ಬುಧವಾರ, ಜುಲೈ 28, 2021
23 °C
ಕೊರೊನಾ ಜಾಗೃತಿಯನ್ನೂ ಮೂಡಿಸಿದರು

ತೆಲಸಂಗ ಯುವಕರಿಂದ ಕಾರ್ಮಿಕರಿಗೆ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲಸಂಗ: ಕೋವಿಡ್–19 ಲಾಕ್‍ಡೌನ್ ಆದಾಗಿನಿಂದ ಗ್ರಾಮ ಪಂಚಾಯಿತಿ, ಪೊಲೀಸ್ ಹಾಗೂ ಆರೋಗ್ಯ ಇಲಾಖೆಯವರ ಸಹಯೋಗದಲ್ಲಿ ಇಲ್ಲಿನ ಯುವಕರು ಒಂದೂವರೆ ಸಾವಿರ ಕೂಲಿ ಕಾರ್ಮಿಕರಿಗೆ ಗಡಿಯಲ್ಲಿ ಉಚಿತವಾಗಿ ಊಟೋಪಹಾರ ನೀಡಿ ಮಾನವೀಯತೆ ಮೆರೆದಿದ್ದಾರೆ.

ರಾಜ್ಯದಿಂದ ಗುಳೆ ಹೋಗಿದ್ದ ಸಾವಿರಾರು ಕೂಲಿ ಕಾರ್ಮಿಕರು ಸ್ವಂತ ಗ್ರಾಮಗಳನ್ನು ಸೇರಲು ವಾಹನದಲ್ಲಿ ತೆಲಸಂಗದ ಮೂಲಕ ಹೋಗುವಾಗ, ಗಡಿ ಪ್ರವೇಶಕ್ಕೆ ಕಾನೂನಾತ್ಮಕ ತೊಡಕು ಎದುರಾಗಿ ತೊಂದರೆ ಅನುಭವಿಸಿದರು. ಅವರು ಮಕ್ಕಳೊಂದಿಗೆ ರಸ್ತೆಯಲ್ಲೇ ಉಳಿಯಬೇಕಾಯಿತು. ಅಂಥವರ ನೆರವಿಗೆ ಇಲ್ಲಿನ ಯುವಕರು ನೆರವಾದರು. ಊಟ ಬಡಿಸಿದರು. ಅವರವರ ಗ್ರಾಮಕ್ಕೆ ತಲುಪಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ವಿಷಯ ತಿಳಿಸಿ ವ್ಯವಸ್ಥೆ ಮಾಡಿಕೊಟ್ಟರು. ಕೊರೊನಾ ಸೋಂಕಿನ ಭೀತಿಯ ನಡುವೆಯೂ ರೋಗಿಗಳ ಆರೈಕೆ ಮಾಡಿ ಮೆಚ್ಚುಗೆಗೆ ಪಾತ್ರವಾದರು.

ಯುವಕರನ್ನು ಸೇರಿಸಿ ಸಮನ್ವಯ ಮಾಡಿದ್ದು ಹವ್ಯಾಸಿ ರಂಗಭೂಮಿ ಕಲಾವಿದ ಜಗದೀಶ ಖೊಬ್ರಿ. ಅವರು ಕಿರುಚಿತ್ರ ನಿರ್ಮಿಸಿ ಜಾಗೃತಿಗೆ ಯತ್ನಿಸಿದರು. ಲಾಕ್‍ಡೌನ್‍ನಿಂದ ರಸ್ತೆಯಲ್ಲಿ ತೊಂದರೆಗೆ ಸಿಲುಕಿದವರ ಹಸಿವು ನೀಗಿಸುವ ಕೆಲಸವನ್ನು ಈ ತಂಡ ಮಾಡಿತು.‌

ಜಗದೀಶ ಕೊಬ್ರಿ, ಶಿವಾನಂದ ಬನಗೊಂಡ, ಸಂಗಮೇಶ ಕುಮಠಳ್ಳಿ, ಧರೆಪ್ಪ ಮಾಳಿ, ಸಿದ್ದು ಕೊಟಕಟನೂರ, ಚೆನ್ನಪ್ಪ ದಶಮಾ, ಮುರಗೇಶ ಸಕ್ರಿ, ಜೆ.ಎಂ. ಪಾಟೀಲ, ಸಂತೋಷ ಬಡಿಗೇರ, ದಾನು ಕರ್ಣಿ, ರಸೂಲ ಅತ್ತಾರ, ರಾಜು ಕುಮಠಳ್ಳಿ, ರಾಜು ಹೊನಕಾಂಬಳೆ, ಮಹ್ಮದ ಮುಲ್ಲಾ, ರಾಜು ಸಾಗರ, ಮಹೇಶ ಕುಂಬಾರ, ಪವನ ಶಿಂಧೆ, ಆಶಿಫ್‌ ಮುಜಾವರ, ‌ಮನೆ– ಮನೆಗೆ ತೆರಳಿ ರೊಟ್ಟಿ–ಪಲ್ಯ ಸಂಗ್ರಹಿಸಿ, ಅನ್ನ–ಸಾರು ಮಾಡಿಸಿ ತಂದು ಬಡಿಸುವ ಮೂಲಕ ನೆರವಾದರು. ಪಿಡಿಒ ಬೀರಪ್ಪ ಕಡಗಂಚಿ, ಗ್ರಾಮ ಲೆಕ್ಕಾಧಿಕಾರಿ ಬಿ.ಜಿ. ಇರಕರ ಮತ್ತು ವೈದ್ಯ ಡಾ.ಎಸ್. ಇಂಚಗೇರಿ ಸಹಕಾರ ನೀಡಿದರು.

ಕೊರೊನಾ ಹರಡದಂತೆ ಜನರು ಪಾಲಿಸಬೇಕಾದ ನಿಯಮಗಳು ಮತ್ತು ಮುಖ್ಯ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಸೆಳೆಯಲು ಕಿರುಚಿತ್ರ ಮಾಡಿದ್ದರು. ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಸಹಸ್ರಾರು ಮಂದಿ ನೋಡಿದ್ದಾರೆ. ಹೆಸ್ಕಾಂ ಸಿಬ್ಬಂದಿ, ಪೊಲೀಸರು, ವೈದ್ಯರು, ನರ್ಸ್‍ಗಳ ಸೇವೆಯನ್ನು ಕಿರುಚಿತ್ರದಲ್ಲಿ ತೋರಿಸಲಾಗಿದೆ. ದುಪ್ಪಟ್ಟು ಹಣ ಪಡೆದು ಅಗತ್ಯ ವಸ್ತು ಮಾರುವವರಿಗೆ ಬಿಸಿ ಮುಟ್ಟಿಸುವ ಕೆಲಸವನ್ನು ವಿಡಿಯೊ ಮೂಲಕ ಮಾಡಿದರು. ಕೊರೊನಾ ಯೋಧರ ಮೇಲೆ ಹಲ್ಲೆ ನಡೆಸುವವರನ್ನು ತಿದ್ದುವ ಕಿರುಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದವು.

ವಕೀಲ, ಹವ್ಯಾಸಿ ರಂಗಭೂಮಿ ಕಲಾವಿದ ಅಮೋಘ ಅಭಿನಯದ ‘ರೈತನ ಸಮಸ್ಯೆ ಬಿಚ್ಚುಡು’ ಕಿರುಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂತು.

ಗ್ರಾಮಗಳಿಗೆ ತೆರಳಿ, ಸರ್ಕಾರದ ಸೂಚನೆಗಳನ್ನು ಧ್ವನಿವರ್ಧಕದ ಮೂಲಕ ತಿಳಿಸಿದರು. ಇವರು ಮಾಡಿದ ‌ಆಡಿಯೊಗಳು ಇತರ ಪಂಚಾಯಿತಿಗಳಲ್ಲೂ ಬಳಕೆಯಾಗಿದ್ದು ವಿಶೇಷ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು