ಭಾನುವಾರ, ಮೇ 22, 2022
22 °C

ಜಿಲ್ಲೆಯಾದ್ಯಂತ ಸಂಭ್ರಮದ ಈದ್ ಮಿಲಾದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮುಸ್ಲಿಮರು ಈದ್‌–ಮಿಲಾದ್ ಅನ್ನು ಸಂಭ್ರಮದಿಂದ ಸರಳವಾಗಿ ಮಂಗಳವಾರ ಆಚರಿಸಿದರು. ಕೋವಿಡ್ ಹಿನ್ನೆಲೆಯಲ್ಲಿ ನಗರದಲ್ಲಿ ಮೆರವಣಿಗೆಗೆ ಅವಕಾಶ ಇರಲಿಲ್ಲ.

‘ಕೋವಿಡ್‌ ನಿರ್ಮೂಲನೆಯಾಗಲಿ ಹಾಗೂ ಸಕಲ ಜೀವರಾಶಿಗೆ ಒಳಿತಾಗಲಿ’ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮನೆಗೆ ಸೀಮಿತವಾಗಿ ಧಾರ್ಮಿಕ ಆಚರಣೆಗಳನ್ನು ಕೈಗೊಂಡರು. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ನಗರದ ಹಳೆಯ ಪಿ.ಬಿ. ರಸ್ತೆಯ ಜಿನ್ನಾ ಚೌಕದಲ್ಲಿ ಮುಖಂಡರು ಇಸ್ಲಾಂ ಧರ್ಮದ ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಮಾತನಾಡಿದ ಧರ್ಮಗುರು ಮುಫ್ತಿ ಮಂಜೂರ್ ಅಹಮ್ಮದ್ ರಿಜ್ವಿ, ‘ಕೊರೊನಾ ಸಂಕಟ ಬೇಗ ದೂರವಾಗಿ ಜನಜೀವನ ಸಹಜ ಸ್ಥಿತಿಗೆ ಮರಳಲಿ. ಎಲ್ಲರ ಬಾಳಿನಲ್ಲೂ ಮೊದಲಿನಂತೆ ಭರವಸೆ ಮೂಡಲಿ ಎಂದು ಅಲ್ಲಾಹ್ ದೇವರಲ್ಲಿ ಪ್ರಾರ್ಥಿಸಿದ್ದೇವೆ. ಎಲ್ಲ ಧರ್ಮಗಳು ಸಾಮರಸ್ಯ ಸಂದೇಶವನ್ನೇ ಸಾರುತ್ತವೆ. ಹಾಗಾಗಿ ನಾವೆಲ್ಲರೂ ಸಮಾಜದಲ್ಲಿ ಸಹೋದರತ್ವ ಭಾವದಿಂದ ಬದುಕುಬೇಕು’ ಎಂದು ಸಂದೇಶ ನೀಡಿದರು.

ಡಿಸಿಪಿ ವಿಕ್ರಂ ಅಮಟೆ ಮುಖಂಡರಿಗೆ ಹಬ್ಬದ ಶುಭಾಶಯ ಕೋರಿದರು.

ಮುಖಂಡರಾದ ಅಕ್ಬರ್ ಬಾಗವಾನ್, ಅಜೀಂ ಪಟ್ವೇಗಾರ ಮೊದಲಾದವರು ಇದ್ದರು.

ನಗರದ ಎಲ್ಲ ಮಸೀದಿಗಳಲ್ಲಿ ಎಂದಿನಂತೆ ಐದು ಹೊತ್ತು ಪ್ರಾರ್ಥನೆ (ನಮಾಜ್) ನೆರವೇರಿತು.

ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಕುಡಚಿ ವರದಿ:

ಪಟ್ಟಣದಲ್ಲು ಮುಸ್ಲಿಮರು ಸಡಗರ–ಸಂಭ್ರಮ ಮತ್ತು ಶ್ರದ್ಧಾ ಭಕ್ತಿಯಿಂದ ಈದ್ ಮಿಲಾದ್ ಅನ್ನು ಮಂಗಳವಾರ ಆಚರಿಸಿದರು. ಪಟ್ಟಣ ಹಾಗೂ ಗ್ರಾಮೀಣ ಭಾಗದವರು ಮಾಸಾಹೇಬಾ ದರ್ಗಾದಿಂದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ದೇವರ ನಾಮಸ್ಮರಣೆಯ ಹಾಡುಗಳನ್ನು ಹಾಡಿದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಮತ್ತು ಇತರರಿಗೆ ಸಿಹಿ, ಶರಬತ್, ಚಹಾ ಹಂಚುವ ಕೆಲಸವನ್ನು ಸ್ವಯಂಸೇವಕರು ಮಾಡಿದರು.

ಮುಖಂಡರಾದ ಮಹಮ್ಮದ ಹುಸೇನ ಓಮಿನಿ, ಸುಲ್ತಾನ ವಾಟೆ, ರಾಜು ನಿಡಗುಂದಿ, ಆಶಿಫ ಚಮನಶೇಖ, ಅತೀಫ ಪಟಾಯಿತ, ಅಮೀನ ವಾಟೆ, ಅಬ್ದುಲ ಖಾದರ ರೊಹಿಲೆ, ಡಾ.ಬಾಬಾಜಾನ ಚಮನಶೇಖ, ಮೌಲಾಲಿ ವಾಟೆ ಮೊದಲಾದವರು ಪಾಲ್ಗೊಂಡಿದ್ದರು.

ಮಸೀದಿಗಳನ್ನು ಸಿಂಗರಿಸಲಾಗಿತ್ತು. ಕುಡಚಿ ಠಾಣೆಯ ಪಿಎಸ್ಐ ಶಿವರಾಜ ನೇತೃತ್ವದಲ್ಲಿ ಬಂದೋಬಸ್ತ್‌ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.