ಸೋಮವಾರ, ಜೂನ್ 27, 2022
28 °C
ಸಿಐಡಿಯಿಂದ ಕಿರಣ ವೀರನಗೌಡ ವಶಕ್ಕೆ

ಚಿ‌ನ್ನ ಕಳವು ಪ್ರಕರಣ: ಪ್ರಮುಖ ಆರೋಪಿ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಯಮಕನಮರಡಿ ಪೊಲೀಸ್‌ ಠಾಣೆ ಆವರಣದಲ್ಲಿ ನಿಲ್ಲಿಸಿದ್ದ ಹಾಗೂ ಪೊಲೀಸರ ವಶದಲ್ಲಿದ್ದ ಕಾರಿನಲ್ಲಿದ್ದ ₹ 2.50 ಕೋಟಿ ಮೌಲ್ಯದ 4 ಕೆ.ಜಿ. 900 ಗ್ರಾಂ. ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ (ಕಿಂಗ್‌ಪಿನ್‌) ಎನ್ನಲಾದ ಕಿರಣ ವೀರನಗೌಡ ಎನ್ನುವವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಹುಬ್ಬಳ್ಳಿಗೆ ಭಾನುವಾರ ಬಂದಿದ್ದ ಸಿಐಡಿ ಅಧಿಕಾರಿಗಳ ತಂಡ, ಅಲ್ಲಿ ಕಿರಣ ಅವರನ್ನು ವಶಕ್ಕೆ ಪಡೆದಿದೆ ಮತ್ತು ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿರುವ ಅವರ ತೋಟದ ಮನೆಗೂ ಹೋಗಿ ಮಾಹಿತಿ ಪಡೆದಿದೆ. ಅಲ್ಲಿಂದ ಆರೋಪಿಯನ್ನು ಸೋಮವಾರ ಸಂಕೇಶ್ವರಕ್ಕೆ ಕರೆತಂದು, ಚಿನ್ನ ಕಳವು ಮಾಡಿದ್ದು ಹೇಗೆ ಎನ್ನುವ ಬಗ್ಗೆ ತೀವ್ರ ವಿಚಾರಣೆ ನಡೆಸಿದೆ ಎನ್ನಲಾಗಿದೆ. ಸಿಐಡಿಯು, ಸಂಕೇಶ್ವರ ಠಾಣೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

‘ಪ್ರಕರಣದಲ್ಲಿ ಕೆಲವು ಪೊಲೀಸ್ ಅಧಿಕಾರಿಗಳೇ ಶಾಮೀಲಾಗಿರುವ ಸಂದೇಹ ಇರುವುದರಿಂದ ಸಿಐಡಿ ತನಿಖೆ ಚುರುಕುಗೊಳಿಸಿದೆ. ಕಾರು ಬಿಡಿಸುವ ವಿಷಯದಲ್ಲಿ ಕಿರಣ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾರೆ. ಇದರಲ್ಲಿ ಹಣದ ವ್ಯವಹಾರವೂ ನಡೆದಿದೆ ಎಂಬ ಆರೋಪವೂ ಇರುವುದರಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಮಂಗಳೂರಿನ ತಿಲಕ್ ಮೋನಪ್ಪ ಪೂಜಾರಿ ಎನ್ನುವವರಿಗೆ ಸೇರಿದ ಕಾರನ್ನು ಯಮಕನಮರಡಿ ಠಾಣೆ ಪೊಲೀಸರು ಜ.9ರಂದು ಹತ್ತರಗಿ ಚೆಕ್‌ಪೋಸ್ಟ್‌ನಲ್ಲಿ ತಡೆದು ಪರಿಶೀಲಿಸಿದ್ದರು. ‘ಕಾರಿನ ಒಳಗಡೆ ಮಾಡಿಫೈ ಮಾಡಿದ್ದರಿಂದ ಪ್ರಕರಣ ದಾಖಲಾಗಿತ್ತು. ಕಾರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದರು. ಏ.16ರಂದು ನ್ಯಾಯಾಲಯದ ಆದೇಶದಂತೆ ಪೊಲೀಸರು ಕಾರು ಬಿಡುಗಡೆ ಮಾಡಿದಾಗ, ಏರ್‌ಬ್ಯಾಗ್ ಜಾಗದಲ್ಲಿ ಇಟ್ಟಿದ್ದ ಬಂಗಾರ ಇರಲಿಲ್ಲ ಮತ್ತು ಹಿಂಬದಿಯ ಗಾಜನ್ನು ಬದಲಾವಣೆ ಮಾಡಲಾಗಿತ್ತು. ಚಿನ್ನವನ್ನು ಯಾರೋ ತೆಗೆದುಕೊಂಡಿದ್ದಾರೆ’ ಎಂದು ಮಾಲೀಕರು ದೂರು ನೀಡಿದ್ದರು.

ಮತ್ತೊಂದು ದೂರು: ಈ ನಡುವೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲೊಂದು ದೂರು ದಾಖಲಿಸಿದ್ದಾರೆ. ‘ಜ.10ರಂದು ಆರೋಪಿ ಕಿರಣ ತಾನು ಪೊಲೀಸ್ ಸಿಬ್ಬಂದಿ ಎಂದು ಹೇಳಿ ನಕಲಿ ಗುರುತಿನ ಚೀಟಿ ತೋರಿಸಿ ಹಿರೇಬಾಗೇವಾಡಿ ಟೋಲ್ ನಾಕಾದಲ್ಲಿ ಟೋಲ್ ಫೀ ಪಾವತಿಸದೆ ಹೋಗಿದ್ದಾರೆ. ಈ ಮೂಲಕ ಟೋಲ್ ನಾಕಾಕ್ಕೆ ಮತ್ತು ಸರ್ಕಾರಕ್ಕೆ ಮಾಡಿದ್ದಾರೆ’ ಎಂದು ಸಿಐಡಿ ಡಿವೈಎಸ್ಪಿ ರಾಮಚಂದ್ರ ದೂರು ನೀಡಿದ್ದಾರೆ. ಕಿರಣ ಮತ್ತು ಇತರರು ಆರೋಪಿಗಳು ಎಂದು ದಾಖಲಿಸಲಾಗಿದ್ದು, ಹುಂಡೈ ಕ್ರೆಟಾ ಕಾರನ್ನು ಬಳಸಲಾಗಿತ್ತು ಎಂದು ತಿಳಿಸಲಾಗಿದೆ ಎಂದು ತಿಳಿದುಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು