ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಣಮಟ್ಟದ ಧಾನ್ಯ ಬೆಳೆಯಲು ಮುಂದಾಗಿ: ಶೋಭಾ ಕರಂದ್ಲಾಜೆ ಸಲಹೆ

ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸಲಹೆ
Published 10 ಮಾರ್ಚ್ 2024, 4:42 IST
Last Updated 10 ಮಾರ್ಚ್ 2024, 4:42 IST
ಅಕ್ಷರ ಗಾತ್ರ

ಮತ್ತಿಕೊಪ್ಪ (ಬೆಳಗಾವಿ ಜಿಲ್ಲೆ): ‘ಯಾವುದನ್ನು ಬೆಳೆದರೆ, ಹೇಗೆ ಬೆಳೆದರೆ ನಮ್ಮ ಆದಾಯ ದ್ವಿಗುಣ ಆಗುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ರೈತರು ಬೆಳೆ ಬೆಳೆಯಬೇಕು. ಇದಕ್ಕಾಗಿಯೇ ಸಾಕಷ್ಟು ತರಬೇತಿ ಕೇಂದ್ರಗಳಿವೆ. ಅವುಗಳ ಸದುಪಯೋಗ ಮಾಡಿಕೊಳ್ಳಬೇಕು’ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸಲಹೆ ನೀಡಿದರು.

ಬೈಲಹೊಂಗಲ ತಾಲ್ಲೂಕಿನ ಮತ್ತಿಕೊಪ್ಪ ವ್ಯಾಪ್ತಿಗೆ ಬರುವ ಕೆಎಲ್‍ಇ ಐಸಿಎಆರ್–ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತ ಭವನ, ಸಿಬ್ಬಂದಿ ವಸತಿಗೃಹ ಮತ್ತು ಸ್ವಯಂ ಚಾಲಿತ ಹನಿ ನೀರಾವರಿ ಘಟಕವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೊರೊನಾದಂಥ ಸಂಕಷ್ಟದಲ್ಲೂ ಆಹಾರ ಸಮಸ್ಯೆ ಆಗದಂತೆ ಬದುಕಿದ ಏಕಮಾತ್ರ ದೇಶವಿದು. 330 ಮಿಲಿಯನ್ ಮೆಟ್ರಿಕ್‌ ಟನ್ ಅಹಾರ ಧಾನ್ಯ, 265 ಮಿಲಿಯನ್ ಮೆಟ್ರಿಕ್ ಟನ್ ತರಕಾರಿ ಬೆಳೆಯುತ್ತೇವೆ. ಆದರೂ ವಿದೇಶಕ್ಕೆ ಸರಬರಾಜು ಮಾಡಲು ಆಗುತ್ತಿಲ್ಲ. ಇದರಿಂದ ರೈತರಿಗೆ ಉತ್ತಮ ದರ ಸಿಗುತ್ತಿಲ್ಲ. ನೈಸರ್ಗಿಕ ಕೃಷಿ ಮೂಲಕ ಗುಣಮಟ್ಟದ ಉತ್ಪಾದನೆಗೆ ರೈತರು ಮುಂದಾಗಬೇಕು’ ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ‘ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ. ಉತ್ತಮ ಬೀಜ, ಬೆಳೆಗಳ ತರಬೇತಿ, ಹೈನುಗಾರಿಕೆಗೆ ತರಬೇತಿ ನೀಡಲಾಗುತ್ತಿದೆ. ಕೃಷಿ ನನ್ನ ನೆಚ್ಚಿನ ಕ್ಷೇತ್ರವಾಗಿದೆ. ಎಲ್ಲ ಕ್ಷೇತ್ರಗಳ ಶಿಕ್ಷಣ ನೀಡುತ್ತಿರುವ ಕೆಎಲ್‌ಇ ಸಂಸ್ಥೆಯನ್ನು ಕೃಷಿಯತ್ತ ಕರೆದು ತರುವುದು ನನ್ನ ಗುರಿಯಾಗಿತ್ತು. ದಶಕಗಳ ಹಿಂದೆ ಈ ಕೇಂದ್ರ ಆರಂಭಿಸಿದ್ದೇನೆ’ ಎಂದರು.

‘ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ 2,005 ಬೀಜ ತಳಿಗಳನ್ನು ಸಂಶೋಧಿಸಲಾಗಿದೆ. ರೈತ ಉದ್ಯಮ ಅಭಿವೃದ್ಧಿಗೆ ₹1ಲಕ್ಷ ಕೋಟಿ ಇಟ್ಟಿದ್ದೇವೆ. ಆದರೆ, ಬಳಕೆ ಮಾಡಿಕೊಳ್ಳುವವರು ಕಡಿಮೆ. ಜಗತ್ತಿನಲ್ಲಿ ತಿನ್ನುವ ಕೈಗಳು ಹೆಚ್ಚಾಗಿವೆ. ಬೇಡಿದ್ದನ್ನು ಕೊಡುವ ಕೈಗಳು ರೈತರದ್ದಾಗಬೇಕು’ ಎಂದೂ ಸಲಹೆ ನೀಡಿದರು.

‘ನಾನು 20 ರೈತರನ್ನು ಇಸ್ರೇಲ್ ದೇಶಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನೀರಾವರಿ ಉಪಯೋಗಗಳನ್ನು ಪ್ರಾತ್ಯಕ್ಷಕೆ ಮೂಲಕ ತೋರಿಸಿದ್ದೇನೆ. ನಾವು ರಾಸಾಯನಿಕ ಬಳಸಿದ್ದರಿಂದ ಆರೋಗ್ಯವೂ ಹಾಳಾಯಿತು, ಭೂಮಿಯೂ ಹಾಳಾಯಿತು’ ಎಂದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಪಿ.ಎಲ್. ಪಾಟೀಲ, ಐಸಿಎಆರ್ ನಿರ್ದೇಶಕರಾದ ಡಾ.ವಿ.ವೆಂಕಟಸುಬ್ರಮಣಿಯನ್, ಕೆಎಲ್‍ಇ ಆಡಳಿತ ಮಂಡಳಿಯ ನಿರ್ದೇಶಕರಾದ ಬಸವರಾಜ ಆರ್. ಪಾಟೀಲ, ಕೆವಿಕೆ ಮುಖ್ಯಸ್ಥರಾದ ಶ್ರೀದೇವಿ ಅಂಗಡಿ, ನಿರ್ದೇಶಕರಾದ ಡಾ.ವಿಶ್ವನಾಥ ಪಾಟೀಲ ಇದ್ದರು.

ಕೃಷಿಗೆ ಸಂಬಂಧಿಸಿದ ಆರು ಗ್ರಂಥಗಳನ್ನು, ಜೈವಿಕ ಪರಿಕರಗಳನ್ನು ಬಿಡುಗಡೆ ಮಾಡಲಾಯಿತು. ಪ್ರಗತಿಪರ ರೈತರಾದ ಮುದಕವಿಯ ಈರವ್ವ ಮಠಪತಿ, ಕುರುಗುಂದದ ಮಹಾದೇವಿ ಅಪ್ಪಯ್ಯನವರಮಠ, ವಸುಂಡಿಯ ಪ್ರಶಾಂತ ನೇಗೂರ, ಬೈಲಹೊಂಗಲದ ಓಂಪ್ರಕಾಶ ಪಾಟೀಲ, ಹಿರೇಕೊಪ್ಪದ ಅಣ್ಣೇಶಗೌಡ ಪಾಟೀಲ, ಸುನ್ನಾಳದ ಅಜ್ಜಪ್ಪ ಕುಲಗೋಡ ಅವರನ್ನು ಸನ್ಮಾನಿಸಲಾಯಿತು.

₹1.5 ಕೋಟಿಯಲ್ಲಿ ರೈತಭವನ ನಿರ್ಮಾಣ 50 ರೈತರು, ರೈತ ಕುಟುಂಬಗಳಿಗೆ ವಾಸಕ್ಕೆ ಅವಕಾಶ ₹1.5 ಕೋಟಿಯಲ್ಲಿ ಹನಿ ನೀರಾವರಿ ಘಟಕ ಸಿದ್ಧ

ರೈತರ ಹೆಣ್ಣುಮಕ್ಕಳೇ ಈಗ ರೈತರನ್ನು ಮದುವೆಯಾಗಲು ಒಪ್ಪುತ್ತಿಲ್ಲ. ಬೇರೆಯವರು ಹೇಗೆ ಹೆಣ್ಣು ಕೊಡುತ್ತಾರೆ. ಕೃಷಿಯನ್ನೂ ಲಾಭದಾಯಕ ಮಾಡಿದರೆ ಈ ಸಮಸ್ಯೆ ನೀಗಲಿದೆ

-ಪ್ರಭಾಕರ ಕೋರೆ ಕಾರ್ಯಾಧ್ಯಕ್ಷ ಕೆಎಲ್‌ಇ ಸಂಸ್ಥೆ

ರೈತರು ಸಮಗ್ರ ಕೃಷಿ ಮಾಡಿದರೆ ಕೃಷಿಯನ್ನೂ ಉದ್ಯಮ ಮಾಡಲು ಸಾಧ್ಯವಿದೆ. ಕೃಷಿ ವಿಶ್ವವಿದ್ಯಾಲಯದಿಂದ ಸಾಕಷ್ಟು ಅನುಕೂಲಗಳಿವೆ. ಬಳಸಿಕೊಳ್ಳಿ

-ಪಿ.ಎಲ್. ಪಾಟೀಲ ಕುಲಪತಿ ಕೃಷಿ ವಿ.ವಿ ಧಾರವಾಡ

‘ಕೃಷಿ ಬೇಡಿಕೆ ಸಲ್ಲಿಸದ ಸಿ.ಎಸ್‌’

‘ಕೃಷಿ ಉತ್ಪಾದನೆ ಹೆಚ್ಚಳ ಆಗಬೇಕಾದರೆ ಯಾವ ಜಿಲ್ಲೆಯ ರೈತರಿಗೆ ಏನು ಬೇಕು ಎಂಬ ಬೇಡಿಕೆ ಸಲ್ಲಿಸಬೇಕು. ಆದರೆ ಕರ್ನಾಟಕ ಸೇರಿ ಕೆಲ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಯಾವ ಜಿಲ್ಲೆಗೆ ಏನು ಬೇಕು ಎಂಬ ಬೇಡಿಕೆ ನೀಡಲ್ಲ’ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ‘ಆಹಾರ ಉತ್ಪನ್ನಗಳಲ್ಲಿ ಎಷ್ಟು ಪ್ರಮಾಣ ರಾಸಾಯನಿಕ ಅಂಶ ಇದೆ ಎಂಬುದನ್ನು ಆಧರಿಸಿ ವಿದೇಶಗಳಿಂದ ಬೇಡಿಕೆ ಬರುತ್ತದೆ. ಆದರೆ ಭಾರತದಲ್ಲಿ ಉತ್ಪಾದನೆಯಾಗುವ ಬಹುಪಾಲು ಕೃಷಿ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ತಿರಸ್ಕೃತಗೊಳ್ಳುತ್ತವೆ. ಇದು ದೇಶಕ್ಕೂ ಅವಮಾನ. ಇದನ್ನು ಬದಲಾಯಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಆಚರಿಸಿದರು. ನಮ್ಮಲ್ಲಿ ಬೆಳೆಯುವ ಗುಣಮಟ್ಟದ ಸಿರಿಧಾನ್ಯಗಳನ್ನು ಹೆಚ್ಚು ಉತ್ಪಾದಿಸಿ ವಿದೇಶಿ ಮಾರುಕಟ್ಟೆಗಳ ಮೇಲೆ ಸ್ವಾಮ್ಯ ಸಾಧಿಸಲು ಸಾಧ್ಯವಿದೆ ಎಂಬುದು ಅವರ ದೂರದೃಷ್ಟಿ. ಇಂಥ ಬೀಜೋತ್ಪಾದನೆಗೆ ರೈತರು ಮುಂದೆ ಬರಬೇಕು’ ಎಂದರು. ‘ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕೆಂದರೆ ಇ–ಮಾರುಕಟ್ಟೆ ಅಭಿವೃದ್ಧಿಪಡಿಸಬೇಕು. ಖಾದ್ಯತೈಲ ಎಥೆನಾಲ್‌ ಮುಂತಾದವುಗಳಿಗೆ ಸಾಕಷ್ಟು ಬೇಡಿಕೆ ಇದೆ. ಗುಣಮಟ್ಟದ ಉತ್ಪಾದನೆಗೆ ರೈತರು ಮುಂದಾಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT