಪೈಲಟ್‌ ಆಗಬೇಕೆಂಬ ಕನಸು ಕಾಣುತ್ತಿರುವವರಿಗೆ ಅವಕಾಶದ ಬಾಗಿಲು ಕೆಲವೇ ತಿಂಗಳಲ್ಲಿ ತೆರೆದುಕೊಳ್ಳುವ ನಿರೀಕ್ಷೆ ಇದೆ.

ಈ ತರಬೇತಿಗಾಗಿ ಇಲ್ಲಿನ ಆಸಕ್ತರು ದೂರದ ಬೆಂಗಳೂರು, ಮೈಸೂರು ಅಥವಾ ಹೊರ ರಾಜ್ಯಗಳಿಗೆ ಹೋಗಬೇಕಾಗಿತ್ತು. ಈ ಕೊರತೆ ನೀಗಿಸುವ ಉದ್ದೇಶದಿಂದ ಇಲ್ಲಿಯೇ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದೆ. ಎಲ್ಲವೂ ನಿರೀಕ್ಷೆಯಂತೆಯೇ ನಡೆದರೆ ಮೇ ಅಂತ್ಯದೊಳಗೆ ಕೇಂದ್ರ ಸಿದ್ಧಗೊಳ್ಳುವ ಸಾಧ್ಯತೆ ಇದೆ. ಸುತ್ತಮುತ್ತಲ ಜಿಲ್ಲೆಯವರಿಗೂ ಅನುಕೂಲ ಆಗಲಿದೆ.

ಕೆಲವೇ ನಗರಗಳಲ್ಲಿ ಒಂದು:ಹಲವು ನಗರಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ಸದಾ ಕ್ರಿಯಾಶೀಲ ವಿಮಾನನಿಲ್ದಾಣವಾಗಿ ಗುರುತಿಸಿಕೊಂಡಿರುವ ಬೆಳಗಾವಿಯಲ್ಲಿ ವಿಮಾನಗಳ ಹಾರಾಟಗೊಂದಿಗೆ, ವಿಮಾನ ಹಾರಾಡಿಸುವ ಬಗ್ಗೆಯೂ ಅರ್ಹ ಯುವಕ–ಯುವತಿಯರಿಗೆ ತರಬೇತಿ ದೊರೆಯುವ ದಿನಗಳು ಕೂಡ ಸಮೀಪಿಸುತ್ತಿವೆ. ದೇಶದ ಕೆಲವೇ ನಗರಗಳಿಗೆ ಇಂತಹ ಅವಕಾಶ ಸಿಕ್ಕಿದೆ. ಅದರಲ್ಲಿ ಬೆಳಗಾವಿಯೂ ಒಂದೆನಿಸಿಕೊಂಡಿದೆ. ಉತ್ತರ ಕರ್ನಾಟಕದಲ್ಲಿ ಕಲಬುರಗಿ ಹಾಗೂ ಹುಬ್ಬಳ್ಳಿಗೂ ಈ ಅವಕಾಶ ಸಿಗುತ್ತಿದೆ.

ಭಾರತೀಯ ವಿಮಾನಯಾನ ಪ್ರಾಧಿಕಾರದಿಂದ ಅನುಮೋದನೆ ದೊರೆತ ನಂತರ, ಟೆಂಡರ್ ಮೊದಲಾದ ಪ್ರಕ್ರಿಯೆಗಳು ತ್ವರಿತವಾಗಿ ನಡೆದಿವೆ. ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ. ಕೆಲವೇ ತಿಂಗಳಲ್ಲಿ ಸಿದ್ಧಗೊಳ್ಳಲಿರುವ ಕೇಂದ್ರವು ಪೈಲಟ್ ಹಾಗೂ ಸಹಾಯಕ ಸಿಬ್ಬಂದಿ ಅಣಿಗೊಳಿಸಲು ನೆರವಾಗಲಿದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವವರಿಗೆ ವಾಣಿಜ್ಯ ವಿಮಾನ ಪರವಾನಗಿ (ಸಿಪಿಎಲ್) ಸಿಗಲಿದೆ ಎಂದು ವಿಮಾನಯಾನ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಒಪ್ಪಿಗೆ ಸೂಚಿಸಿದೆ:ವಿಮಾನಗಳ ದುರಸ್ತಿ, ಸ್ವಚ್ಛತೆ, ನಿರ್ವಹಣೆಗೆ ಸಂಬಂಧಿಸಿದ ಹ್ಯಾಂಗರ್ ಮತ್ತು ವಿಮಾನಗಳ ನಿಲುಗಡೆ ಸ್ಥಳ (ಏಪ್ರಾನ್‌) ನಿರ್ಮಾಣ ಕಾರ್ಯವನ್ನು ಬೆಂಗಳೂರಿನ ಸಂವರ್ಧನೆ ಟೆಕ್ನಾಲಜೀಸ್ ಮತ್ತು ದೆಹಲಿಯ ಮೈಸರಸ್ ರೆಡ್‌ ಬರ್ಡ್‌ ಫ್ಲೈಯಿಂಗ್ ಟ್ರೇನಿಂಗ್ ಅಕಾಡೆಮಿ ಪಡೆದುಕೊಂಡಿವೆ. ವಿಮಾನ ಹಾರಾಟ ಕ್ಷೇತ್ರದಲ್ಲಿ ಅಗತ್ಯ ತರಬೇತಿ ನೀಡುವ ಕೇಂದ್ರ ಸ್ಥಾಪನೆಗೆ 2 ಖಾಸಗಿ ತರಬೇತಿ ಸಂಸ್ಥೆಗಳಿಗೆ ಕೇಂದ್ರ ವಿಮಾನಯಾನ ಸಚಿವಾಲಯವು ಇತ್ತೀಚೆಗೆ ಒಪ್ಪಿಗೆ ಸೂಚಿಸಿತ್ತು ಎಂದು ಮೂಲಗಳು ತಿಳಿಸಿವೆ.

ರನ್‌ ವೇಯಿಂದ ಹ್ಯಾಂಗರ್ ಹಾಗೂ ಏಪ್ರಾನ್‌ಗಳಿಗೆ ಸಂಪರ್ಕ ಕಲ್ಪಿಸುವ ಟ್ಯಾಕ್ಸಿ ವೇ ನಿರ್ಮಾಣ ಕಾರ್ಯವನ್ನು ಪ್ರಾಧಿಕಾರದಿಂದ ಕೈಗೊಳ್ಳಲಾಗಿದೆ. ಒಂದು ಬ್ಯಾಚ್‌ನಲ್ಲಿ 100 ಮಂದಿಗೆ ತರಬೇತಿ ನೀಡುವ ಕೆಲಸ ಇಲ್ಲಿ ನಡೆಯಲಿದೆ. ದ್ವಿತೀಯ ಪಿಯು ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾದವರು ಪ್ರವೇಶ ಪಡೆಯಬಹುದಾಗಿದೆ. ಕೇಂದ್ರ ಸಿದ್ಧಗೊಂಡ ನಂತರ ಪ್ರವೇಶಾತಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದು ಮಾಹಿತಿ ನೀಡಿವೆ.

ಅನುಕೂಲವಾಗಲಿದೆ:‘ಎರಡೂ ಖಾಸಗಿ ಕಂಪನಿಗಳಿಗೆ ತಲಾ 5ಸಾವಿರ ಚ.ಮೀ. ಅಳತೆಯ ಜಾಗವನ್ನು ಪಾರ್ಕಿಂಗ್ ಸ್ಥಳ ನಿರ್ಮಿಸಲು 25 ವರ್ಷಗಳವರೆಗೆ ಕೆಲವು ಷರತ್ತುಗಳ ಅನ್ವಯ ಗುತ್ತಿಗೆ ಮೇಲೆ ನೀಡಲು ವಿಮಾನನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಕ್ರಮ ವಹಿಸಿದ್ದಾರೆ. ಮುಂಬರುವ ದಿನಗಳಲ್ಲಿ ಈ ನಿಟ್ಟಿನಲ್ಲಿ ಅವಶ್ಯವಿರುವ ಎಲ್ಲ ಅಭಿವೃದ್ಧಿ ಕಾಮಗಾರಿಯನ್ನು ಸಹ ಪ್ರಸ್ತಾಪಿತ ಸ್ಥಳದಲ್ಲಿ ಕೈಗೊಳ್ಳಲಾಗುವುದು. ಕೇಂದ್ರದಿಂದ ಆಸಕ್ತ ಯುವಜನರಿಗೆ ತುಂಬಾ ಅನುಕೂಲವಾಗಲಿದೆ’ ಎನ್ನುತ್ತಾರೆ ಸಂಸದೆ ಮಂಗಲಾ ಅಂಗಡಿ.

***

ಕನಸು ಕಂಡಿದ್ದರು

ಪತಿ, ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅವರು ಕೇಂದ್ರ ಪ್ರಾರಂಭವಾಗಬೇಕು ಎಂಬ ಕನಸು ಕಂಡಿದ್ದರು. ಪ್ರಧಾನಿ ಮತ್ತು ಸಚಿವರನ್ನು ಹಲವು ಬಾರಿ ಒತ್ತಾಯಿಸಿದ್ದರು. ಅದರ ಫಲವಾಗಿ ನಿರ್ಮಾಣ ಕಾರ್ಯ ಚುರುಕು ಪಡೆದಿದೆ.

–ಮಂಗಲಾ ಅಂಗಡಿ, ಸಂಸದೆ, ಬೆಳಗಾವಿ

***

ಏಜೆನ್ಸಿಗಳಿಂದ ನಿರ್ವಹಣೆ

ಕೇಂದ್ರವನ್ನು ಟೆಂಡರ್ ಪಡೆದಿರುವ ಖಾಸಗಿ ಏಜೆನ್ಸಿಗಳು ನಿರ್ವಹಿಸಲಿವೆ. ಈ ಭಾಗದಲ್ಲಿ ಪೈಲಟ್ ಆಗಬೇಕು ಎಂಬ ಕನಸು ಕಾಣುತ್ತಿರುವವರಿಗೆ ಅನುಕೂಲವಾಗಲಿದೆ.

–ರಾಜೇಶ್‌ಕುಮಾರ್‌ ಮೌರ್ಯ, ನಿರ್ದೇಶಕ, ಬೆಳಗಾವಿ ವಿಮಾನನಿಲ್ದಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT