ಗುರುವಾರ , ಅಕ್ಟೋಬರ್ 22, 2020
27 °C
ಮಹಿಳೆಯರಿಂದ ಶವ ಸಾಗಣೆ, ಅಂತ್ಯಸಂಸ್ಕಾರ

ಬೆಳಗಾವಿ: ಕೋವಿಡ್ ಸೋಂಕಿತರಿಗೆ ‘ಸಹಾಯ ಹಸ್ತ’

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಉದ್ಯಮಿಗಳು, ಗೃಹಿಣಿಯರು ಸೇರಿದಂತೆ ವಿವಿಧ ರಂಗದವರು ಒಳಗೊಂಡಿರುವ ‘ಹೆಲ್ಪ್ ಫಾರ್ ನೀಡಿ’  (ಅವಶ್ಯವಿರುವವರಿಗೆ ಸಹಾಯ) ತಂಡದವರು ಕೋವಿಡ್–19 ಸೋಂಕಿತರು ಮತ್ತು ಅವರ ಕುಟುಂಬದವರಿಗೆ ನೆರವಿನ ಹಸ್ತ ಚಾಚಿದ್ದಾರೆ.

ತಂಡದಲ್ಲಿ 17 ಮಂದಿ ಇದ್ದಾರೆ. ಅವರು ಈವರೆಗೆ 258 ಮಂದಿ ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಹಾಗೂ ಗುಣಮುಖವಾದ ಮೇಲೆ ಆಸ್ಪತ್ರೆಯಿಂದ ಮನೆಗೆ ಸಾಗಿಸಿದ್ದಾರೆ. ಸೋಂಕಿನಿಂದ ಮೃತಪಟ್ಟ 30 ಮಂದಿಯ ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದಾರೆ. ಈ ಪೈಕಿ 7 ಶವಗಳ ಅಂತ್ಯಸಂಸ್ಕಾರವನ್ನು, ತಂಡದ ಮಾಧುರಿ ಜಾಧವ, ಭಾಗ್ಯಶ್ರೀ ಅನಗೋಳಕರ ಮೊದಲಾದವರು ಕೂಡಿ ನೆರವೇರಿಸಿರುವುದು ವಿಶೇಷ. ಈ ಮೂಲಕ ಅವರು ಕೋವಿಡ್ ಭಯದಿಂದ ಕಂಗಾಲಾಗಿದ್ದ ಕುಟುಂಬದವರಿಗೆ ನೆರವಾಗಿದ್ದಾರೆ.

ಪಿಪಿಇ ಕಿಟ್ ಧರಿಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಸಹಾಯಕ್ಕೆ  ಮುಂದಾಗುತ್ತಿದ್ದಾರೆ. ಅವಶ್ಯ ಇರುವವರಿಗೆ ಆಕ್ಸಿಜನ್ ಸಿಲಿಂಡರ್‌ ಕೂಡ ಒದಗಿಸುತ್ತಿದ್ದಾರೆ.

ಸ್ವತಃ ಚಾಲನೆ: ಮಾಧುರಿ ಜಾಧವ್ ಸ್ವತಃ ಆಂಬುಲೆನ್ಸ್ ಚಾಲನೆ ಮಾಡಿಕೊಂಡು ವೃದ್ಧರನ್ನು ಆಸ್ಪತ್ರೆಗೆ ಸಾಗಿಸಿ ಗಮನಸೆಳೆದಿದ್ದಾರೆ.

‘ಅಸಹಾಯಕರಿಗೆ ನೆರವಾಗುವುದು ನಮ್ಮ ಉದ್ದೇಶ. ತಂಡದ ಮೊಬೈಲ್‌ ಫೋನ್‌ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದೇವೆ. ಇದನ್ನು ಆಧರಿಸಿ ಸಾರ್ವಜನಿಕರು ಕರೆ ಮಾಡಿ ಮಾಹಿತಿ ಕೊಡುತ್ತಾರೆ. ತಾಲ್ಲೂಕಿನ ಹಲಗಾ–ಬಸ್ತವಾಡ ಗ್ರಾಮದಲ್ಲಿ ಅನಾಥ ವೃದ್ಧೆ ಮೃತಪಟ್ಟಿರುವ ಕುರಿತು ಸ್ಥಳೀಯರು ತಿಳಿಸಿದ್ದರು. ಮಾಧುರಿ ಜಾಧವ್ ಹಾಗೂ ನಾನು ಹೋಗಿ ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸಿದ್ದೆವು. ಹೀಗೆ ತಂಡದ ಮಹಿಳೆಯರು ಅಂತ್ಯಸಂಸ್ಕಾರ ನೆರವೇರಿಸಿದ್ದೂ ಇದೆ. ಇದೆಲ್ಲವನ್ನೂ ಸೇವೆ ಎಂದು ಉಚಿತವಾಗಿ ಮಾಡುತ್ತಿದ್ದೇವೆ’ ಎಂದು ತಂಡದ ‍ಪ್ರಮುಖ ಹಾಗೂ ಉದ್ಯಮಿ ಸುರೇಂದ್ರ ಅನಗೋಳಕರ  ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ದಾನಿಗಳಿಂದಲೂ ನೆರವು: ‘ನಮಗೆ ಕೆಲವು ದಾನಿಗಳು ನೆರವಾಗುತ್ತಿದ್ದಾರೆ. 2017ರಲ್ಲಿ ರೂಮನ್ ಟೆಕ್ನಾಲಜಿ ಕಂಪನಿಯವರು ಶವ ಸಾಗಿಸುವ ವಾಹನ ಕೊಟ್ಟಿದ್ದರು. ಶಾಸಕ ಅನಿಲ ಬೆನಕೆ ಅವರು ಆಂಬುಲೆನ್ಸ್‌ ಕೊಡುಗೆ ನೀಡಿದ್ದಾರೆ. ಕೆಲವರು ವಾಹನಗಳಿಗೆ ಇಂಧನ ಹಾಕಿಸುತ್ತಿರುತ್ತಾರೆ, ಪಿಪಿಇ ಕಿಟ್ ಕೊಡಿಸಿದ್ದಾರೆ. ಶವ ಸಂಸ್ಕಾರಕ್ಕೆ  ಉರುವಲು ಒದಗಿಸುತ್ತಾರೆ. ಉಳಿದಂತೆ ನಾನೂ ವೈಯಕ್ತಿಕವಾಗಿ ಹಣ ಹಾಕುತ್ತಿರುತ್ತೇನೆ’ ಎಂದು ತಿಳಿಸಿದರು.

‘ಫುಡ್ ಫಾರ್ ನೀಡಿ’ ಕಾರ್ಯಕ್ರಮವನ್ನೂ ತಂಡ ನಡೆಸುತ್ತಿದೆ. 2017ರಿಂದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಿತ್ಯವೂ 150ರಿಂದ 200 ಮಂದಿ ರೋಗಿಗಳಿಗೆ ಉಚಿತವಾಗಿ ಆಹಾರ ಕೊಡುತ್ತಿದ್ದೆವೆ. ಈಗ, ಅದು ಕೋವಿಡ್ ಆಸ್ಪತ್ರೆಯಾಗಿ ಬದಲಾಗಿದ್ದರಿಂದ ನಿಲ್ಲಿಸಿದ್ದೇವೆ. ಪರಿಸ್ಥಿತಿ ಸುಧಾರಿಸಿದ ಬಳಿಕ ಮುಂದುವರಿಸುತ್ತೇವೆ. ‘ಎಜುಕೇಷನ್ ಫಾರ್ ನೀಡಿ’ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ಕೋಚಿಂಗ್‌ ಕೊಡುತ್ತಿದ್ದೇವೆ’ ಎಂದು ಹಂಚಿಕೊಂಡರು. ಸಂಪರ್ಕಕ್ಕೆ ಮೊ:9880089798 ಸಂಪರ್ಕಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು