ಶನಿವಾರ, ಮೇ 8, 2021
26 °C
ಬಿಮ್ಸ್‌ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ

ಆಮ್ಲಜನಕ ವ್ಯವಸ್ಥೆ ಲಭ್ಯವಾದರೆ ಹಾಸಿಗೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೋವಿಡ್–19 ಪರಿಣಾಮ ಜಾಸ್ತಿ ಇದೆ. ನಮ್ಮಲ್ಲಿ ಈಗ ಲಭ್ಯವಿರುವ ಹಾಸಿಗೆಗಳಲ್ಲಿ ನಿರ್ವಹಣೆ ಮಾಡುತ್ತಿದ್ದೇವೆ’ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್‌) ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಮಾಹಿತಿ ನೀಡಿದರು.

ನಗರದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪ್ರಕರಣಗಳು ಹೆಚ್ಚಾದರೆ 20 ಕಿಲೋ ಲೀಟರ್‌ ಸಂಗ್ರಹ ಸಾಮರ್ಥ್ಯದ ಆಮ್ಲಜನಕ ಘಟಕವನ್ನು ಹೊಸದಾಗಿ ಸ್ಥಾಪಿಸಬೇಕೆಂಬ ಪ್ರಸ್ತಾವವಿದೆ. ಅದು ಸಾಧ್ಯವಾದಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಬಹುದಾಗಿದೆ’ ಎಂದು ತಿಳಿಸಿದರು.

‘ನಮ್ಮಲ್ಲಿ ವೈದ್ಯಕೀಯ ಆಮ್ಲಜನಕ ಕೊರತೆ ಇಲ್ಲ. 13 ಕಿಲೋ ಲೀಟರ್‌ ಸಾಮರ್ಥ್ಯದ ಘಟಕವಿದೆ. ನಿತ್ಯ 2 ಬಾರಿ ಪೂರೈಕೆ ಆಗುತ್ತಿದೆ. ಕೋವಿಡ್‌ಗೆ ನೀಡಿರುವ 300 ಹಾಸಿಗೆಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಇಲ್ಲಿ 800 ಆಮ್ಲಜನಕ ವ್ಯವಸ್ಥೆ ಹೊಂದಿರುವ ಹಾಸಿಗೆಗಳಿವೆ. ಆದರೆ, 300ನ್ನು ಮಾತ್ರವೇ ನೀಡಿದ್ದೇವೆ. ಕೋವಿಡ್‌ನಲ್ಲಿ ಆಮ್ಲಜನಕ ಪೂರೈಕೆ ಹೆಚ್ಚು ಬೇಕಾಗುತ್ತದೆ. ಸಾಮಾನ್ಯ ಶಸ್ತ್ರಚಿಕಿತ್ಸೆ ಅಥವಾ ಕಾಯಿಲೆ ಬಂದಾಗ ಅವರಿಗೆ ನಿಮಿಷಕ್ಕೆ 1ರಿಂದ 2 ಲೀಟರ್‌ ಬೇಕಾಗುತ್ತದೆ. ಆದರೆ, ಕೋವಿಡ್ ಸೋಂಕಿತರಿಗೆ ನಿಮಿಷಕ್ಕೆ ಕನಿಷ್ಠ 8ರಿಂದ 30 ಲೀಟರ್‌ ಬೇಕಾಗುತ್ತದೆ. ಹೀಗಾಗಿ, ಇಲ್ಲಿರುವ ಎಲ್ಲ ಹಾಸಿಗೆಗಳಿಗೂ ಆಮ್ಲಜನಕ ನೀಡುವಷ್ಟು ಸಾಮರ್ಥ್ಯವಿಲ್ಲ’ ಎಂದು ತಿಳಿಸಿದರು.

‘ಹೊಸದಾಗಿ ಆಮ್ಲಜನಕ ಘಟಕ ಸ್ಥಾಪನೆಯಾದರಷ್ಟೆ ಕೋವಿಡ್ ಬಾಧಿತರಿಗೆಂದು ಹಾಸಿಗೆಗಳನ್ನು ಹೆಚ್ಚಿಸಬಹುದಾಗಿದೆ’ ಎಂದರು.

21 ಮಂದಿಗೆ ಆಮ್ಲಜನಕ

ನಗರದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ನೆರವಿಗೆ ಬಿಮ್ಸ್ ವೈದ್ಯರು ಧಾವಿಸಿದ್ದಾರೆ. ಸೋಮವಾರ ಮಧ್ಯರಾತ್ರಿ 21 ಜನರಿಗೆ ಆಮ್ಲಜನಕ ಒದಗಿಸಿ ತುರ್ತು ಚಿಕಿತ್ಸೆ ನೀಡುವ ಮೂಲಕ ಜೀವ ರಕ್ಷಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ಆಮ್ಲಜನಕ ಕೊರತೆ ಕಂಡುಬಂದಿತ್ತು. ಅಲ್ಲಿನವರು ಬಿಮ್ಸ್‌ ನೆರವು ಕೇಳಿದ್ದರು. ಸ್ಪಂದಿಸಿದ ವೈದ್ಯರು, ಆ ರೋಗಿಗಳನ್ನು ಸ್ಥಳಾಂತರಿಸಿಕೊಂಡು ಅಗತ್ಯ ಚಿಕಿತ್ಸೆ ನೀಡುತ್ತಿದೆ.

‘ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಶಕ್ತಿ ಮೀರಿ ಪ್ರಯತ್ನಿಸುತ್ತಿವೆ. ಆದಾಗ್ಯೂ ಕೆಲವೊಮ್ಮೆ ಇಂತಹ ಸನ್ನಿವೇಶಗಳು ಎದುರಾದಾಗ ರೋಗಿಗಳ ಜೀವ ರಕ್ಷಣೆಗಾಗಿ ಪರಸ್ಪರ ಸಹಕಾರದಿಂದ ಕೆಲಸ ಮಾಡುತ್ತಿದ್ದೇವೆ’ ಎಂದು ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ತಿಳಿಸಿದ್ದಾರೆ.

‘ಜಿಲ್ಲಾಧಿಕಾರಿ ಅನುಮೋದನೆ ಪಡೆದುಕೊಂಡು ಆಸ್ಪತ್ರೆಯ ಇನ್ನೊಂದು ಬ್ಲಾಕ್ ಅನ್ನು ಕೂಡ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಒದಗಿಸಲಾಗುವುದು’ ಎಂದು ಪ್ರಕಟಣೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು