ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯವನ್ನು ಜನರ ಮುಂದೆ ಇಟ್ಟಿದ್ದೇನೆ: ಸವದಿ, ತಮ್ಮಣ್ಣವರ ವಿರುದ್ಧ ಸತೀಶ ಕಿಡಿ

Published 7 ಜೂನ್ 2024, 15:17 IST
Last Updated 7 ಜೂನ್ 2024, 15:17 IST
ಅಕ್ಷರ ಗಾತ್ರ

ಬೆಳಗಾವಿ: ‘ನಾನು ಯಾರ ವಿರುದ್ಧವೂ ಹೈಕಮಾಂಡ್‌ಗೆ ದೂರು ನೀಡುತ್ತಿಲ್ಲ. ‍ಪಕ್ಷದಲ್ಲಿ ಇದ್ದುಕೊಂಡೇ ಪಕ್ಷ ವಿರೋಧ ಚಟುವಟಿಕೆ ಮಾಡಿದ್ದನ್ನು ಜನರ ಮುಂದೆ ಇಟ್ಟಿದ್ದೇನೆ ಅಷ್ಟೇ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ಹೈಕಮಾಂಡ್‌ಗೆ ದೂರು ನೀಡಿದರೂ ನಮ್ಮಲ್ಲಿ ಪ್ರಯೋಜನವಿಲ್ಲ. ಯಾರ ಮೇಲೂ ಕ್ರಮ ಆಗುವುದಿಲ್ಲ. ದೂರು ನೀಡಿ ವ್ಯರ್ಥ. ಅಥಣಿ ಹಾಗೂ ಕುಡಚಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಕಡಿಮೆ ಮತಗಳು ಬಂದವು. ಇದರಿಂದ ನಮ್ಮ ಮನಸ್ಸಿಗೆ ನೋವಾಗಿದೆ’ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಅಥಣಿಯಲ್ಲಿ 10 ಸಾವಿರ ‘ಲೀಡ್‌’ ಸಿಕ್ಕಿದ್ದರೂ ಸಮಾಧಾನ ಪಡಬಹುದಿತ್ತು. ಆದರೆ, 7,000 ಮತಗಳು ಬಿಜೆಪಿಗೆ ಹೆಚ್ಚು ಸಿಕ್ಕಿವೆ. ಲಕ್ಷ್ಮಣ ಸವದಿ ಅವರು ವಿಧಾನಸಭೆ ಸ್ಪರ್ಧಿಸಿದ್ದಾಗ 76 ಸಾವಿರ ಮತಗಳ ಮುನ್ನಡೆ ಪಡೆದಿದ್ದರು. ಆದರೆ, ಈಗ ಏಕೆ ಉಲ್ಟಾ ಆಗಿದೆ. ಇದನ್ನು ನೋಡಿದರೆ ಯಾರಿಗಾದರೂ ಅರ್ಥ ಆಗುತ್ತದೆ ಅಲ್ಲವೇ’ ಎಂದರು.

‘ಮತದಾನಕ್ಕೆ ಮೂರು ದಿನ ಇದ್ದಾಗ ನಾನು ಅಥಣಿ, ಕುಡಚಿ ಕ್ಷೇತ್ರದಲ್ಲೇ ಪ್ರವಾಸ ಮಾಡಿದ್ದೇನೆ. ಅವನು (ಶಾಸಕ ಹಮೇಂದ್ರ ತಮ್ಮಣ್ಣವರ) ನನ್ನ ಕೈಗೂ ಸಿಕ್ಕಿಲ್ಲ. ಮೊಬೈಲ್‌ ಸ್ವಿಚ್ ಆಫ್‌ ಮಾಡಿಕೊಂಡು ಮಲಗಿದ್ದ. ಒಂದು ವಿಮಾನಕ್ಕೆ ಇಬ್ಬರು ಪೈಲಟ್‌ ಇರುವಂತೆಯೇ; ನಾವು ಇನ್ನೊಬ್ಬರನ್ನು ಇಟ್ಟೇ ಇಟ್ಟಿರುತ್ತೇವೆ. ಹಾಗಾಗಿ, 22 ಸಾವಿರ ಮತಗಳು ಹೆಚ್ಚುವರಿಯಾಗಿ ನಮಗೆ ಸಿಕ್ಕಿವೆ’ ಎಂದರು.

‘ನಾನು ಇರುವ ಸತ್ಯ ಮಾತಾಡಿದ್ದೇನೆ. ನನ್ನನ್ನು ಯಾರೂ ‘ವಿಲನ್‌’ ಮಾಡಲು ಆಗುವುದಿಲ್ಲ. ಕ್ಷೇತ್ರದ ಜನ ನಮ್ಮೊಂದಿಗೆ ಇದ್ದಾರೆ. ಕಾಂಗ್ರೆಸ್‌ ನಾಯಕರೂ ನಮ್ಮೊಂದಿಗೆ ಇದ್ದಾರೆ’ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಭಜನೆಯಾದರೆ ಮೂರು ಜಿಲ್ಲೆಗಳಾಗಬೇಕು: ‘ಬೆಳಗಾವಿ ವಿಭಜಿಸಿ ಚಿಕ್ಕೋಡಿ, ಗೋಕಾಕ ಕೇಂದ್ರವಾಗಿ ಇನ್ನೆರಡು ಹೊಸ ಜಿಲ್ಲೆಗಳಾಗಬೇಕು. ಬೆಳಗಾವಿ ಜಿಲ್ಲೆ ಪ್ರಾದೇಶಿಕವಾಗಿ ಬಹಳ ದೊಡ್ಡದಿದೆ. ಆಡಳಿತದ ದೃಷ್ಟಿಯಿಂದ ಇದು ಸರಿಯಲ್ಲ. ಜಿಲ್ಲೆ ವಿಭಜನೆ ಆಗಬೇಕು ಎಂದು ನಾನು ಹಿಂದೆಯೂ ಹೇಳಿದ್ದೆ. ಈಗಲೂ ಅಷ್ಟೇ. ಆಡಳಿತ ಸುಗಮವಾಗಲು ಗೋಕಾಕ– ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಮಾಡಬೇಕಿದೆ’ ಎಂದು ಸಚಿವ ಹೇಳಿದರು.

‘ಉಡುಪಿಯಲ್ಲಿ ಕೇವಲ 9 ಲಕ್ಷ ಜನಸಂಖ್ಯೆ ಇದೆ. ಆದರೂ ಪ್ರತ್ಯೇಕ ಜಿಲ್ಲೆಯಾಗಿದೆ. ಬೆಳಗಾವಿ ತಾಲ್ಲೂಕಿನಲ್ಲೇ 10 ಲಕ್ಷ ಜನಸಂಖ್ಯೆ ಇದೆ. ಪ್ರತಿ ಆರು ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ಮೂರು ಜಿಲ್ಲೆಗಳಾಗಿ ಬೆಳಗಾವಿಯನ್ನು ವಿಭಜಿಸಬೇಕು ಎಂಬುದು ನಮ್ಮ ಹಳೆಯ ಒತ್ತಾಯ. ಈಗ ಪ್ರಿಯಾಂಕಾ ಸಂಸದರಾಗಿದ್ದರಿಂದ ಅವರೊಬ್ಬರಿಗೇ ಜವಾಬ್ದಾರಿ ಕೊಡಬೇಕು ಎಂದೇನಲ್ಲ. ಎಲ್ಲರೂ ಸಿದ್ಧರಾಗಬೇಕು’ ಎಂದರು.

ಕಾಂಗ್ರೆಸ್‌ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡರಾದ ಸೈಯದ್‌ ಮನಸೂರ ಇತರರು ಇದ್ದರು.

‘ಸವದಿ ಬಾಂಧವ್ಯದ ಅವಕಾಶ ಕಳಕೊಂಡರು’

‘ಆರಂಭದಲ್ಲಿ ಲಕ್ಷ್ಮಣ ಸವದಿ ಅವರೇ ಬೆಂಬಲ ನೀಡಿದ್ದರು. ಕಣಕ್ಕೆ ನಮ್ಮ ಕುಟುಂಬದವರೇ ಇಳಿಯಬೇಕು ಎಂದು ಹೇಳಿದ್ದರು. ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಇತರ ಕಾಂಗ್ರೆಸ್‌ ಶಾಸಕರು ಮುನ್ನಡೆ ಕೊಡಿಸಿದ್ದಾರೆ. ಅಥಣಿಯಲ್ಲಿ ಶಾಸಕ ಸವದಿ ಮುನ್ನಡೆ ಕೊಟ್ಟಿದ್ದರೆ ಅವರ ನಮ್ಮ ಬಾಂಧವ್ಯ ಚೆನ್ನಾಗಿ ಉಳಿಯತ್ತಿತ್ತು. ಹಿಂದಿನ ಎಷ್ಟೇ ವಿರಸಗಳು ಇದ್ದರೂ ಈಗ ಎಲ್ಲವನ್ನೂ ಮರೆಯಬಹುದಿತ್ತು’ ಎಂದರು.

‘ಗ್ಯಾರಂಟಿ ಯೋಜನೆಗಳ ಕಾರಣದಿಂದ ನಾವು 9 ಕ್ಷೇತ್ರಗಲ್ಲಿ ಗೆದ್ದಿದ್ದೇವೆ. ಇನ್ನೂ 7 ಕ್ಷೇತ್ರಗಳಲ್ಲಿ ಗೆಲ್ಲುವ ಅವಕಾಶವಿತ್ತು. ಸ್ವಲ್ಪದರಲ್ಲೇ ಹಿಂದೆ ಬಿದ್ದಿದ್ದೇವೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು 3 ಲಕ್ಷ ಮತಗಳ ಅಂತರ ಸಾಧಿಸಿದ್ದರು. ಆದರೆ, ಈಗ 1 ಲಕ್ಷದಷ್ಟು ಅಂತರದಲ್ಲಿ ಗೆದ್ದಿದ್ದಾರೆ. ಉಳಿದ 2 ಲಕ್ಷ ಮತಗಳು ಗ್ಯಾರಂಟಿ ಯೋಜನೆಗಳ ಕಾರಣ ಕಾಂಗ್ರೆಸ್‌ಗೆ ಬಂದಿವೆ’ ಎಂದೂ ವಿಶ್ಲೇಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT