ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಮಳೆ ಅಬ್ಬರ: ನದಿ ತೀರದ ಜನರಲ್ಲಿ ಆತಂಕ

ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಮಳೆ ಶುಕ್ರವಾರವೂ ಮುಂದುವರಿದಿದೆ. ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ತೀರದ ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಅಲ್ಲಿಂದ ಕೃಷ್ಣಾ ಹಾಗೂ ಉಪ ನದಿಗಳಾದ ವೇದಗಂಗಾ, ದೂಧ್‌ಗಂಗಾ ನದಿಗಳಿಗೆ ಬಂದು ಸೇರುವ ನೀರಿನ ಪ್ರಮಾಣದಲ್ಲಿ ಕ್ರಮೇಣ ಏರಿಕೆಯಾಗುತ್ತಿದೆ. ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳೂ ಮೈದುಂಬಿ ಹರಿಯುತ್ತಿವೆ.

ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ, ಮೂಡಲಗಿ ತಾಲ್ಲೂಕಿನಲ್ಲಿ ಹಲವು ಸೇತುವೆಗಳು, ರಸ್ತೆಗಳು ಮುಳುಗಿದ್ದು ಸಂಪರ್ಕ ಕಡಿತಗೊಂಡಿದೆ. ಅಲ್ಲಲ್ಲಿ ಬೆಳೆಗಳು ಜಲಾವೃತವಾಗಿವೆ. ಪರ್ಯಾಯ ಮಾರ್ಗಗಳಿದ್ದು, ಜನರು ಸುತ್ತಿ ಬಳಸಿ ಸಂಚರಿಸಬೇಕಾಗಿದೆ. ಕೋವಿಡ್ ಲಾಕ್ ಡೌನ್ ಜಾರಿಯಲ್ಲಿರುವುದರಿಂದಾಗಿ ಹೆಚ್ಚಿನ ಜನರು ಸಂಚರಿಸುತ್ತಿಲ್ಲ.

ಮಲಪ್ರಭಾ ಜಲಾಶಯಕ್ಕೆ ಒಳಹರಿವು ದ್ವಿಗುಣಗೊಂಡಿದೆ. 2625 ಕ್ಯುಸೆಕ್ ಒಳಹರಿವಿದೆ. ಘಟಪ್ರಭಾ ಜಲಾಶಯಕ್ಕೆ 33,732 ಕ್ಯುಸೆಕ್ ನೀರು ಬಂದು ಸೇರುತ್ತಿದೆ. ಖಾನಾಪುರ ತಾಲ್ಲೂಕಿನಲ್ಲಿ ಮಲಪ್ರಭಾ ನದಿ ದಂಡೆಗೆ ಹೊಂದಿಕೊಂಡಿರುವ ಆಂಜನೇಯ ದೇಗುಲ‌ ಬಹುತೇಕ ಮುಳುಗಿದೆ.

ಬೆಳಗಾವಿ ನಗರದ ಕೆಎಲ್ಇ ಆಸ್ಪತ್ರೆ ಎದುರಿನ ರಸ್ತೆಯಲ್ಲಿ ದೊಡ್ಡ ಮರವೊಂದು ಉರುಳಿ ಬಿದ್ದ ಪರಿಣಾಮ ಎರಡು ಕಾರುಗಳು ಜಖಂಗೊಂಡಿವೆ. ಅವುಗಳನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿತ್ತು. ಹೀಗಾಗಿ ಯಾವುದೇ ಪ್ರಾಣಾಯಾಮ ಸಂಭವಿಸಿಲ್ಲ.

ನಾಳೆ ಬೆಳಗ್ಗೆ ಸಿಎಂ ನೇತೃತ್ವದಲ್ಲಿ ಸಭೆ

ಕೃಷ್ಣಾ ಹಾಗೂ ಭೀಮಾ ನದಿಗಳಲ್ಲಿ ಪ್ರವಾಹ ನಿಯಂತ್ರಣ ಮತ್ತು ನಿರ್ವಹಣೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸುವುದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಜೂನ್ 19ರಂದು ಬೆಳಿಗ್ಗೆ 10.30ಕ್ಕೆ ಸಭೆ ಆಯೋಜಿಸಲಾಗಿದೆ.

ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವರು ಮತ್ತು ಅಧಿಕಾರಿಗಳ ಜೊತೆಗೆ ಮುಖ್ಯಮಂತ್ರಿ ಚರ್ಚಿಸಲಿದ್ದಾರೆ. ಶುಕ್ರವಾರವೇ ಮಹಾರಾಷ್ಟ್ರದ ಅಧಿಕಾರಿಗಳ ತಂಡ ಬೆಂಗಳೂರಿಗೆ ಬರುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಈ ಸಭೆ ನಡೆಯಲಿದೆ. ಈ ಸಭೆಯ ಪೂರ್ವಭಾವಿ ಸಿದ್ಧತೆಗಾಗಿ ಮಹಾರಾಷ್ಟ್ರ ನೀರಾವರಿ ಇಲಾಖೆ ಅಧಿಕಾರಿಗಳ ತಂಡವು ಶುಕ್ರವಾರ ಬೆಂಗಳೂರಿಗೆ ಆಗಮಿಸಲಿದ್ದು, ಸಂಜೆ5ಕ್ಕೆ ವಿಕಾಸಸೌಧದಲ್ಲಿ ರಾಜ್ಯದ ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT