ಶನಿವಾರ, ಸೆಪ್ಟೆಂಬರ್ 25, 2021
29 °C
ಸಂಕೇಶ್ವರ ಪಟ್ಟಣಕ್ಕೆ ಶಾಪವಾದ ಹಿರಣ್ಯಕೇಶಿ ಹೂಳು

ಪ್ರವಾಹ; ಉಪ್ಪು, ಖಾರ,ಅವಲಕ್ಕಿ ನೀರು ಪಾಲಾದವು

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ನಮ್ಮ ಗಲ್ಲಿಯಲ್ಲಿ ಪ್ರತಿ ವರ್ಷವೂ ಹೀಗೆಯೇ ಆಗುತ್ತಿದೆ. ಊಟವೂ ಇಲ್ಲದೆ ಹಾಗೆಯೇ ಕುಳಿತಿದ್ದೆವು. ಮನೆಯಲ್ಲಿದ್ದ ಎಲ್ಲ ಸಾಮಗ್ರಿಗಳೂ ಹಾಳಾಗಿವೆ. ಅಡುಗೆಗೆ ಬೇಕಾಗುವ ಖಾರ, ಉಪ್ಪು, ಅಕ್ಕಿ, ಅವಲಕ್ಕಿ, ತರಕಾರಿ ಮೊದಲಾದವೆಲ್ಲವೂ ನೀರಿನೊಂದಿಗೆ ಕೊಚ್ಚಿ ಹೋಗಿವೆ’.

ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದಲ್ಲಿ ಹಿರಣ್ಯಕೇಶಿ ಮಹಾಪೂರದಿಂದ ಮನೆಗೆ ನೀರು ನುಗ್ಗಿದ್ದರಿಂದ ಆಗಿರುವ ಹಾನಿಯನ್ನು ತಿಳಿಸುವಾಗ ಕಲ್ಪನಾ ಕೇಶವ ಜೋಶಿ ಅವರ ಕಣ್ಣಾಲಿಗಳು ತುಂಬಿಬಂದಿದ್ದವು.

‘ಗುರುವಾರ ರಾತ್ರಿ ಪ್ರವಾಹ ಬಂದಿತು. ಶುಕ್ರವಾರ ರಾತ್ರಿ ಬಹಳ ಹೆಚ್ಚಾಯಿತು. ನಾವು ಮೇಲಿನ ಮಹಡಿಗೆ ಹೋದೆವು. ನೆರೆಯಿಂದಾಗಿ ಬಹಳ ತೊಂದರೆ ಆಗುತ್ತಿದೆ. ಸರ್ಕಾರ ಶಾಶ್ವತ ಪರಿಹಾರ ಕ್ರಮ ಕೈಗೊಂಡು ನಮ್ಮನ್ನು ಆತಂಕದಿಂದ ದೂರ ಮಾಡಬೇಕು’ ಎಂದು ಮನವಿ ಮಾಡಿದರು.

ಸಂಕೇಶ್ವರದ ಮಠ ಗಲ್ಲಿ, ನದಿ ಗಲ್ಲಿ, ಕುಂಬಾರ ಗಲ್ಲಿ, ಹರಗಾಪುರ ಗಲ್ಲಿ, ಹೊಸ ಓಣಿ, ಸುತಾರ ಗಲ್ಲಿ, ಪಿಂಜಾರ ಗಲ್ಲಿಯಲ್ಲಿ 630ಕ್ಕೂ ಹೆಚ್ಚಿನ ಮನೆಗಳಲ್ಲಿ ನೀರು ನುಗ್ಗಿದೆ. ಮಳೆಯ ಪ್ರಮಾಣ ಕೊಂಚ ಕಡಿಮೆಯಾದ್ದರಿಂದ ಕೆಲವು ಮನೆಗಳವರು, ನೀರನ್ನು ಮತ್ತು ಅದರ ಜೊತೆ ಬಂದಿದ್ದ ಕೆಸರನ್ನು ಹೊರಹಾಕಲು ಹರಸಾಹಸಪಡುತ್ತಿದ್ದ ದೃಶ್ಯ ‘ಪ್ರಜಾವಾಣಿ’ ಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿದಾಗ ಕಂಡುಬಂತು.

ಹಳ್ಳದಿಂದಲೂ ತೊಂದರೆ: ಈ ಪಟ್ಟಣ ಒಂದೆಡೆ ಹಿರಣ್ಯಕೇಶಿ ಪ್ರವಾಹದಿಂದ ನಲುಗಿದ್ದರೆ, ಇನ್ನೊಂದೆಡೆ ಪಟ್ಟಣದ ನಡುವೆಯೇ ಇರುವ ಹಳ್ಳವೂ ತೊಂದರೆ ತಂದೊಡ್ಡಿದೆ. ಮಳೆಗಾಲಕ್ಕೆ ಮುನ್ನ ಹೂಳನ್ನು ತೆರವುಗೊಳಿಸದೆ ಇರುವುದು ಪ್ರವಾಹಕ್ಕೆ ಕಾರಣ ಎನ್ನುವುದನ್ನು ಸ್ಥಳೀಯರು ತಿಳಿಸಿದರು. 2019ರಲ್ಲೂ ಸಮಸ್ಯೆ ಅನುಭವಿಸಿದ್ದೆವು. ಆದರೆ, ಆ ಕಹಿ ಅನುಭವದಿಂದಲೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ದೂರಿದರು.

‘2019ರಲ್ಲಿ ಪ್ರವಾಹ ಉಂಟಾದಾಗ, ಶಾಶ್ವತ ಪರಿಹಾರ ಕೋರಿ ಜಿಲ್ಲಾಧಿಕಾರಿ ಮತ್ತು ಶಾಸಕರಿಗೆ ಮನವಿ ಸಲ್ಲಿಸಿದ್ದೆವು. ಅದರಿಂದ ಪ್ರಯೋಜನವೇನೂ ಆಗಿಲ್ಲ. ಮೂರು ವರ್ಷದಿಂದಲೂ ಸಂಕಷ್ಟ ಅನುಭವಿಸುತ್ತಿದ್ದೇವೆ. ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ನೀರು ಬಂದು ಹಾನಿಯಾಗಿದೆ. ಶಾಶ್ವತ ಪರಿಹಾರ ಅನುಕೂಲ ಮಾಡಿಕೊಡಬೇಕು’ ಅಪ್ಪಾಸಾಹೇಬ ಶೆಟ್ಟಿಮನಿ ಒತ್ತಾಯಿಸಿದರು.

‘ನದಿಯಲ್ಲಿ ಪ್ರತಿ ವರ್ಷವೂ ಹೂಳೆತ್ತುವುದಿಲ್ಲ. ಹೋದ ಬಾರಿ ನೆರೆ ಬಂದಾಗ ನಿಜವಾಗಿಯೂ ಮನೆಗಳನ್ನು ಕಳೆದುಕೊಂಡವರಿಗೆ ಪರಿಹಾರ ಸಿಕ್ಕಿಲ್ಲ. ಕೆಲವರಿಗೆ ಮಾತ್ರವೇ ಹಣ ಬಂದಿದೆ. ಈ ಬಾರಿಯೂ ಹಲವು ಮನೆಗಳು ಬಿದ್ದಿವೆ. ಎಲ್ಲ ಸಾಮಗ್ರಿಗಳನ್ನೂ ಕಳೆದುಕೊಂಡಿದ್ದೇವೆ. ಸಮರ್ಪಕ ಪರಿಹಾರ ವಿತರಿಸಬೇಕು’ ಎಂದು ಮಠ ಗಲ್ಲಿಯ ನಿವಾಸಿ ಪ್ರಕಾಶ ಶಂಕರ ಖಾನಾವಡೆ ಕೋರಿದರು.

ಪ್ರವಾಹದ ನೀರಲ್ಲೇ: ‘ಕೋವಿಡ್ ಭೀತಿ ಇರುವುದರಿಂದ ಯಾರೂ ಮನೆಗಳಿಗೆ ಸೇರಿಸಿಕೊಳ್ಳಲು ಬಯಸುವುದಿಲ್ಲ. ನಮ್ಮ ಬದುಕು ಬಹಳ ಅತಂತ್ರವಾಗಿದೆ’ ಎಂದು ಹೇಳಿದರು.

ನೀರು ಕಡಿಮೆಯಾದ ಪ್ರದೇಶದಲ್ಲಿ ಜನರು, ನೆನೆದಿರುವ ಪೀಠೋಪಕರಣಗಳನ್ನು ರಸ್ತೆಗಿಟ್ಟು ಒಣಗಿಸುತ್ತಿದ್ದುದು, ಪ್ರವಾಹದ ಮಲಿನ ನೀರನ್ನೇ ಬಿಂದಿಗೆಗಳಲ್ಲಿ ತಂದು ಮನೆಗಳನ್ನು ಸ್ವಚ್ಛ ಮಾಡಿಕೊಳ್ಳುತ್ತಿದ್ದುದು ಕಂಡುಬಂತು. ಪ್ರವಾಹ ಮತ್ತು ಮಳೆ ಕಡಿಮೆಯಾಗಲಿ ಎನ್ನುವುದು ಅವರ ಪ್ರಾರ್ಥನೆಯಾಗಿದೆ.

ಸಂತ್ರಸ್ತರಿಗೆ ಶಂಕರಲಿಂಗ ಕಾರ್ಯಾಲಯದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಅಲ್ಲಿ 630 ಕುಟುಂಬಗಳಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ. ಹಿರಣ್ಯಕೇಶಿ ಪ್ರವಾಹದಿಂದ ಕಬ್ಬು ಸೇರಿದಂತೆ ನೂರಾರು ಎಕರೆ ಬೆಳೆಗಳು ಜಲಾವೃತವಾಗಿದ್ದು, ಕೊಳೆಯುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು