ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೈಕ್ಷಣಿಕ, ವೃತ್ತಿ ಆಯ್ಕೆ; ಮಾರ್ಗದರ್ಶನ ಪಡೆದ ವಿದ್ಯಾರ್ಥಿಗಳು

‘ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗವು ಹಮ್ಮಿಕೊಂಡಿದ್ದ ‘ವಿದ್ಯಾರ್ಥಿ ಪಥ’ ಕಾರ್ಯಾಗಾರ
Last Updated 8 ಫೆಬ್ರುವರಿ 2020, 13:59 IST
ಅಕ್ಷರ ಗಾತ್ರ

ಬೆಳಗಾವಿ:ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆ ಹೇಗಿರುತ್ತೆ... ಯಾವ ರೀತಿ ಉತ್ತರ ಬರೆಯಬೇಕು... ಪರೀಕ್ಷೆಯ ಸಮಯವನ್ನು ಹೇಗೆ ಬಳಸಿಕೊಳ್ಳಬೇಕು... ಗರಿಷ್ಠ ಅಂಕಗಳನ್ನು ಪಡೆದು ಹೇಗೆ... ಮುಂದೆ ಯಾವ ಕೋರ್ಸ್‌ ತೆಗೆದುಕೊಂಡರೆ ಉದ್ಯೋಗ ಸಿಗುತ್ತದೆ...?

ವಿದ್ಯಾರ್ಥಿಗಳ ಇಂತಹ ಹತ್ತಾರು ಪ್ರಶ್ನೆಗಳಿಗೆ ಇಲ್ಲಿನ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಶನಿವಾರ ‘ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗವು ಹಮ್ಮಿಕೊಂಡಿದ್ದ ‘ವಿದ್ಯಾರ್ಥಿ ಪಥ’ ಕಾರ್ಯಾಗಾರವು ಸಾಕ್ಷಿಯಾಯಿತು.

ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ದಾರಿಯ ಬಗ್ಗೆ ಮಾರ್ಗದರ್ಶನ ನೀಡುವುದಕ್ಕಾಗಿ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನಗರದ ಎಲ್ಲ ಪ್ರಮುಖ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರೀಕ್ಷೆ ಹಾಗೂ ವೃತ್ತಿ ಸಂಬಂಧಿತವಾಗಿ ತಮಗಿರುವ ಸಂದೇಹಗಳನ್ನು ಮುಚ್ಚುಮರೆಯಿಲ್ಲದೇ ಕೇಳಿ ಪರಿಹರಿಸಿಕೊಂಡರು.

ಪ್ರಶ್ನೋತ್ತರ

ತಜ್ಞರ ಉಪನ್ಯಾಸ ಮುಗಿದ ನಂತರ ತಮ್ಮ ಸಣ್ಣ ಪ್ರಮಾಣದಲ್ಲಿ ಪ್ರಶ್ನೋತ್ತರ ಅವಧಿಯೂ ನಡೆಯಿತು. ಗಣಿತ ವಿಷಯ ಸಂಪನ್ಮೂಲ ವ್ಯಕ್ತ ಪ್ರಕಾಶ ಮಾಸ್ತಿಹೊಳಿ ಅವರು ಗಣಿತಕ್ಕೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೆ ಎಳೆಎಳೆಯಾಗಿ ಉತ್ತರ ಬಿಡಿಸಿ ಹೇಳಿದರು. ಪ್ರಮೇಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸರಳ ವಿಧಾನಗಳನ್ನು ತಿಳಿಸಿದರು.

ಹಾಸ್ಯ ಚಟಾಕಿ

ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಪ್ರದೀಪ್‌ ಶೆಟ್ಟಿ ಅವರು ಮಾತನಾಡುತ್ತಿದ್ದಾಗ, ಭವಿಷ್ಯದಲ್ಲಿ ಏನಾಗಲು ಬಯಸಿದ್ದೀರಾ? ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ಡಾಕ್ಟರ್‌, ಎಂಜಿನಿಯರ್‌, ಶಿಕ್ಷಕ ಸೇರಿದಂತೆ ವಿವಿಧ ವೃತ್ತಿಗಳನ್ನು ಕೆಲವು ವಿದ್ಯಾರ್ಥಿಗಳು ಹೇಳಿದರು. ಅದರಲ್ಲಿ ಒಬ್ಬ ವಿದ್ಯಾರ್ಥಿ ‘ರಾಜಕಾರಣಿ’ಯಾಗಲು ಬಯಸಿರುವುದಾಗಿ ಹೇಳಿ, ನಗೆಗಡಲಲ್ಲಿ ತೇಲಿಸಿದರು. ‘ರಾಜಕಾರಣಿ’ಯಾಗಬೇಕಾದರೆ ಏನು ಓದಬೇಕು? ಎಂದೂ ಕೇಳಿದರು.

ವಿದ್ಯಾರ್ಥಿಗಳು ಹಾಗೂ ತಜ್ಞರ ನಡುವೆ ಪ್ರಶ್ನೋತ್ತರ, ಸಂವಾದ ನಡೆದು, ಕಾರ್ಯಾಗಾರ ಯಶಸ್ವಿಯಾಯಿತು. ನೂರಾರು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡರು.

ಸನ್ಮಾನ

ಡಾ.ಎಚ್‌.ಎಫ್‌. ಕಟ್ಟೀಮನಿ ಪ್ರೌಢಶಿಕ್ಷಣ ಪ್ರತಿಷ್ಠಾನ, ಧಾರವಾಡದ ಅಪರ ಆಯುಕ್ತರ ಕಚೇರಿ ಹಾಗೂ ಬೆಳಗಾವಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ 2018ರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 625 ಅಂಕಗಳಿಸುವ ಮೂಲಕ ರಾಜ್ಯಕ್ಕೆ ಟಾಪರ್‌ ಆಗಿದ್ದ ಮೊಹಮ್ಮದ್‌ ಕೈಫ್‌, ಕನ್ನಡದಲ್ಲಿ ಶೇ 97.92 ಅಂಕ ಪಡೆದ ಸೃಷ್ಟಿ ಧನಪಾಲ್‌ ಹಾಗೂ ಅತ್ಯುತ್ತಮ ಶಿಕ್ಷಕರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಉತ್ತಮ ಭವಿಷ್ಯಕ್ಕೆ ಅಂಕಗಳೇ ಆಧಾರ

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಡಿಡಿಪಿಐ ಎ.ಬಿ. ಪುಂಡಲೀಕ, ‘ಇಂದಿನ ವ್ಯವಸ್ಥೆಯಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದರೆ, ಪರೀಕ್ಷೆಯಲ್ಲಿ ತೆಗೆದ ಅಂಕಗಳೇ ಆಧಾರವಾಗಿವೆ. ಹಾಗಾಗಿ ವಿದ್ಯಾರ್ಥಿಗಳು ಹೆಚ್ಚು ಗಮನವಿಟ್ಟು ಅಧ್ಯಯನ ಮಾಡಬೇಕು. ಹೆಚ್ಚೆಚ್ಚು ಅಂಕಗಳನ್ನು ಪಡೆದು, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಹಾರೈಸಿದರು.

ಬೆಳಗಾವಿ ನಗರ ಬಿಇಒ ಕೆ.ಡಿ. ಬಡಿಗೇರ್‌, ನಿವೃತ್ತ ಡಿಡಿಪಿಐ ಎಸ್‌.ಬಿ. ಕೊಡ್ಲಿ, ಟಿಪಿಎಂಎಲ್‌ ಸಂಸ್ಥೆಯ ಎಜಿಎಂ ದಿವಾಕರ್‌ ಭಟ್‌, ಇತರರು ಭಾಗವಹಿಸಿದ್ದರು. ಶಾಹಿನ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT