ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ವೇತನ ಪಾವತಿಗೆ ಆಗ್ರಹ

ಗ್ರಾಮ ‍ಪಂಚಾಯಿತಿ ನೌಕರರ ಸಂಘದಿಂದ ಪ್ರತಿಭಟನೆ
Last Updated 21 ಸೆಪ್ಟೆಂಬರ್ 2020, 11:41 IST
ಅಕ್ಷರ ಗಾತ್ರ

ಬೆಳಗಾವಿ: ಬಾಕಿ ವೇತನ ನೀಡಬೇಕು ಎನ್ನುವುದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಗ್ರಾಮ ‍ಪಂಚಾಯಿತಿ ನೌಕರರ ಸಂಘ (ಸಿಐಟಿಯು) ಜಿಲ್ಲಾ ಸಮಿತಿ ಸದಸ್ಯರು ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

‘2017, 2018, 2019 ಹಾಗೂ ಪ್ರಸಕ್ತ ಸಾಲಿನಲ್ಲೂ ವೇತನ ಬಾಕಿ ಉಳಿದಿದೆ. ಸಿಬ್ಬಂದಿಯ ವೇತನಕ್ಕಾಗಿ ಕೊರತೆ ಬೀಳುವ ₹ 382 ಕೋಟಿಯನ್ನು ಬೇರೆ ಬೇರೆ ಯೋಜನೆಗಳಿಂದ ಕ್ರೋಢೀಕರಿಸಿ ಮಂಜೂರಾತಿ ನೀಡಿ ಆದೇಶ ಹೊರಡಿಸಬೇಕು. ಕಂಪ್ಯೂಟರ್ ಆಪರೇಟರ್‌ಗಳಿಗೆ ಬಡ್ತಿ ನೀಡಲು ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ತಿದ್ದುಪಡಿ ತರಬೇಕು ಹಾಗೂ ಅವರ ಹಿಂದಿನ ಸೇವೆ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

‘ಬಿಲ್‌ ಕಲೆಕ್ಟರ್‌ ಹಾಗೂ ಕ್ಲರ್ಕ್‌ಗಳ ಬಡ್ತಿ ಪ್ರಮಾಣವನ್ನು ಶೇ 70ರಿಂದ ಶೇ 100ಕ್ಕೆ ಹೆಚ್ಚಿಸಬೇಕು. ಕಂಪ್ಯೂಟರ್ ಆಪರೇಟರ್‌ಗಳಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ಕೋಟಾ ನಿಗದಿಪಡಿಸಿ ಅರ್ಹರಾದವರ ಪಟ್ಟಿ ತಯಾರಿಸಬೇಕು. ಎಲ್ಲ ಸಿಬ್ಬಂದಿಗೂ ಪಿಂಚಣಿ ಮಂಜೂರು ಮಾಡಬೇಕು ಹಾಗೂ ವೈದ್ಯಕೀಯ ವೆಚ್ಚ ಕಲ್ಪಿಸಬೇಕು. 1,500 ಕಂಪ್ಯೂಟರ್ ಆಪರೇಟರ್‌ಗಳಿಗೆ ಅನುಮೋದನೆ ನೀಡಬೇಕು’ ಎಂದು ಆಗ್ರಹಿಸಿದರು.

‘ಕನಿಷ್ಠ ವೇತನ ಪಡೆಯುವ ಎಲ್ಲರಿಗೂ ಬಿಪಿಎಲ್‌ ಕಾರ್ಡ್‌ ಉಳಿಸಿಕೊಳ್ಳಲು ಆದಾಯ ಮಿತಿಯನ್ನು ₹ 1.20 ಲಕ್ಷದಿಂದ ₹ 2 ಲಕ್ಷಕ್ಕೆ ಹೆಚ್ಚಿಸಬೇಕು. ಪಂಪ್ ಆಪರೇಟರ್‌ಗಳಿಗೆ ಅರ್ಧ ಸಂಬಳ ನೀಡುವಂತಹ ನಿರ್ಧಾರದಿಂದ ಹಿಂದೆ ಸರಿಯಬೇಕು. 15 ಹಣಕಾಸು ಮೊತ್ತದಲ್ಲಿ ಸಂಬಳಕ್ಕಾಗಿ ಶೇ 10ರಷ್ಟನ್ನು ಮೀಸಲಿಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒಗೆ ಮನವಿ ಸಲ್ಲಿಸಿದರು.

ಅಧ್ಯಕ್ಷ ವಿ.ಪಿ. ಕುಲಕರ್ಣಿ ಹಾಗೂ ಕಾರ್ಯದರ್ಶಿ ಜಿ.ಎಂ. ಜೈನೆಖಾನ್‌ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT