ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ‘ಬಿಸಿಯೂಟ ಭಾಗ್ಯ’ ವಂಚಿತರಾದ ಮಕ್ಕಳು!

ಗೋದಾಮುಗಳಲ್ಲಿ ಸಂಗ್ರಹವಿರುವ ಅಕ್ಕಿ, ಗೋಧಿ
Last Updated 22 ಅಕ್ಟೋಬರ್ 2020, 20:30 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್–19 ಕಾರಣದಿಂದ ಸರ್ಕಾರಿ ಶಾಲೆಗಳು ಮುಚ್ಚಿದ್ದು, ‘ಮಧ್ಯಾಹ್ನದ ಬಿಸಿಯೂಟ ಯೋಜನೆ’ಯಲ್ಲಿ ಮಕ್ಕಳಿಗೆಂದು ಹಂಚಿಕೆಯಾಗಿರುವ ಆಹಾರ ಧಾನ್ಯಗಳ ವಿತರಣೆಯೂ ಸ್ಥಗಿತಗೊಂಡಿದೆ. ಹೀಗಾಗಿ, ಜಿಲ್ಲೆಗೆ ನೀಡಿರುವ ಅಕ್ಕಿ ಮತ್ತು ಗೋಧಿ ನಾಲ್ಕು ತಿಂಗಳುಗಳಿಂದಲೂ ಗೋದಾಮುಗಳಲ್ಲಿಯೇ ಉಳಿದಿದೆ.

ಲಾಕ್‌ಡೌನ್‌ನಿಂದಾಗಿ ಸರ್ಕಾರಿ ಶಾಲೆಗಳು ಬಂದ್‌ ಆಗಿದ್ದರೂ ಮಕ್ಕಳ ಕಲಿಕೆಗೆ ತೊಂದರೆ ಆಗದಿರಲೆಂದು ಪಠ್ಯಪುಸ್ತಕಗಳನ್ನು ವಿತರಿಸಲಾಗಿತ್ತು. ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ಅವಧಿಯ ಅಂದರೆ ಏ. 4ರಿಂದ ಮೇ 28ರವರೆಗೆ 37 ದಿನಗಳಿಗೆ (ಸಾರ್ವತ್ರಿಕ ರಜಾ ದಿನ ಹೊರತುಪಡಿಸಿ) ಬಿಸಿಯೂಟದ ಬದಲಿಗೆ ಆಹಾರ ಧಾ‌ನ್ಯ ವಿತರಿಸಲು ಸರ್ಕಾರ ಆದೇಶಿಸಿತ್ತು. ಕೆಎಸ್‌ಎಫ್‌ಸಿ ಗೋದಾಮು ಹಾಗೂ ಶಾಲೆಗಳಿಗೆ ಪೂರೈಕೆಯಾಗಿ ಬಳಕೆಯಾಗದೆ ಉಳಿದಿರುವ ಅಡುಗೆ ಎಣ್ಣೆ ಹಾಗೂ ಹಾಲಿನ ಪುಡಿಯನ್ನು ನೀಡುವಂತೆಯೂ ತಿಳಿಸಲಾಗಿತ್ತು.

ರಜಾ ಅವಧಿಯದ್ದು ಕೊಡಲಾಗಿತ್ತು:ಅದರಂತೆ, ಜಿಲ್ಲೆಯಲ್ಲಿ ಫಲಾನುಭವಿಗಳಾಗಿರುವ 6.19 ಲಕ್ಷ ಮಕ್ಕಳಿಗೆ ಆಯಾ ಶಾಲೆಗಳ ಮುಖ್ಯಶಿಕ್ಷಕರ ಮೂಲಕ ರಜಾ ಅವಧಿಯ ಅಕ್ಕಿ ವಿತರಿಸಲಾಗಿತ್ತು. 1ರಿಂದ 5ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ 100 ಗ್ರಾಂ.ನಂತೆ 3.ಕೆ.ಜಿ. 700 ಗ್ರಾಂ. ಅಕ್ಕಿ ಮತ್ತು 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 150 ಗ್ರಾಂ.ನಂತೆ 5 ಕೆ.ಜಿ. 500 ಗ್ರಾಂ. ಅಕ್ಕಿ ನಿಗದಿಪಡಿಸಿ ನೀಡಲಾಗಿತ್ತು. ತೊಗರಿಬೇಳೆ, ಅಡುಗೆ ಎಣ್ಣೆ, ‘ಕ್ಷೀರಭಾಗ್ಯ’ ಯೋಜನೆಯಲ್ಲಿ ಹಾಲಿನ ಪುಡಿಯನ್ನು ಕೊಟ್ಟಿರಲಿಲ್ಲ.

ನಂತರ ‘ವಿದ್ಯಾಗಮ’ ಚಟುವಟಿಕೆಗಳನ್ನು ಆರಂಭಿಸಲಾಗಿತ್ತು. ಶಾಲೆಯ ಬದಲಿಗೆ ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳಿಗೆ ಮಾರ್ಗದರ್ಶನ ಮಾಡುವ ಕಾರ್ಯಕ್ರಮ ನಡೆದತ್ತು. ಅದರೆ, ಅಲ್ಲಲ್ಲಿ ಮಕ್ಕಳಿಗೆ ಕೋವಿಡ್–19 ದೃಢಪಟ್ಟಿದ್ದರಿಂದ ಈ ಕಾರ್ಯಕ್ರಮವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಆದರೆ, ‘ವಿದ್ಯಾಗಮ’ ಜಾರಿಯಲ್ಲಿದ್ದ ಅವಧಿಯಲ್ಲೂ ಆಹಾರ ಧಾನ್ಯ ಮಕ್ಕಳಿಗೆ ಸಿಕ್ಕಿಲ್ಲ. ಜೂನ್‌, ಜುಲೈ, ಆಗಸ್ಟ್‌ ಹಾಗೂ ಸೆಪ್ಟೆಂಬರ್‌ಗೆ ಅನ್ವಯವಾಗುವಂತೆ ಆಹಾರ ಧಾನ್ಯ ಕೊಡುವುದು ಬಾಕಿ ಇದೆ!

ಕಾರಣ ತಿಳಿಯುತ್ತಿಲ್ಲ:‘ಕೋವಿಡ್ ಲಾಕ್‌ಡೌನ್‌ ಸೃಷ್ಟಿಸಿದ ತಲ್ಲಣದಿಂದಾಗಿ ಜನರು ಅದರಲ್ಲೂ ಗ್ರಾಮೀಣ ಜನರು ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ವೇಳೆಯಲ್ಲಿ ಶಾಲೆ ನಡೆಯಲಿ, ಬಿಡಲಿ ಇಲಾಖೆಯಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಿದ್ದರೆ ಮಕ್ಕಳು ಮತ್ತು ಪೋಷಕರಿಗೆ ಅನುಕೂಲ ಆಗುತ್ತಿತ್ತು. ಕಷ್ಟದ ಸಂದರ್ಭದಲ್ಲಿ ಕೈ ಹಿಡಿದಂತೆ ಆಗುತ್ತಿತ್ತು. ಹಂಚಿಕೆಯಾಗಿದ್ದರೂ ವಿತರಣೆಗೆ ಸರ್ಕಾರ ಆದೇಶದಿರುವುದಕ್ಕೆ ಕಾರಣ ತಿಳಿಯುತ್ತಿಲ್ಲ’ ಎಂದು ಮುಖ್ಯಶಿಕ್ಷಕರೊಬ್ಬರು ಪ್ರತಿಕ್ರಿಯಿಸಿದರು.

ಹಾಲು ಒಕ್ಕೂಟಗಳಲ್ಲಿ ಹಾಲಿನ ಪುಡಿ ದಾಸ್ತಾನಿದ್ದರೂ ‘ಕ್ಷೀರಭಾಗ್ಯ’ ಯೋಜನೆಯಲ್ಲಿ ಮಕ್ಕಳಿಗೆ ಹಾಲಿನ ಪುಡಿ ನೀಡಿಲ್ಲ. ಸಮವಸ್ತ್ರ, ಬೈಸಿಕಲ್‌ ಯಾವಾಗ ಕೊಡಲಾಗುತ್ತದೆ ಎನ್ನುವ ಮಾಹಿತಿ ಇಲಾಖೆ ಅಧಿಕಾರಿಗಳ ಬಳಿ ಇಲ್ಲ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲೆಯ ಅಕ್ಷರ ದಾಸೋಹ ಕಾರ್ಯಕ್ರಮ ಶಿಕ್ಷಣಾಧಿಕಾರಿ ಬಸವರಾಜ ಮಿಲ್ಲಾನಟ್ಟಿ, ‘48757.69 ಕ್ವಿಂಟಲ್ ಅಕ್ಕಿ, 9192.29 ಕ್ವಿಂಟಲ್ ಗೋಧಿ ಮತ್ತು 5976 ಕ್ವಿಂಟಲ್ ದ್ವಿದಳಧಾನ್ಯ ದಾಸ್ತಾನು ಗೋದಾಮುಗಳಲ್ಲಿ ಲಭ್ಯವಿದೆ. ಮಕ್ಕಳಿಗೆ ಜೂನ್‌ನಿಂದ ವಿತರಿಸುವುದು ಬಾಕಿ ಇದೆ. ಎಷ್ಟು ದಿವಸದ್ದು, ಎಷ್ಟು ಪ್ರಮಾಣದಲ್ಲಿ ಹಾಗೂ ಏನೇನು ಕೊಡಬೇಕು ಎನ್ನುವ ಬಗ್ಗೆ ಸರ್ಕಾರದಿಂದ ಆದೇಶ ಬಂದ ಕೂಡಲೇ ವಿತರಿಸಲಾಗುವುದು’ ಎಂದು ಮಾಹಿತಿ ನೀಡಿದರು.‌‌‌‌

***

ಗೋದಾಮುಗಳಲ್ಲಿ ಸಂಗ್ರಹವಿರುವ ‘ಬಿಸಿಯೂಟ ಯೋಜನೆ’ಯ ಆಹಾರ ಪದಾರ್ಥ ಹಾಳಾಗದಂತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ
- ಬಸವರಾಜ ಮಿಲ್ಲಾನಟ್ಟಿ,ಅಕ್ಷರ ದಾಸೋಹ ಕಾರ್ಯಕ್ರಮ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT