ಸೋಮವಾರ, ಫೆಬ್ರವರಿ 24, 2020
19 °C

ಅಥಣಿ: ಪರಿಹಾರಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಥಣಿ: ‘ಕೃಷ್ಣಾ ನದಿ ಪ್ರವಾಹಕ್ಕೆ ತುತ್ತಾದ ತಾಲ್ಲೂಕಿನ ದರೂರ ಗ್ರಾಮದ 258 ಮನೆಗಳಿಗೆ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ಆ ಗ್ರಾಮದ ನಿವಾಸಿ ಮತ್ತು ಅಂಗವಿಕಲರಾದ ರವೀಂದ್ರ ಅವ್ವಣ್ಣ ಕಲ್ಲೋಳ್ಳಿ ಇಲ್ಲಿನ ತಹಶೀಲ್ದಾರ್‌ ಕಚೇರಿ ಬಳಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದರು.

ಏಕಾಂಗಿಯಾಗಿ ಧರಣಿ ನಡೆಸುತ್ತಿರುವ ಅವರು, ‘ಹೋದ ವರ್ಷದ ಆಗಸ್ಟ್‌ನಲ್ಲಿ ಬಂದ ನೆರೆಯಿಂದಾಗಿ ಇಡೀ ದರೂರ ಗ್ರಾಮ ಮುಳುಗಡೆಯಾಗಿತ್ತು. 258 ಮನೆಗಳು ನೆಲಸಮವಾಗಿದ್ದವು. ಗ್ರಾಮಕ್ಕೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಎಲ್ಲ ಮನೆಗಳಿಗೂ ಪರಿಹಾರ ಕೊಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಆರು ತಿಂಗಳುಗಳಾಗುತ್ತಾ ಬಂದಿದ್ದರೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ, ಸತ್ಯಾಗ್ರಹ ನಡೆಸಬೇಕಾಯಿತು’ ಎಂದು ತಿಳಿಸಿದರು.

‘ಕ್ರಮ ವಹಿಸುವುದಕ್ಕಾಗಿ ತಹಶೀಲ್ದಾರ್‌ ಅವರು ಹತ್ತು ದಿನ ಸಮಯ ಕೇಳಿದ್ದಾರೆ. ಹೀಗಾಗಿ, ಸತ್ಯಾಗ್ರಹ ಹಿಂಪಡೆದಿದ್ದೇನೆ. ಗ್ರಾಮಸ್ಥರಿಗೆ ಪರಿಹಾರ ನೀಡದಿದ್ದಲ್ಲಿ ಮತ್ತೆ ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ರವೀಂದ್ರ ತಿಳಿಸಿದರು.

‘ದರೂರ ಗ್ರಾಮವನ್ನು ಈ ಹಿಂದೆಯೇ ಮುಳುಗಡೆ ಪ್ರದೇಶ ಎಂದು ಘೋಷಣೆ ಮಾಡಿ, ಪರಿಹಾರ ಕೊಡಲಾಗಿದೆ. ಹೀಗಾಗಿ, ಮತ್ತೆ ಪರಿಹಾರ ಕೊಡಲು ಆಗುವುದಿಲ್ಲ. ಒಂದು ವೇಳೆ ಸರ್ಕಾರ ನಿರ್ದೇಶನ ನೀಡಿದರೆ ಪರಿಹಾರ ಕೊಡಲು ಸಾಧ್ಯವಿದೆ’ ಎಂದು ತಹಶೀಲ್ದಾರ್‌ ಎಂ.ಎನ್. ಬಳಿಗಾರ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು