ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

32 ತಾಸು ಮುಂದುವರಿದ ಮೆರವಣಿಗೆ

ಹಗಲು– ರಾತ್ರಿ ಒಂದು ಮಾಡಿದ ಸಂಭ್ರಮ, ನಿರಂತರ ಕುಣಿದು ಕುಪ್ಪಳಿಸಿದ ಯುವಜನರು
Published : 19 ಸೆಪ್ಟೆಂಬರ್ 2024, 6:56 IST
Last Updated : 19 ಸೆಪ್ಟೆಂಬರ್ 2024, 6:56 IST
ಫಾಲೋ ಮಾಡಿ
Comments

ಬೆಳಗಾವಿ: ನಗರದಲ್ಲಿ ಮಂಗಳವಾರ ಸಂಜೆ 4ಕ್ಕೆ ಆರಂಭವಾಗಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಬುಧವಾರವೂ ಮುಂದುವರಿಯಿತು. ಕಳೆದ ವರ್ಷ ಕೂಡ ನಿರಂತರ 30 ತಾಸು ಮೆರವಣಿಗೆ ನಡೆದಿತ್ತು. ಈ ವರ್ಷವೂ 32 ತಾಸು ಸಂಭ್ರಮ ಬಿಡುವೇ ಇಲ್ಲದಂತೆ ಮುಂದುವರಿಯಿತು.

ಹಗಲು–ರಾತ್ರಿಯ ವ್ಯತ್ಯಾಸವೇ ತಿಳಿಯದಂತೆ ನಗರದ ಜನ ವೈಭವಕ್ಕೆ ಸಾಕ್ಷಿಯಾದರು. ಮೆರವಣಿಗೆ ಮಾರ್ಗದುದ್ದಕ್ಕೂ ಹಾಡು, ಕುಣಿತ, ಡಿಜೆ, ಡಾಲ್ಬಿಗಳ ಅಬ್ಬರವೋ ಅಬ್ಬರ. ಯುವಕ– ಯುವತಿಯರು ದಣಿವರಿಯೇ ಕುಣಿದರು. ನಗರದ ಅರ್ಧದಷ್ಟು ಜನ ಸಮಾವೇಶಗೊಂಡರು.

ಕಪಿಲೇಶ್ವರ ದೇವಸ್ಥಾನ ಬಳಿಯ ಹೊಸ ಮತ್ತು ಹಳೆಯ ಹೊಂಡ, ಇಂದ್ರಪ್ರಸ್ಥ ನಗರದ ಜಕ್ಕೇರಿಹೊಂಡ, ಅನಗೋಳ ಕೆರೆ, ಕೋಟೆ ಕೆರೆ ಸೇರಿದಂತೆ 8 ಕಡೆಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಆದರೂ ವಿಸರ್ಜನೆಯ ಪಾಳಿಗಾಗಿ ಮೂರ್ತಿಗಳನ್ನು ಕಿಲೋಮೀಟರ್‌ಗಟ್ಟಲೇ ಸಾಲಾಗಿ ನಿಲ್ಲಿಸಲಾಯಿತು.

ರಸ್ತೆಯ ಇಕ್ಕೆಲಗಳಲ್ಲಿ ಇರುವ ಕಟ್ಟಡಗಳಷ್ಟು ಎತ್ತರದ ಮೂರ್ತಿಗಳು ಒಂದೊಂದಾಗಿ ಬರುತ್ತಿದ್ದರೆ ಜನ ಮಂತ್ರಮುಗ್ಧರಾಗಿ ನೋಡಿದರು. ಅಂದದ ಅಲಂಕಾರ, ಝಗಮಗಿಸುವ ದೀಪಾಲಂಕಾರ, ಕಿವಿಗಡಚಿಕ್ಕುವ ಸಂಗೀತಕ್ಕೆ ಯುವ ಹೃದಯಗಳು ಮನಸೋತವು. ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲ ವಯಸ್ಸಿನವರೂ ಈ ವೈಭೋಗ ಸವಿದರು.

ಕೆಲಕಾಲ ಆತಂಕ: ತಡವಾಗಿ ವಿಸರ್ಜನೆಗೆ ತೆರಳುತ್ತಿದ್ದ ಇಲ್ಲಿನ ಚವಾಟ್ ಗಲ್ಲಿಯ ಸಾರ್ವಜನಿಕ ಮಂಡಳಿಯ ಗಣೇಶ ಮೂರ್ತಿಯನ್ನು ಜಿಲ್ಲಾಧಿಕಾರಿ ಕಚೇರಿ ಬಳಿ ಪೊಲೀಸರು ತಡೆದಿದ್ದರಿಂದ ಮಂಗಳವಾರ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

‘ಬಹಳ ತಡವಾಗಿ ಗಣೇಶನ ಮೂರ್ತಿ ಎಬ್ಬಿಸಿದ್ದೀರಿ. ಸಾಂಪ್ರದಾಯಿಕ ಮಾರ್ಗದಲ್ಲಿ ಹೋದರೆ ವಿಸರ್ಜನೆಗೆ ಬಹಳ ತಡವಾಗುತ್ತದೆ. ಹಾಗಾಗಿ ಸಾಂಪ್ರದಾಯಿಕ ಮಾರ್ಗ ಬಿಟ್ಟು, ಬೇರೆ ಮಾರ್ಗದಲ್ಲಿ ಹೋಗಿ’ ಎಂದು ಪೊಲೀಸರು ತಿಳಿಸಿದರು.

ಇದರಿಂದ ಕೆರಳಿದ ಚವಾಟ್ ಗಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಪ್ರತಿಭಟನೆ ಆರಂಭಿಸಿದರು. ‘ಬೇರೆ ಮಾರ್ಗದಲ್ಲಿ ಹೋಗಿ ಮೂರ್ತಿ ವಿಸರ್ಜನೆ ನಾವು ಮಾಡುವುದೇ ಇಲ್ಲ. ಹೋಗುವುದಾದರೆ ಪ್ರತಿವರ್ಷದ ಮಾರ್ಗದಲ್ಲೇ ಹೋಗುತ್ತೇವೆ’ ಎಂದು ಪಟ್ಟು ಹಿಡಿದರು. ಕೆಲಹೊತ್ತಿನ ನಂತರ ಪೊಲೀಸರು, ಸಾಂಪ್ರದಾಯಿಕ ಮಾರ್ಗದಲ್ಲೇ ತೆರಳಲು ಅನುವು ಮಾಡಿಕೊಟ್ಟರು. ನಂತರ ಭಾರಿ ಪೊಲೀಸ್‌ ಸರ್ಪಗಾವಲಿನಲ್ಲೇ ಮೆರವಣಿಗೆ ಸಾಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT