ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೀದಿಗಳಲ್ಲಿ ಗಣೇಶ ಪ್ರತಿಷ್ಠಾಪನೆ; ಕೋಮು ಸೌಹಾರ್ದಕ್ಕೆ ಸಾಕ್ಷಿ ಕುರುಂದವಾಡ

ಗಣೇಶೋತ್ಸವ
Last Updated 17 ಸೆಪ್ಟೆಂಬರ್ 2018, 11:36 IST
ಅಕ್ಷರ ಗಾತ್ರ

ಚಿಕ್ಕೋಡಿ: ಪಕ್ಕದ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನ ಕುರುಂದವಾಡ ಪಟ್ಟಣದ ಮಸೀದಿಗಳಲ್ಲಿ ಗಣೇಶ ಮತ್ತು ಪೀರ್‌ ಪಂಜಾಗಳನ್ನು (ಮುಸ್ಲಿಮರ ದೇವರು) ಅಕ್ಕ–ಪಕ್ಕ ಪ್ರತಿಷ್ಠಾಪಿಸಿ ಗಣೇಶ ಚತುರ್ಥಿ ಮತ್ತು ಮೊಹರಂ ಹಬ್ಬವನ್ನು ಹಿಂದೂ–ಮುಸ್ಲಿಮರು ವಿಜೃಂಭಣೆಯಿಂದ ಆಚರಿಸುವ ಮೂಲಕ ಕೋಮುಸೌಹಾರ್ದ ಸಾರುತ್ತಿದ್ದಾರೆ.

ಆ ನಗರದಲ್ಲಿ ಮರಾಠಾ ಮತ್ತು ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜೈನರು, ಲಿಂಗಾಯತರು ಹಾಗೂ ಪರಿಶಿಷ್ಟರೂ ಇದ್ದಾರೆ. 1982ರಿಂದ ಹಿಂದೂ–ಮುಸ್ಲಿಮರು ಮಸೀದಿಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸುವ ಪರಂಪರೆ ಬೆಳೆಸಿಕೊಂಡು ಬಂದಿದ್ದಾರೆ. ಅಲ್ಲಿನ ಐದು ಮಸೀದಿಗಳಲ್ಲಿ ಪ್ರತಿ ವರ್ಷ ಗಣೇಶ ಹಬ್ಬ ಆಚರಿಸಲಾಗುತ್ತಿದೆ.

ವಿಶೇಷವೆಂದರೆ, ಪ್ರಸಕ್ತ ವರ್ಷ ಗಣೇಶ ಚತುರ್ಥಿ ಮತ್ತು ಮೊಹರಂ ಹಬ್ಬಗಳು ಏಕಕಾಲಕ್ಕೆ ಬಂದಿರುವುದರಿಂದ ಮಸೀದಿಗಳಲ್ಲಿ ಗಣೇಶ ಮೂರ್ತಿ ಮತ್ತು ಪೀರ್‌ ಪಂಜಾಗಳನ್ನು ಅಕ್ಕಪಕ್ಕ ಪ್ರತಿಷ್ಠಾಪಿಸಿ ಉತ್ಸವವನ್ನು ಸಡಗರದಿಂದ ಆಚರಿಸಲಾಗುತ್ತಿದೆ.

ಒಂದಾಗಿ ಪೂಜೆ

ಮಾಳಭಾಗದಲ್ಲಿರುವ ಬೈರಕದಾರ ಮಸೀದಿ, ಗೋಟನಪುರಗಲ್ಲಿಯ ಕುಡೇಖಾನ ಮಸೀದಿ, ಕಾರಖಾನಾ ಪೀರ ಮಸೀದಿ, ಡೆಪನ್ಪೂರ ಮಸೀದಿ ಮತ್ತು ಶೇಳಕೆಗಲ್ಲಿಯ ಸೆಳಕೆಪೀರ್ ಮಸೀದಿಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಪಂತ ಮಂದಿರದಲ್ಲಿ ಗಣೇಶ ಮೂರ್ತಿ ಮತ್ತು ಪೀರ್‌ ಪಂಜಾ ಪ್ರತಿಷ್ಠಾಪಿಸಲಾಗಿದೆ.

ಗಣೇಶನಿಗೆ ಹಿಂದೂ-ಮುಸ್ಲಿಮರು ಒಂದಾಗಿ ಪೂಜೆ- ಪುನಸ್ಕಾರ, ಆರತಿ ಮಾಡುತ್ತಾರೆ. ನೈವೇದ್ಯ ಸಲ್ಲಿಸುತ್ತಾರೆ. ಮುಸ್ಲಿಂ ಮಹಿಳೆಯರು ಗಣೇಶನ ಆರತಿ ಹಾಡುಗಳನ್ನು ನಿರರ್ಗಳವಾಗಿ ಹಾಡುತ್ತಾರೆ. ಪೂಜೆ ಸಂದರ್ಭದಲ್ಲಿ ಗಂಟೆ, ಡೋಲು ಮತ್ತು ತಾಷೆಗಳ ನಿನಾದ ಮೊಳಗುತ್ತದೆ. ಪೀರ್‌ ಪಂಜಾಗೂ ಎಲ್ಲರೂ ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ.

‘ಉತ್ಸವದ ಸಂದರ್ಭದಲ್ಲಿ ಮಸೀದಿಯಲ್ಲಿಯೇ ಸತ್ಯನಾರಾಯಣ ಪೂಜೆ ಸಲ್ಲಿಸಿ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ. ಮಸೀದಿಯಲ್ಲಿ ಗಣೇಶೋತ್ಸವ, ಮೊಹರಂ ಮಾತ್ರವಲ್ಲದೇ ಶಿವಜಯಂತಿ, ಹನುಮ ಜಯಂತಿ ಕಾರ್ಯಕ್ರಮಗಳನ್ನೂ ಸಂಭ್ರಮದಿಂದ ನಡೆಸಲಾಗುತ್ತದೆ’ ಎನ್ನುತ್ತಾರೆ ಸ್ಥಳೀಯರು.

‘ಗಣೇಶ ಉತ್ಸವ ಮಂಡಳಗಳಲ್ಲಿ ಹಿಂದೂ-ಮುಸ್ಲಿಂ ಸದಸ್ಯರಿದ್ದಾರೆ. ಕೆಲವು ಮಂಡಳಗಳಿಗೆ ಮುಸ್ಲಿಂ ಸಮುದಾಯದ ಮುಖಂಡರೇ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದು ಮತ್ತೊಂದು ವಿಶೇಷ. ಗಣೇಶ ಉತ್ಸವದಲ್ಲಿ ಮುಸ್ಲಿಮರು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಮೊಹರಂ ವೇಳೆ ಹಿಂದೂಗಳು ಅಷ್ಟೇ ಶ್ರದ್ಧಾಭಕ್ತಿಯಿಂದ ಭಾಗವಹಿಸುತ್ತಾರೆ. ಈ ವರ್ಷ ಎರಡೂ ಹಬ್ಬಗಳು ಒಟ್ಟಿಗೆ ಬಂದಿರುವುದರಿಂದ ಸಂಭ್ರಮ ಜೋರಾಗಿದೆ’ ಎನ್ನುತ್ತಾರೆ ಮುಖಂಡ ಅಕ್ಷಯ ಆಲಾಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT